ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಹಣ ಸಮರ್ಪಕವಾಗಿ ಬಳಸಿ : ಮೈಸೂರು ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ನಿರ್ದೇಶನ

 ಮೈಸೂರು ನಗರದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ನಡೆಸಿದರು. ಯುಕೇಶ್ ಕುಮಾರ್, ಡಾ. ಹರ್ಷ ಪ್ರಿಯಂವದ, ಸಿ.ಮಲ್ಲಿಕ್, ಎಲ್. ನಾಗೇಶ್, ಎಂ.ಕೆ. ಸವಿತಾ ಹಾಗೂ ಇತರರು ಇದ್ದರು.
ಮೈಸೂರು ನಗರದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ನಡೆಸಿದರು. ಯುಕೇಶ್ ಕುಮಾರ್, ಡಾ. ಹರ್ಷ ಪ್ರಿಯಂವದ, ಸಿ.ಮಲ್ಲಿಕ್, ಎಲ್. ನಾಗೇಶ್, ಎಂ.ಕೆ. ಸವಿತಾ ಹಾಗೂ ಇತರರು ಇದ್ದರು.
Published on
ಮೈಸೂರು: ನಗರಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಉಳಿಕೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಮಗ್ರ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಸೂಚನೆ ನೀಡಿದರು.
ನಗರದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಸತಿ ಶಾಲೆಗಳಿಗೆ ಮೂಲ ಸೌಲಭ್ಯಗಳ ಒದಗಿಸುವುದು, ಲ್ಯಾಪ್‌ಟಾಪ್‌ಗಳ ಖರೀದಿ, ಮನೆ ನಿರ್ಮಾಣ, ಸೈಕಲ್ ವಿತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಕೈಗೊಳ್ಳಲು ಕ್ರಮ ವಹಿಸಬೇಕು ಎಂದರು.
ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಆದ್ಯತೆಯ ಆಧಾರದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಯಾವುದೇ ಕಾರಣಕ್ಕೂ ಅನುದಾನ ಬಳಕೆಯಾಗದೆ ಉಳಿಯದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ಜಾಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ಬರುವವರ ದೂರುಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ದೂರು ಸ್ವೀಕರಿಸದೆ, ಜಾರಿ ನಿರ್ದೇಶನಾಲಯ ಅಥವಾ ಬೇರೆ ಇಲಾಖೆಗೆ ನೇರವಾಗಿ ತೆರಳಿ ದೂರು ಸಲ್ಲಿಸುವಂತೆ ಸೂಚಿಸಬಾರದು. ದೂರು ಸ್ವೀಕರಿಸಿದ ಬಳಿಕ ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ಸದಸ್ಯ ಜವರಪ್ಪ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸುಳ್ಳು ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾದ ಬಳಿಕ ಪ್ರಕರಣವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುಣಸೂರು ತಾಲೂಕಿನ ಚಿಕ್ಕಹುಣಸೂರು ಗ್ರಾಮದ ಬಾಚಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ 30 ಕುಟುಂಬಗಳಿಗೆ ಗಿರಿಜನ ಕಲ್ಯಾಣ ಇಲಾಖೆಯಿಂದ ಆದಿವಾಸಿಗಳೆಂದು ಪರಿಗಣಿಸಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆದರೆ, ಈ ಕುಟುಂಬಗಳು ಜೇನುಕುರುಬ ಸಮುದಾಯಕ್ಕೆ ಸೇರಿದವರಲ್ಲ ಎಂಬ ದೂರು ದಾಖಲಾಗಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಈ ಕುರಿತು ಜಾತಿ ಪ್ರಮಾಣಪತ್ರ ರದ್ದಾಗುವವರೆಗೆ ಈಗಾಗಲೇ ನೀಡಲಾಗುತ್ತಿರುವ ಪೌಷ್ಟಿಕ ಆಹಾರವನ್ನು ಸ್ಥಗಿತಗೊಳಿಸದೆ ಮುಂದುವರಿಸುವಂತೆ ಸೂಚಿಸಲಾಯಿತು. ಜಾತಿ ಪ್ರಮಾಣಪತ್ರದ ವಿಚಾರದಲ್ಲಿ ಸೂಕ್ತ ಪರಿಶೀಲನೆ ಹಾಗೂ ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿಯ ಅರ್ಹರಿಗೆ ಸದಸ್ಯತ್ವ ನೀಡುತ್ತಿಲ್ಲ ಎಂಬ ದೂರನ್ನು ಸಹ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಅರ್ಹರಾಗಿರುವವರಿಗೆ ನಿಯಮಾನುಸಾರ ಸದಸ್ಯತ್ವ ಒದಗಿಸುವಂತೆ ಸಹಕಾರ ಸಂಘಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಯಾವುದೇ ಅರ್ಹ ವ್ಯಕ್ತಿಗೆ ಜಾತಿಯ ಕಾರಣದಿಂದ ಸದಸ್ಯತ್ವ ನಿರಾಕರಿಸಬಾರದು. ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಎನ್.ಟಿ. ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಎಸ್. ಬಸವರಾಜು, ಎನ್.ಕೆ. ಮಹದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತೆ ಡಾ. ಹರ್ಷ ಪ್ರಿಯಂವದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಮಲ್ಲಿಕ್, ಅಪರ ಪೊಲೀಸ್ ಅಧೀಕ್ಷಕ ಎಲ್. ನಾಗೇಶ್, ನಗರಗರಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಹೆಚ್ಚುವರಿ ಆಯುಕ್ತೆ ವೀಣಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net