ಹೊಸ ಆದಾಯ ಮಿತಿ ಮಾನದಂಡ ಕೈಬಿಡಲು ಆಗ್ರಹ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಐಡಿವೈಒ ಸಂಘಟನೆ ಸಹಕಾರದೊಂದಿಗೆ ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಐಡಿವೈಒ ಸಂಘಟನೆ ಸಹಕಾರದೊಂದಿಗೆ ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
Published on

ಎಐಡಿವೈಒ ಸಂಘಟನೆ, ಫಲಾನುಭವಿಗಳಿಂದ ಎಚ್.ಡಿ.ಕೋಟೆಯಲ್ಲಿ ಪ್ರತಿಭಟನೆ

ಎಚ್.ಡಿ.ಕೋಟೆ: ಕಳೆದ ನಾಲ್ಕು ತಿಂಗಳಿಂದ ತಡೆಹಿಡಿದಿರುವ ಸಾಮಾಜಿಕ ಭದ್ರತಾ ಪಿಂಚಣಿ ಬಿಡುಗಡೆ ಮಾಡುವಂತೆ ಹಾಗೂ ಹೊಸ ಆದಾಯ ಮಿತಿಯ ಮಾನದಂಡವನ್ನು ಕೈಬಿಡಲು ಆಗ್ರಹಿಸಿ ಎಐಡಿವೈಒ ಸಂಘಟನೆ ಹಾಗೂ ಫಲಾನುಭವಿಗಳು ಪ್ರತಿಭಟನೆ ಮಾಡಿ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಳೆದ ನಾಲ್ಕು ತಿಂಗಳಿಂದ ತಾಲೂಕಿನಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲರ ಪಿಂಚಣಿ ಹಣ ಬಿಡುಗಡೆಯಾಗದೆ ಬಡಜನರು ಕಂಗಾಲಾಗಿದ್ದಾರೆ. ಎಷ್ಟೋ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ತಮ್ಮ ದೈನಂದಿನ ಅವಶ್ಯಕ ಖರ್ಚು-ವೆಚ್ಚಗಳಿಗೆ, ಅದರಲ್ಲೂ ಪ್ರಮುಖವಾಗಿ ಜೀವ ರಕ್ಷಕ ಔಷಧಗಳನ್ನು ಕೊಂಡುಕೊಳ್ಳಲು ಈ ಮಾಸಿಕ ಪಿಂಚಣಿಯನ್ನೇ ಸಂಪೂರ್ಣವಾಗಿ ಆಶ್ರಯಿಸಿದ್ದಾರೆ. ತುಂಬ ವಯಸ್ಸಾದವರು ಊರುಗೋಲು ಹಿಡಿದು ದಿನನಿತ್ಯ ತಾಲೂಕು ಕಚೇರಿ ಹಾಗೂ ಬ್ಯಾಂಕುಗಳಿಗೆ ಅಲೆಯುತ್ತಾ, ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯುತ್ತಾ ನಿರಾಸೆಯಿಂದ ಮನೆಗೆ ಮರಳುವಂತಾಗಿದೆ ಎಂದು ದೂರಿದರು.
ಎಐಡಿವೈಒ ಸಂಘಟನೆ ಜಿಲ್ಲಾ ಅಧ್ಯಕ್ಷ ಸುನೀಲ್ ಮಾತನಾಡಿ, ಸರ್ಕಾರವು ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡದೆ ಏಕಾಏಕಿ ಪಿಂಚಣಿಯನ್ನು ನಿಲ್ಲಿಸಿದೆ. ಅಲ್ಲದೆ, ಈಗ ಕುಟುಂಬದ ವಾರ್ಷಿಕ ಆದಾಯ 32,000 ರೂ.ಗಳನ್ನು ಮೀರಿರಬಾರದು ಎಂಬ ಅವೈಜ್ಞಾನಿಕ ಹೊಸ ಮಾನದಂಡವನ್ನು ಹೇರಲು ಹೊರಟಿದೆ. ಇಂದಿನ ದುಬಾರಿ ದಿನಗಳಲ್ಲಿ ಈ ಮಾನದಂಡವನ್ನು ಜಾರಿಗೊಳಿಸಿದರೆ ಶೇ. 90ರಷ್ಟು ಬಡ ಜನಸಾಮಾನ್ಯರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಸುಳ್ಳು ದಾಖಲೆ ನೀಡಿ ಸೌಲಭ್ಯ ಪಡೆಯುತ್ತಿರುವ ಅನರ್ಹರನ್ನು ಗುರುತಿಸಿ, ಅವರ ಪಿಂಚಣಿ ರದ್ದುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವರ ತಪ್ಪುಗಳಿಗಾಗಿ ಇಡೀ ಬಡ ಸಮುದಾಯಕ್ಕೆ ಶಿಕ್ಷೆ ನೀಡುವುದು ಯಾವ ನ್ಯಾಯ? ಸರ್ಕಾರದ ಈ ಅಮಾನವೀಯ ಕ್ರಮ, ಬರಗಾಲದಿಂದ ಈಗಾಗಲೇ ಕಂಗೆಟ್ಟಿರುವ ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು.
ಅನರ್ಹರನ್ನು ಪತ್ತೆಹಚ್ಚಲು ಸರ್ಕಾರದ ಬಳಿ ಬೇರೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಮಾರ್ಗಗಳಿವೆ. ಅದನ್ನು ಬಿಟ್ಟು, ಪಿಂಚಣಿ ಪಡೆಯಲು ಇಂತಹ ಕಠಿಣ ಶರತ್ತುಗಳನ್ನು ವಿಧಿಸುತ್ತಿರುವುದು ಬಡ ಜನರಿಗೆ ನೀಡುವ ಸೌಲಭ್ಯಗಳಿಗೆ ಕತ್ತರಿ ಹಾಕಲು ಸರ್ಕಾರ ನಡೆಸುತ್ತಿರುವ ಹುನ್ನಾರವೇ ಎಂಬ ಅನುಮಾನ ಮೂಡಿಸುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ, ಸಮಾಜದ ಅತ್ಯಂತ ದುರ್ಬಲ ವರ್ಗಗಳ ಜೀವನ ವೆಚ್ಚಗಳನ್ನು ಭರಿಸಲು ಮಾಸಿಕ ಆರ್ಥಿಕ ನೆರವು ನೀಡುವ ಉದಾತ್ತ ಉದ್ದೇಶದಿಂದ ಜಾರಿಯಾದ ಪಿಂಚಣಿ ಯೋಜನೆಯನ್ನು ಇಷ್ಟು ವರ್ಷಗಳ ನಂತರ ಕಿತ್ತುಕೊಳ್ಳುವುದು ಜನರಿಗೆ ಮಾಡುವ ದ್ರೋಹವಾಗಿದೆ ಎಂದು ಆರೋಪಿಸಿದರು.
ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಐಡಿವೈಒ ಕಾರ್ಯದರ್ಶಿ ಸುಮಾ, ಜಂಟಿ ಕಾರ್ಯದರ್ಶಿ ನೀತುಶ್ರೀ, ಜಿಲ್ಲಾಧ್ಯಕ್ಷ ಬಸವರಾಜು, ಉಪಾಧ್ಯಕ್ಷ ರಂಗರಾಜು, ಸದಸ್ಯರಾದ ರವಿಕುಮಾರ್ ಇಟ್ನಾ, ಸೀಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net