ಶೈಕ್ಷಣಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಒತ್ತಾಯ

ಶೈಕ್ಷಣಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಒತ್ತಾಯ
ಶೈಕ್ಷಣಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಒತ್ತಾಯ
Published on
ರಾಜ್ಯದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಸಾಲು ಸಾಲು ಶೈಕ್ಷಣಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಸಂಬಂಧ ಜವಾಬ್ದಾರಿ ಹೊರಬೇಕಾದ ಉನ್ನತ ಶಿಕ್ಷಣ ಸಚಿವರೇ ಇಲ್ಲ ಎಂದು ಆರೋಪಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ನಗರ ಪಾಲಿಕೆ ಕಚೇರಿಯ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಿಡಿಸಿದರು.
ಸಾರಿಗೆ ಸಂಸ್ಥೆಯ ಬಸ್‌ಗಳ ತೀವ್ರ ಕೊರತೆ ಹಾಗೂ ಬಸ್ ಪಾಸ್ ವಿತರಣೆಯಲ್ಲಿನ ವಿಳಂಬದಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ಫುಟ್‌ಬೋರ್ಡ್ ಮೇಲೆ ಜೀವದ ಹಂಗು ತೊರೆದು ಪ್ರಯಾಣಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆ ಮುಗಿದಿಲ್ಲ. ಇದರಿಂದ ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ ವಸತಿ-ಊಟವಿಲ್ಲದಂತಾಗಿದೆ. ಕಳೆದ ಸಾಲಿನಿಂದಲೂ ಬಾಕಿ ಇರುವ ವಿದ್ಯಾಸಿರಿ ಸೇರಿದಂತೆ ವಿವಿಧ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡದೆ ತಾಂತ್ರಿಕ ದೋಷಗಳ ನೆಪವೊಡ್ಡಿ ಇಲಾಖೆಗಳು ಕಾಲಹರಣ ಮಾಡುತ್ತಿವೆ ಎಂದು ದೂರಿದರು.
ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 3,000 ಕಾಯಂ ಉಪನ್ಯಾಸಕರು ಮಾತ್ರ ಇದ್ದು, ಇದು ಅಗತ್ಯದ ಕೇವಲ ಶೇ.20ರಷ್ಟಾಗಿದೆ. ಉಳಿದ ಶೇ.80ರಷ್ಟು ಬೋಧನೆಗೆ ಅಗತ್ಯವಿರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿ ತಕ್ಷಣ ಪೂರ್ಣಗೊಳ್ಳಬೇಕಿದೆ. ಕೂಡಲೇ ಸಮರ್ಪಕ ಬಸ್ ಸೌಕರ್ಯ ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸುಲಭವಾಗಿ ಬಸ್ ಪಾಸ್ ವಿತರಿಸಬೇಕು. ದೂರದ ಊರುಗಳಿಂದ ಬರುವ ಬಡ ವಿದ್ಯಾರ್ಥಿಗಳು ತಂಗಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರಿ ಹಾಸ್ಟೆಲ್‌ಗಳ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಮೂಲಸೌಕರ್ಯ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಬಾಕಿ ಇರುವ ಎಲ್ಲ ವಿದ್ಯಾಸಿರಿ ಹಾಗೂ ಇತರ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡಬೇಕು. ಸಾರಿಗೆ, ಹಾಸ್ಟೆಲ್ ವಸತಿ ಹಾಗೂ ವಿದ್ಯಾರ್ಥಿವೇತನದ ಈ ಮೂರೂ ಪ್ರಮುಖ ಬೇಡಿಕೆಗಳನ್ನು ಮುಂದಿನ ಒಂದು ವಾರದೊಳಗೆ ಈಡೇರಿಸದಿದ್ದರೆ, ರಾಜ್ಯಾದ್ಯಂತ ಕಾಲೇಜು ಬಂದ್ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಂಚಾಲಕ ಎಚ್.ನಂದನ್‌ಕುಮಾರ್, ಪದಾಧಿಕಾರಿಗಳಾದ ಸಜಿತ್, ಗೌರವ್, ಮೇಘನಾ, ಮಂದಾರ ಬಾಳುಗೋಡು, ಭಾನುತೇಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net