ಮೈಸೂರು: ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ನಂತರ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೋದಿ ಸರ್ಕಾರದ ಆಡಳಿತದ ಪರಿಣಾಮ 25 ಕೋಟಿ ಜನರು ಕಡು ಬಡತನದಿಂದ ಹೊರ ಬಂದಿದ್ದಾರೆ. ಈ ವಿಚಾರವನ್ನು ನೀತಿ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಬ್ಲುೃಎಚ್‌ಒ ವರದಿಯ ಪ್ರಕಾರ ಶಿಶು ಮರಣ ಪ್ರಮಾಣ ಶೇ.12 ರಿಂದ 2ಕ್ಕೆ ಕುಸಿತ ಕಂಡಿದೆ. ಸ್ವಚ್ಛವಾದ ಪರಿಸರ ನಿರ್ಮಾಣವಾಗಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದ್ದು, ಈ ವಿಚಾರದಲ್ಲಿ ಸ್ವಚ್ಛ ಭಾರತ್ ಅಭಿಯಾನ ಮಹತ್ವದ ಪಾತ್ರ ವಹಿಸಿದೆ ಎಮದು ಡಬ್ಲುೃಎಚ್‌ಒ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ರೂ. ಪಾವತಿ ಮಾಡುತ್ತಿದೆ. ಪ್ರತಿವರ್ಷ ರೈತರಿಗೆ ಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು, ದೇಶದ ಕೃಷಿ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಲಾಗಿದ್ದು, ಲಕ್‌ಪತಿ ದೀದಿ ಯೋಜನೆಯ ಸೌಲಭ್ಯವನ್ನು ಇದುವರೆಗೆ 3 ಕೋಟಿ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಮೋದಿ ಸರ್ಕಾರದ ಸಾಧನೆಯನ್ನು ವಿವರಿಸಿದರು.
ಮೋದಿ ಸರ್ಕಾರದ ಆಡಳಿತದಲ್ಲಿ ಯುವಜನರ ಕೌಶಲ ಹೆಚ್ಚಾಗಿದೆ. ಈ ಕಾರಣಕ್ಕಾಗಿ ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಕೇವಲ ಅಭಿವೃದ್ಧಿ ಮಾತ್ರವಲ್ಲದೆ ದೇಶದ ಪರಂಪರೆ ಉಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ. 44 ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದ್ದು, ಸ್ಮಾರಕಗಳ ಸಂರಕ್ಷಣೆಗೆ 12 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಮಮಂದಿರ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಕೇಂದ್ರ ಸರ್ಕಾರದ ಅವಧಿಯಲ್ಲಿ ದೊರೆತ್ತಿದೆ. ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಅದ್ವಿತೀಯವಾದ ಕ್ರಾಂತಿಯಾಗಿದೆ. ಪ್ರಸ್ತುತ ಯುಪಿಐ ಮೂಲಕ ಬಹುತೇಕ ಆರ್ಥಿಕ ವಹಿವಾಟು ನಡೆಯುತ್ತಿದೆ. ಡಿಜಿಟಲ್ ಮೂಲಕ ಜನರು ಮನೆಗೆ ಎಲ್ಲ ವಸ್ತುಗಳನ್ನು ಖರೀದಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಇದು ಮೋದಿ ಸರ್ಕಾರದ ಆಡಳಿತದಿಂದ ಸಾಧ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಬಿ. ಹರ್ಷವರ್ಧನ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕೆ.ಎನ್. ಸುಬ್ಬಣ್ಣ ಹಾಗೂ ಇತರರು ಇದ್ದರು.