ಸಮಾಜವನ್ನು ರೂಪಿಸುವ ಮಹಿಳೆಯರಿಗೆ ಸನ್ಮಾನ

ಸಮಾಜವನ್ನು ರೂಪಿಸುವ ಮಹಿಳೆಯರಿಗೆ ಸನ್ಮಾನ
ಸಮಾಜವನ್ನು ರೂಪಿಸುವ ಮಹಿಳೆಯರಿಗೆ ಸನ್ಮಾನ
Published on

ಪ್ರಮುಖ ಮುಖ್ಯಾಂಶಗಳು

  • ಮಣಿಪಾಲ್ ಸಖಿ ಸೀಸನ್ 4: ಧೈರ್ಯ ಮತ್ತು ಕರುಣೆಯಿಂದ
ನಮ್ಮ ಸಮಾಜವು ಮಹಿಳೆಯರ ಶಕ್ತಿ, ಧೈರ್ಯ, ಛಲ ಮತ್ತು ಕರುಣೆಯ ಬುನಾದಿಯ ಮೇಲೆ ನಿಂತಿದೆ. ಕೆಲವರು ಮುಂಚೂಣಿಯಲ್ಲಿ ನಿಂತು ಅಡೆತಡೆಗಳನ್ನು ನಿವಾರಿಸಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದರೆ, ಇನ್ನು ಕೆಲವರು ಕುಟುಂಬಗಳನ್ನು ಪೋಷಿಸುವ, ಸಮಾಜವನ್ನು ಉದ್ಧಾರ ಮಾಡುವ ಮತ್ತು ತಮ್ಮನ್ನು ತಾವು ಸಮಾಜ ಸೇವೆಗೆ ಸಮರ್ಪಿಸಿಕೊಳ್ಳುವ ಮೂಲಕ ನಿಶ್ಶಬ್ದವಾಗಿ, ಆದರೆ ಪ್ರಬಲವಾಗಿ ಸಮಾಜದ ಮೇಲೆ ಪ್ರಭಾವ ಬೀರುತ್ತಾರೆ. ಇವರೆಲ್ಲರ ಜೀವನ ಪಯಣವು ಸದೃಢ ಮತ್ತು ಹೆಚ್ಚು ಸಹಾನುಭೂತಿಯುಳ್ಳ ಸಮಾಜದ ಅಡಿಪಾಯವನ್ನು ರೂಪಿಸುತ್ತದೆ.
ಇಂತಹ ಅಸಾಧಾರಣ ಕಥೆಗಳನ್ನು ಗೌರವಿಸುವ ಉದ್ದೇಶದಿಂದ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ನಗರದ ಗ್ರ್ಯಾಂಡ್ ಮರ್ಕ್ಯೂರ್ ಹೋಟೆಲ್‌ನಲ್ಲಿ 'ಮಣಿಪಾಲ್ ಸಖಿ - ಸೀಸನ್ 4' ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಮಹಿಳೆಯರ ಸ್ಥೈರ್ಯ, ಸೇವೆ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಅವರ ನಿರಂತರ ಬದ್ಧತೆಯನ್ನು ಆಚರಿಸುವ ಒಂದು ವಿಶೇಷ ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಕ್ಲಸ್ಟರ್ ಡೈರೆಕ್ಟರ್ ಪ್ರಮೋದ್ ಕುಂದರ್ ಹಾಗೂ ಮೈಸೂರು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ವಹಿಸಿದ್ದರು. ಇನ್ಫೋಸಿಸ್ ಲಿಮಿಟೆಡ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್- ಹೆಚ್.ಆರ್.ಡಿ ಪ್ರೀತ್ ಕುಶಾಲಪ್ಪ ಕೊಡಿರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ, ಶಿಕ್ಷಣ, ಹೆಲ್ತ್‌ಕೇರ್, ಕ್ರೀಡೆ, ಆಂಟ್ರಪ್ರೆನರ್‌ಶಿಪ್, ಸಮಾಜ ಸೇವೆ, ಕಲೆ ಮತ್ತು ಸಮುದಾಯ ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 30 ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಅವರ ಅಸಾಧಾರಣ ಸಾಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಶ್ರೀಮತಿ ಪ್ರೀತ್ ಕುಶಾಲಪ್ಪ ಕೊಡಿರ ಅವರು, ಮಹಿಳೆಯರ ಸ್ಥೈರ್ಯ ಮತ್ತು ನಾಯಕತ್ವವನ್ನು ಸಂಭ್ರಮಿಸುವ ಮಹತ್ವದ ಕುರಿತು ಮಾತನಾಡಿದರು. "ಮಹಿಳೆಯರ ಶಕ್ತಿ ಮತ್ತು ಅವರು ಸವಾಲುಗಳನ್ನು ಎದುರಿಸುವ ರೀತಿ ಕುಟುಂಬ ಹಾಗೂ ಸಮಾಜಕ್ಕೆ ದೊಡ್ಡ ಬಲ ನೀಡುತ್ತದೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕಾದರೆ ನಾವು ವಿಶೇಷ ಆಸಕ್ತಿ ವಹಿಸಬೇಕು. ಮಣಿಪಾಲ್ ಸಂಸ್ಥೆಯು ಇಂತಹ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಸಮಾಜ ಕಟ್ಟಲು ಮುಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಲ್ಲಿ ಒಂದಾಗಿ ಕೆಲಸ ಮಾಡುತ್ತಿರುವುದು ನೋಡಲು ಖುಷಿಯಾಗುತ್ತದೆ; ಬದಲಾವಣೆ ತರಲು ಇದು ಸರಿಯಾದ ದಾರಿ. ಕಷ್ಟಗಳನ್ನು ಗೆದ್ದು ಇತರರಿಗೆ ನೆರವಾದ ಮಹಿಳೆಯರನ್ನು 'ಮಣಿಪಾಲ್ ಸಖಿ' ಗೌರವಿಸುತ್ತಿದೆ. ಇಂತಹ ಸಾಧಕರನ್ನು ಗುರುತಿಸುವುದರಿಂದ ಬೇರೆ ಮಹಿಳೆಯರಿಗೂ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಧೈರ್ಯ ಬರುತ್ತದೆ." ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಲಸ್ಟರ್ ಡೈರೆಕ್ಟರ್ ಪ್ರಮೋದ್ ಕುಂದರ್, ಈ ಕಾರ್ಯಕ್ರಮದ ಹಿಂದಿನ ಆಶಯವನ್ನು ವಿವರಿಸಿದರು. "ಇಂದು ನಾವು ಗೌರವಿಸುತ್ತಿರುವ ಪ್ರತಿಯೊಬ್ಬ ಮಹಿಳೆಯೂ ಸ್ಥೈರ್ಯ, ದೃಢತೆ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರುವ ಬದ್ಧತೆಯನ್ನು ಪ್ರತಿನಿಧಿಸುತ್ತಾರೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ, ಮಹಿಳೆಯರ ಆರೋಗ್ಯ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಪರಿಪೂರ್ಣ ಆರೈಕೆ ಮೂಲಕ ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಮಣಿಪಾಲ್ ಸಖಿಯಂತಹ ಕಾರ್ಯಕ್ರಮಗಳ ಮೂಲಕ, ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕೆಯ ಆರೈಕೆಗಳನ್ನು ಅನ್ನು ಪ್ರೋತ್ಸಾಹಿಸಲು ನಾವು ಸದಾ ಬದ್ಧರಾಗಿರುತ್ತೇವೆ." ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಆಸ್ಪತ್ರೆಯ, ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ., "ಪ್ರತಿಯೊಂದು ಸಾಧನೆಯ ಹಿಂದೆಯೂ ನಿರಂತರ ಪ್ರಯತ್ನ, ತ್ಯಾಗ ಮತ್ತು ನಂಬಿಕೆಯ ಕಥೆಯಿರುತ್ತದೆ. ಮಣಿಪಾಲ್ ಸಖಿಯು ಇಂತಹ ಪಯಣಗಳನ್ನು ಗುರುತಿಸಲು ಹಾಗೂ ತಮ್ಮ ಕೊಡುಗೆಗಳ ಮೂಲಕ ಸಮಾಜಗಳನ್ನು ಪ್ರೇರೇಪಿಸುವ ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸಲು ನಮಗೆ ಅವಕಾಶ ನೀಡುತ್ತದೆ" ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ, 'ಮಣಿಪಾಲ್ ಸಖಿ'ಯು ಧೈರ್ಯ, ಸೇವೆ ಮತ್ತು ಛಲದ ಕಥೆಗಳನ್ನು ಮುನ್ನೆಲೆಗೆ ತರುವ ಒಂದು ಹೃದಯಸ್ಪರ್ಶಿ ವೇದಿಕೆಯಾಗಿ ಬೆಳೆದಿದೆ. ಈ ಅಸಾಧಾರಣ ಮಹಿಳೆಯರನ್ನು ಗುರುತಿಸುವ ಮೂಲಕ, ಮಹಿಳೆಯರನ್ನು ಬೆಂಬಲಿಸಿದಾಗ ಮತ್ತು ಸಬಲೀಕರಣಗೊಳಿಸಿದಾಗ ಅದು ಇಡೀ ಸಮಾಜದ ಭವಿಷ್ಯವನ್ನೇ ಬಲಪಡಿಸುತ್ತದೆ ಎಂಬ ಪ್ರಬಲ ಸಂದೇಶವನ್ನು ಈ ಕಾರ್ಯಕ್ರಮ ಸಾರುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net