ಆದಿವಾಸಿಗಳಿಗೆ ಕಳೆದ 6 ತಿಂಗಳಿನಿಂದ ಆಹಾರ ಕಿಟ್ ವಿತರಿಸಿಲ್ಲ
ಹಳೆಯ ಬಾಕಿಯ ಕಿಟ್‌ಸೇರಿದಂತೆ ಮುಂದೆ ನಿರಂತರವಾಗಿ ಆಹಾರದ ಕಿಟ್ ದೊರೆಯಲಿದೆ.
ಮೈಸೂರು:
ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿಳಂಬವಾಗುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ (ಎಐಜೆಎಎಸ್‌ಸಿ)ನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿದ್ದ ಧರಣಿಯನ್ನು ಅಂತ್ಯಗೊಳಿಸಲಾಗಿದೆ.
ಆದಿವಾಸಿಗಳಿಗೆ ಕಳೆದ 6 ತಿಂಗಳಿನಿಂದ ಆಹಾರ ಕಿಟ್ ವಿತರಿಸಿಲ್ಲ, ಅಲ್ಲದೇ ವೃದ್ಧಾಪ್ಯ ವೇತನ, ವಿಧವಾ ವೇತನ ಕಡಿತ ಮಾಡಲಾಗಿದೆ ಎಂದು ವಿರೋಧಿಸಿ ಸಮಿತಿಯಿಂದ ನಾಲ್ಕುದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಲಾಗುತ್ತಿತ್ತು. ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಜಿ.ಲಕ್ಷ್ಮೀಕಾಂತರೆಡ್ಡಿ ಅವರು, ಆಹಾರ ಕಿಟ್ ವಿತರಣೆಗೆ ಕಾರ್ಯಕ್ಕೆ ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯದೆ ಇರುವುದು ಕಾರಣವಾಗಿದೆ. ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ನಾಲ್ಕೈದು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಹಳೆಯ ಬಾಕಿಯ ಕಿಟ್‌ಸೇರಿದಂತೆ ಮುಂದೆ ನಿರಂತರವಾಗಿ ಆಹಾರದ ಕಿಟ್ ದೊರೆಯಲಿದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಸಮಸ್ಯೆ ಬಗೆ ಹರಿಯದಿದ್ದರೆ ಮತ್ತೆ ಇಲ್ಲಿ ಬಂದು ಧರಣಿಯನ್ನು ಪ್ರಾರಂಭಿಸಿ, ಹೋರಾಟ ನಿಮ್ಮಯ ಹಕ್ಕು. ಆದರೆ, ಈಗ ನನ್ನ ಮೇಲೆ ವಿಶ್ವಾಸವಿಟ್ಟು ಈ ಧರಣಿ ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ನೀಡಿದ ಭರವಸೆಯೊಂದಿಗೆ ಅನಿರ್ದಿಷ್ಟಾವಧಿ ಧರಣಿಯನ್ನು ಅಂತ್ಯಗೊಳಿಸಲಾಯಿತು. ಸಾಮಾಜಿಕ ಹೋರಾಟಗಾರ ಕಾಳಚನ್ನೇಗೌಡ, ಸಮಿತಿ ಜಿಲ್ಲಾ ಸಚಾಕರಾದ ಟಿ.ಆರ್.ಸುನೀಲ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಿ.ರವಿ, ಸೀಮಾ, ಆಸಿಯಾ, ಪುಷ್ಪಾ, ಶಿವಾನಂದ್, ನಿರಂಜನ್ ಇತರರು ಇದ್ದರು.