ಮಹಿಳೆಯರೊಂದಿಗೆ ಗೌರವಯುತವಾಗಿ ವರ್ತಿಸಿ

ಪ್ರಾದೇಶಿಕ ಆಯುಕ್ತರ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಸುನ್ವಾಯಿ ಕಾರ್ಯಕ್ರಮದಲ್ಲಿ ನಾಗಲಕ್ಷ್ಮೀ ಚೌದರಿ ಮಾತನಾಡಿದರು. ಸೀಮಾ ಲಾಟ್ಕರ್, ಡಾ.ಪಿ.ಶಿವರಾಜು, ನಾಗೇಶ್ ಇದ್ದರು.
ಪ್ರಾದೇಶಿಕ ಆಯುಕ್ತರ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಸುನ್ವಾಯಿ ಕಾರ್ಯಕ್ರಮದಲ್ಲಿ ನಾಗಲಕ್ಷ್ಮೀ ಚೌದರಿ ಮಾತನಾಡಿದರು. ಸೀಮಾ ಲಾಟ್ಕರ್, ಡಾ.ಪಿ.ಶಿವರಾಜು, ನಾಗೇಶ್ ಇದ್ದರು.
Published on
ಪೊಲೀಸ್ ಠಾಣೆಯಲ್ಲಿ ಮಹಿಳೆಯರು ದೂರು ದಾಖಲಿಸಲು ಅಥವಾ ಯಾವುದೇ ರೀತಿಯ ಮಾಹಿತಿ ಪಡೆಯಲು ಬಂದಾಗ ಅವರೊಂದಿಗೆ ಗೌರವಯುತವಾಗಿ ವರ್ತಿಸಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಸೂಚನೆ ನೀಡಿದರು.
ಪ್ರಾದೇಶಿಕ ಆಯುಕ್ತರ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಸುನ್ವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಯಾವುದೇ ರೀತಿಯ ತೊಂದರೆ ಉಂಟಾದರೂ ನಿರ್ಭಯವಾಗಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸುವಂತಾಗಬೇಕು. ಕಟ್ಟ ಕಡೆಯ ಮಹಿಳೆಗೂ ನ್ಯಾಯ ಒದಗಿಸುವುದು ಆಯೋಗದ ಉದ್ದೇಶವಾಗಿದೆ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆಯಿಂದ ನಡೆಸಲಾಗುವ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಮಹಿಳೆಯರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಸೌಜನ್ಯದಿಂದ ವರ್ತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ. ಯಾರಿಂದಾದರೂ ಅನುಚಿತ ವರ್ತನೆ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತಪ್ಪದೇ ದೂರು ಸಲ್ಲಿಸಿ ಎಂದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳು ಯಾವುದಾದರೂ ಶೋಷಣೆಗೆ ಒಳಗಾದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಎಂದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆ ಎಂಬ ಪೊಲೀಸ್ ಇಲಾಖೆ ವಾಹನವು ಮುಖ್ಯವಾಗಿ ಕಾಲೇಜುಗಳು, ತೊಂದರೆ ಇರುವ ಸ್ಥಳಗಳಲ್ಲಿ ಹೆಚ್ಚು ಗಸ್ತು ಮಾಡುತ್ತಿದೆ. ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಣೆ ತಡೆಗಟ್ಟಲು ವಿಮುಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
2023ನೇ ಸಾಲಿನಿಂದ ಗಮನಿಸಿದರೆ ಮೈಸೂರು ನಗರ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಮಹಿಳೆಯೊಬ್ಬರು ತಮಗೆ ಖಾಸಗಿ ಸಂಸ್ಥೆಯಿಂದ ಇರಲು ಮನೆ ಸೇರಿದಂತೆ ಮೂಲಸೌಲಭ್ಯಗಳ ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಿದಾಗ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಸ್ಪಂದಿಸಿ ಪೂರ್ಣ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವಂತೆ ತಿಳಿಸಿದರು.
ಎಸಿಪಿ ಗಂಗಾಧರ್ ಸ್ವಾಮಿ ಮಾತನಾಡಿ, ಪ್ರತಿ ತಿಂಗಳು ಜನಸಂಪರ್ಕ ಸಭೆ, ಪ್ರತಿ ತಿಂಗಳ ಕೊನೆಯ ಭಾನುವಾರ ಶೋಷಣೆಗೆ ಒಳಗಾದವರ ದಿನ, ಮನೆ ಮನೆ ಪೊಲೀಸ್ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಮಾನವ ಕಳ್ಳ ಸಾಗಣೆ ತಡೆಗಟ್ಟಲು ಪ್ರತ್ಯೇಕ ಪೊಲೀಸ್ ತಂಡ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಗುರುವಾರ ಈ ತಂಡದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ತೆರೆದ ಮನೆ ಎಂಬ ಕಾರ್ಯಕ್ರಮ ನಡೆಸಲಾಗುತ್ತದೆ. ಇದರೊಂದಿಗೆ ಎರಡು ತಿಂಗಳಿಗೊಮ್ಮೆ ವಿವಿಧ ಇಲಾಖೆ ಹಾಗೂ ಎನ್‌ಜಿಒಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಎಎಸ್‌ಪಿ ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net