ಪುರಭವನದ ಬಳಿ ಟಾಂಗಾ ನಿಲ್ದಾಣ ಅವೈಜ್ಞಾನಿಕ: ಪ್ರತಾಪಸಿಂಹ

ಪ್ರತಾಪಸಿಂಹ
ಪ್ರತಾಪಸಿಂಹ
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಸ್ಥಳದಲ್ಲಿ ಟಾಂಗಾ ಸ್ಟಾೃಂಡ್ ಮಾಡಲು ಹೊರಟಿರುವುದು ಅವೈಜ್ಞಾನಿಕ
  • ಮೈಸೂರು ನಗರಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ
ಮೈಸೂರು:‘ಸ್ವದೇಶ್ ದರ್ಶನ್’ ಯೋಜನೆಯಡಿ ನಗರದ ಪುರಭವನದ ಬಳಿ ಟಾಂಗಾ ನಿಲ್ದಾಣ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು, ಕಾಮಗಾರಿಯನ್ನು ಕೂಡಲೇ ಕೈ ಬಿಡಬೇಕು ಎಂದು ಮಾಜಿ ಸಂಸದ ಪ್ರತಾಪಸಿಂಹ ಒತ್ತಾಯಿಸಿದರು.
ನಿತ್ಯ ಸಾವಿರಾರು ಜನರು ಓಡಾಡುವ ಪಾದಚಾರಿ ಜಾಗವನ್ನು ಮುಚ್ಚಿ ಆ ಜಾಗದಲ್ಲಿ ಟಾಂಗಾ ಸ್ಟಾೃಂಡ್ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದೆ. ಇದನ್ನು ಬೇರೆಡೆ ಸೂಕ್ತ ಜಾಗದಲ್ಲಿ ಮಾಡಲಿ. ಆದರೆ ಪಾದಚಾರಿ ಓಡಾಡುವ ಸ್ಥಳದಲ್ಲಿ ಟಾಂಗಾ ನಿಲ್ದಾಣ ಮಾಡಿದರೆ ಜನರು ಓಡಾಡಲು ಕಷ್ಟವಾಗುತ್ತದೆ ಎಂದು ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುದುರೆಗಳ ಲದ್ದಿ ದುರ್ವಾಸನೆ ಬರುತ್ತದೆ. ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾಲಿಕೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲ ಸೂಕ್ತ ಜಾಗ ನೋಡಿ ಮಾಡಬೇಕಿದೆ ಎಂದರು.
ನಗರಪಾಲಿಕೆ ಆಯುಕ್ತರು ಮುಖ್ಯಮಂತ್ರಿ ಬಂದಾಗ ಹೂ ಗುಚ್ಚ ನೀಡಿ, ಕೊಠಡಿಯಲ್ಲಿ ಎಸಿ ಕೆಳಗೆ ಕುಳಿತು ಕಡತಗಳಿಗೆ ಸಹಿ ಹಾಕುವುದೇ ಕೆಲಸವಲ್ಲ. ವಾರ್ಡ್‌ಗಳಲ್ಲಿ ಓಡಾಡಿ ಸಮಸ್ಯೆ ಏನಿದೆ, ಸಿಬ್ಬಂದಿ, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎನ್ನುವುದನ್ನು ಗಮನಿಸಬೇಕು ಎಂದು ಹೇಳಿದರು.
ನಗರದಲ್ಲಿ ಅನಗತ್ಯವಾಗಿ 108 ಹೊಸ ಸಿಗ್ನಲ್ ಅಳವಡಿಕೆ ಮಾಡಿದ್ದಾರೆ. ಬೇಡದ ಕಡೆಯೂ ಸಿಗ್ನಲ್‌ಗಳನ್ನು ಅಳವಡಿಸುವುದರಿಂದ ಒಳ್ಳೆಯ ಕಮೀಷನ್ ಬಂದಿರಬೇಕು. ಇದಕ್ಕೆ ಮುಖ್ಯಮಂತ್ರಿ ಹಾಗೂ ಅವರ ಸುಪುತ್ರ ಉತ್ತರ ಕೊಡಬೇಕು ಎಂದರು.
ಜನಗಳೇ ಇಲ್ಲದ ಜಾಗದಲ್ಲಿಯೂ ಸಿಗ್ನಲ್ ಹಾಕಿದ್ದಾರೆ. 50 ಮೀಟರ್ ಅಂತರದಲ್ಲಿಯೇ ಸಿಗ್ನಲ್ಗಳನ್ನು ಅಳವಡಿಕೆ ಮಾಡಿದ್ದಾರೆ. 1.5ಕಿ.ಮೀಗೆ 9 ಸಿಗ್ನಲ್ ಹಾಕಿದ್ದಾರೆ. ಏಕೆ ಸಿಗ್ನಲ್ ಅಳವಡಿಕೆಯ ಮಾಡಿದ್ದಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನ ಅಗುತ್ತಿಲ್ಲ. ಜನರು ಸುಮ್ಮನೆ ಟ್ರಾಫಿಕ್‌ನಲ್ಲಿ ನಿಲ್ಲೋ ಹಾಗೆ ಆಗಿದೆ. ಅನವಶ್ಯಕ ಸಿಗ್ನಲ್ ಗಳಲ್ಲಿ ಸಿಗ್ನಲ್ಲೈಟ್ ಅಳವಡಿಕೆ ಮಾಡಿರುವುದನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಚಾಮರಾಜ ಕ್ಷೇತ್ರದ ಮಂಡಲಅಧ್ಯಕ್ಷ ದಿನೇಶ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯ ಎಂ.ಯು.ಸುಬ್ಬಯ್ಯ, ಸತೀಶ್, ಗ್ರಾಹಕರ ಪರಿಷತ್ತಿನ ಎಸ್.ಕೆ.ದಿನೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net