ನಂಜನಗೂಡು: ತಾಲೂಕಿನ ದೇವನೂರು ಗ್ರಾಮದಲ್ಲಿರುವ ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದಲ್ಲಿ ಜು.1, 2ರಂದು ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ಮಲ್ಲೇಶ್ವರ ಆರಾಧನೆ ಸಮಿತಿ ಅಧ್ಯಕ್ಷ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಹೇಳಿದರು.
1ರಂದು ಬೆಳಗ್ಗೆ 7.30ಕ್ಕೆ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಮಲ್ಲನ ಮೂಲೆ ಮಠದ ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಸವ ಮಹಾದ್ವಾರ ಉದ್ಘಾಟಿಸುವರು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಲ್ಯಾಣಿ ಉದ್ಘಾಟಿಸುವರು. ಸೋಮಹಳ್ಳಿ ಮಠದ ಶ್ರೀ ಸಿದ್ಧಮಲ್ಲ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗಲಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಉದ್ಘಾಟಿಸುವರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು.
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನೀಲ್ ಬೋಸ್, ಶಾಸಕರಾದ ದರ್ಶನ್ ಧ್ರುವನಾರಾಯಣ, ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಭಾಗವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಗುರು ಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದ ಪೀಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಶ್ರೀ ಮಠದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜ್, ತಹಸೀಲ್ದಾರ್ ಡಾ.ಸ್ಮಿತಾ ರಾಮು, ಡಿವೈಎಸ್ಪಿ ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ವಿವಿಧ ತಂಡಗಳಿಂದ ನೃತ್ಯರೂಪಕ, ವಚನ ನೃತ್ಯ, ಜಂಗಮೋತ್ಸವ ಹಾಗೂ ರಾತ್ರಿ 10 ಗಂಟೆಗೆ ಮೈಸೂರಿನ ಶ್ರೀ ಮಡಿವಾಳೇಶ್ವರ ಕಲಾ ಸಂಘದಿಂದ ಕುರುಕ್ಷೇತ್ರ ನಾಟಕ ಪ್ರದರ್ಶನವಿದೆ.
ಜು.2ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಗುರು ಮಲ್ಲೇಶ್ವರರ ರಥೋತ್ಸವ ಜರುಗಲಿದೆ. ಬೆಳಗ್ಗೆ 9 ಗಂಟೆಗೆ ಬದನವಾಳು ಶಿವಕುಮಾರ್ ಶಾಸ್ತ್ರಿ ನೇತೃತ್ವದ ನಾದಸಂಗಮ ಕಲಾ ವೃಂದದಿಂದ ಭಕ್ತಿಗೀತೆಗಳ ಗಾಯನವಿದೆ. ಸಾಲೂರು ಮಠದ ಡಾ.ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಸಿ.ಎಸ್. ನಿರಂಜನ್ ಕುಮಾರ್, ಬಿ.ಹರ್ಷವರ್ಧನ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಗುರು ಮಲ್ಲೇಶ್ವರ ವಿದ್ಯಾಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ರಾತ್ರಿ 8.30 ಕ್ಕೆ ಕಲ್ಯಾಣಿಯಲ್ಲಿ ಶ್ರೀ ಗುರು ಮಲ್ಲೇಶ್ವರರ ತೆಪ್ಪೋತ್ಸವ ಜರುಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಶ್ರೀ ಗುರುಮಲ್ಲೇಶ್ವರ ಆರಾಧನಾ ಸಮಿತಿ ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ವೃಷಭೇಂದ್ರ, ನಿಕಟಪೂರ್ವ ಕಾರ್ಯದರ್ಶಿ ಡಿ.ಜೆ. ಗುರು, ಮಹದೇವಸ್ವಾಮಿ, ರವಿಮೂರ್ತಿ ಹಾಜರಿದ್ದರು.