ಆಟೋ ಚಾಲಕರ ಮೂಲಕ ತಂಬಾಕು ಮುಕ್ತ ಮೈಸೂರು ಅಭಿಯಾನಕ್ಕೆ ಚಾಲನೆ
ಭಾರತ್ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಸ್ಥೆ(ಬಿಎಚ್‌ಐಒ)ಯಿಂದ ಆರಂಭಗೊಂಡಿರುವ ‘ತಂಬಾಕುಮುಕ್ತ ಮೈಸೂರು’ ಜಾಗೃತಿ ಆಂದೋಲನಕ್ಕೆ ಚಾಲನೆೆ ನೀಡಲಾಯಿತು. ಡಾ.ಬಿ.ಸಿ. ಅವಿನಾಶ್, ಡಾ. ವಿನಯ್‌ಕುಮಾರ್ ಮುಟ್ಟಗಿ, ಡಾ.ಕೆ.ಎನ್.ಸಂತೋಷ್‌ಕುಮಾರ್, ಡಾ. ವಿಜಯ್ಕುಮಾರ್, ಗೌತಮ್ ಧಮೇರ್ಲ ಇತರರು ಇದ್ದರು.
ಆಸ್ಪತ್ರೆಗೆ ಬರುವ ಶೇ.33ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಸೇವನೆಯೇ ನೇರ ಕಾರಣವಾಗಿದೆ
ನೂರಾರು ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಆಟೋ ಚಾಲಕರೇ ರಾಯಭಾರಿಗಳು
ಮೈಸೂರು:
ಸಾಂಸ್ಕೃತಿಕ ನಗರಿ ಮೈಸೂರನ್ನು ಸಂಪೂರ್ಣ ತಂಬಾಕುಮುಕ್ತಗೊಳಿಸುವ ಬೃಹತ್ ಆಶಯದೊಂದಿಗೆ ಹೆಬ್ಬಾಳು ರಿಂಗ್‌ರೋಡ್‌ನಲ್ಲಿರುವ ಭಾರತ್ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಸ್ಥೆ (ಬಿಎಚ್‌ಐಒ)ಯಿಂದ ‘ಮೀಟರ್ ಆನ್, ತಂಬಾಕು ಆಫ್’ ಎಂಬ ವಿನೂತನ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರೂ ಆದ ಹಿರಿಯ ಕ್ಯಾನ್ಸರ್ ರೋಗ ತಜ್ಞ ಡಾ. ಬಿ.ಎಸ್.ಅಜಯ್ಕುಮಾರ್ ಅವರ ದೂರದೃಷ್ಟಿಯ ಪರಿಕಲ್ಪನೆಯಡಿ ಈ ಸಾಮಾಜಿಕ ಜಾಗೃತಿ ಕಾರ್ಯಕ್ರಮ ರೂಪುಗೊಂಡಿದ್ದು, ಆಂದೋಲನವನ್ನು ಆಸ್ಪತ್ರೆ ಆವರಣದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಬಿ.ಸಿ.ಅವಿನಾಶ್ ಮಾತನಾಡಿ, ಆಸ್ಪತ್ರೆಗೆ ಬರುವ ಶೇ.33ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಸೇವನೆಯೇ ನೇರ ಕಾರಣವಾಗಿದೆ. ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ಯಾವುದೇ ರೂಪದ ತಂಬಾಕು ಅತ್ಯಂತ ಅಪಾಯಕಾರಿ ಎಂದರು.
ನಿತ್ಯ ನೂರಾರು ಜನರನ್ನು ಕರೆದುಕೊಂಡು ಹೋಗುವ ಆಟೋ ಚಾಲಕರು ಜನರೊಂದಿಗೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಆದ್ದರಿಂದ ಈ ಜಾಗೃತಿ ಕಾರ್ಯಕ್ರಮಕ್ಕೆ ಅವರನ್ನೇ ರಾಯಭಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಯಾನ್ಸರ್ ಚಿಕಿತ್ಸೆಗೆ ಮಾತ್ರ ಸೀಮಿತವಾಗದೆ, ರೋಗ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ವಹಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈ ಜಾಗೃತಿ ಅಭಿಯಾನದ ಭಾಗವಾಗಿ ನಗರದ 100ಕ್ಕೂ ಹೆಚ್ಚು ಆಟೋ ಚಾಲಕರು ‘ತಂಬಾಕು ಮುಕ್ತ ಮೈಸೂರು’ ಆಂದೋಲನದ ರಾಯಭಾರಿಗಳಾಗಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.
ಹಿರಿಯ ರೇಡಿಯೇಷನ್ ಆಂಕೊಲಾಜಿಸ್ಟ್ ಡಾ.ವಿನಯ್‌ಕುಮಾರ್ ಮುಟ್ಟಗಿ ಮಾತನಾಡಿ, ತಂಬಾಕು 20ಕ್ಕೂ ಹೆಚ್ಚು ವಿಧದ ಕ್ಯಾನ್ಸರ್‌ಗಳಿಗೆ ಕಾರಣವಾಗಿದ್ದು, ಮುಂದಿನ 10 ವರ್ಷಗಳಲ್ಲಿ ತಂಬಾಕುಮುಕ್ತ ಸಮಾಜ ನಿರ್ಮಿಸಲು ಆಟೋ ಚಾಲಕರು ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಮೂಲಕ ಈ ಆರೋಗ್ಯ ಸಂದೇಶದ ಸಾರಥಿಗಳಾಗಬೇಕು ಎಂದು ಕೋರಿದರು.
ಮೆಡಿಕಲ್ ಮತ್ತು ಹೆಮಟೊ ಆಂಕೊಲಾಜಿಸ್ಟ್ ಹಾಗೂ ಮೂಳೆ ಮಜ್ಜೆ ಕಸಿ ತಜ್ಞ ಡಾ.ಕೆ.ಎನ್.ಸಂತೋಷ್‌ಕುಮಾರ್ ಮಾತನಾಡಿ, ನಿಯಮಿತ ತಪಾಸಣೆ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ತಿಳಿಸಿದರು.
ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಹಾಗೂ ರೋಬಾಟಿಕ್ ಸರ್ಜನ್ ಡಾ. ವಿಜಯ್ಕುಮಾರ್ ಮಾತನಾಡಿ, ಆಟೋ ಚಾಲಕರು ನಗರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. ಆದ್ದರಿಂದಲೇ ತಂಬಾಕಿನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಅವರನ್ನು ರಾಯಭಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದರು.
ಆಟೋ ಚಾಲಕರಿಗೆ ಉಚಿತ ತಪಾಸಣೆ
ಬಿಎಚ್‌ಐಒ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಧಮೇರ್ಲ ಮಾತನಾಡಿ, ದೀರ್ಘಕಾಲದ ಚಾಲನೆ, ವಾಯುಮಾಲಿನ್ಯ ಮತ್ತು ತಂಬಾಕು ಸೇವನೆಯ ಅಭ್ಯಾಸದಿಂದ ಆಟೋ ಚಾಲಕರಲ್ಲಿ ಬಾಯಿ ಹಾಗೂ ಗಂಟಲು ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಇದನ್ನು ತಡೆಯಲು ಕುವೆಂಪುನಗರದ ಬಿಎಚ್‌ಐಒ ಡೇ ಕೇರ್ ಸೆಂಟರ್‌ನಲ್ಲಿ ಆ.31ರವರೆಗೆ ಆಟೋ ಚಾಲಕರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಂಬಾಕು ಸೇವನೆ ಬಿಡಲು ಉಚಿತ ವೈದ್ಯಕೀಯ ಆಪ್ತ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದರು.