ಹುಣಸೂರು : ತಂಬಾಕಿಗೆ ಸೂಕ್ತ ದರ ದೊರಕಿಸುವಂತೆ ಆಗ್ರಹಿಸಿ ರೈತಸಂಘಟನೆಗಳ ಮುಖಂಡರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.
ಭಾನುವಾರ ಮೈಸೂರಿನ ಸಂಸದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರಾಜ್ಯ ವರ್ಜೀನಿಯ ತಂಬಾಕು ಬೆಳೆಗಾರರ ಒಕ್ಕೂಟದ ವತಿಯಿಂದ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ರೈತಭವನದಲ್ಲಿ ಡಿ.12ರಂದು ಆಯೋಜಿಸಿದ್ದ ರೈತರ ಸಭೆಯಲ್ಲಿ ತಂಬಾಕು ದರ ಕುಸಿತದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದರು. ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಡಿ.25ರಂದು ರಾಜ್ಯಾದ್ಯಂತ ತಂಬಾಕು ಹರಾಜು ಮಾರುಕಟ್ಟೆಗಳ ಬಂದ್‌ಗೆ ನಿರ್ಧರಿಸಲಾಗಿತ್ತು. ಮಾಧ್ಯಮದಲ್ಲಿ ಸಭೆಯ ನಿರ್ಣಯಗಳು ಪ್ರಕಟವಾದ ನಂತರ ಸಂಸದರು ರೈತರೊಂದಿಗೆ ಮಾತನಾಡಿ, ಕೇಂದ್ರದ ವಾಣಿಜ್ಯ ಸಚಿವರ ಬಳಿ ನಿಯೋಗ ತೆರಳಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲು ಸಿದ್ಧನಿದ್ದು ರೈತರು ಬರಬೇಕೆಂದು ಕೋರಿದ್ದಾರೆ.ಹಾಗಾಗಿ ಇಂದು ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಕೇಂದ್ರ ವಾಣಿಜ್ಯ ಸಚಿವರ ಬಳಿ ರೈತನಿಯೋಗ ಭೇಟಿಗೆ ಸಮಯ ದೊರಕಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಅತ್ಯಂತ ಕಡಿಮೆ ಬೆಲೆಗೆ ರೈತರು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ಪಕ್ಕದ ಆಂದ್ರ ಪ್ರದೇಶದಲ್ಲಿ ಉತ್ತಮ ದರ ನೀಡುತ್ತಿರುವ ಕಂಪನಿಗಳು ಇಲ್ಲೇಕೆ ಹೀಗೆ ಎಂದು ತಿಳಿಯುತ್ತಿಲ್ಲ. ಇಡೀ ತಂಬಾಕು ಮಾರುಕಟ್ಟ ಆಂಧ್ರಪ್ರದೇಶದ ಬಲಿಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಪಿಮುಷ್ಟಿಯಲ್ಲಿದೆ. ಈಗಾಗಲೇ ನಿರ್ಧರಿಸಿದ್ದಂತೆ ಡಿ.25ರಂದು ಮಾರುಕಟ್ಟೆ ಬಂದ್ ನಡೆಯಲಿದೆ. ವಾಣಿಜ್ಯ ಮಂತ್ರಿಗಳೊಂದಿಗಿನ ಸಭೆಯ ಫಲಿತಾಂಶದ ನಂತರ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.
ಮನವಿ ಪತ್ರ ಸಲ್ಲಿಕೆ ವೇಳೆ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಕಾಫ್ ಕಮಿಟಿ ಸದಸ್ಯ ನಿಲುವಾಗಿಲು ಪ್ರಭಾಕರ್, ಸದಸ್ಯರಾದ ಧನಂಜಯ, ರೈತಸಂಘದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಇತರರಿದ್ದರು.