ಭಕ್ತಿ-ಭಾವನೆಯಿಂದ ಅಂತರಂಗದಲ್ಲಿ ದೇವರ ದರ್ಶನ ಸಾಧ್ಯ

ತಿ.ನರಸೀಪುರ ತಾಲೂಕು ಹೊಸೂರು ಹುಂಡಿ ಗ್ರಾಮದ ಬಳಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಂತ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ ಇತರರು ಇದ್ದರು.
ತಿ.ನರಸೀಪುರ ತಾಲೂಕು ಹೊಸೂರು ಹುಂಡಿ ಗ್ರಾಮದ ಬಳಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಂತ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
  • ಹೊಸೂರುಹುಂಡಿ ಗ್ರಾಮದಲ್ಲಿ ಹೊರವಲಯ
ತಿ.ನರಸೀಪುರ: ಭಗವಂತನನ್ನು ಭೌತಿಕವಾಗಿ ನೋಡಲು ಸಾಧ್ಯವಿಲ್ಲ. ಆದರೆ ಭಕ್ತಿ ಭಾವನೆಯಿಂದ ಅಂತರಂಗದಲ್ಲಿ ದರ್ಶನ ಪಡೆಯಲು ಸಾಧ್ಯ ಎಂದು ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಸೂರುಹುಂಡಿ ಗ್ರಾಮದಲ್ಲಿ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಾರನಹಳ್ಳಿ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭೂಮಿ ಮೇಲೆ ಸಾವಿರಾರು ವರ್ಷಗಳಿಂದ ದೇವರನ್ನು ವಿವಿಧ ರೀತಿಯಲ್ಲಿ ಆರಾಧಿಸುವ ಪರಂಪರೆ ಬೆಳೆದು ಬಂದಿದೆ. ಪ್ರಕೃತಿಯಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಕೂಡ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಪ್ರಕೃತಿ ಮೂಲಕ ದೇವರನ್ನು ಕಂಡ ನಂತರ ಅದಕ್ಕೆ ಮೂರ್ತಿ ರೂಪ ಕೊಟ್ಟು ಭಗವಂತನನ್ನು ಕಾಣುವ ಪ್ರಯತ್ನಗಳು ನಡೆದು ಇಂದು ದೇವಸ್ಥಾನಗಳು ನಿರ್ಮಾಣವಾಗಿವೆ ಎಂದು ತಿಳಿಸಿದರು.
ಜಗತ್ತನ್ನು ನಿಯಂತ್ರಿಸುತ್ತಿರುವ ಭಗವಂತ ನಮ್ಮಲ್ಲೂ ಇದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡರೆ ಭಕ್ತರು ದೇವಸ್ಥಾನಕ್ಕೆ ಬಂದಿದ್ದಕ್ಕೆ ಸಾರ್ಥಕವಾಗಲಿದೆ. ಜೀವನದಲ್ಲಿ ಸದಾ ಒಳ್ಳೆಯದನ್ನೇ ಭಾವಿಸುವವರಿಗೆ ದೇವರ ದರ್ಶನ ಸಿಗಲಿದೆ. ದೇವಸ್ಥಾನಗಳು ಅಂತಹ ಪವಿತ್ರ ಭಾವನೆ ಉಂಟು ಮಾಡುವ ಕೇಂದ್ರಗಳಾಗಿವೆ ಎಂದು ನುಡಿದರು.
ನಾವಿದ್ದ ಕಡೆಯಲ್ಲಿಯೇ ಪ್ರಾರ್ಥನೆ ಮಾಡಿದರೆ ಸಾಕು ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆ ಇರುತ್ತದೆ. ಭಗವಂತ ಒಲಿಯಬೇಕಾದರೆ ನಂಬಿಕೆ ಬಹು ಮುಖ್ಯ. ದೇವರು ನನಗೊಲಿಯುತ್ತಾನೋ ಇಲ್ಲವೋ?, ಅನುಗ್ರಹ ಮಾಡುತ್ತಾನೋ ಇಲ್ಲವೋ? ಎಂಬ ಭಾವನೆ ಬದಿಗಿಟ್ಟು ಶ್ರದ್ಧೆಯಿಂದ ಭಗವಂತನಲ್ಲಿ ನಂಬಿಕೆ ಇಟ್ಟರೆ ಮನುಷ್ಯನ ಬಯಕೆಗಳು ಈಡೇರಲು ಸಾಧ್ಯ. ಮುಖ್ಯವಾಗಿ ಭಗವಂತ ಇದ್ದಾನೆ ಎಂಬ ನಂಬಿಕೆ ಇರಬೇಕು. ಜಗತ್ತನ್ನೆಲ್ಲ ಆವರಿಸಿರುವ ದೇವರು ನಮ್ಮಲ್ಲೂ ಇದ್ದಾನೆ. ಅವನು ನಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ಅಚಲ ನಂಬಿಕೆ ಹೊಂದಿರಬೇಕು ಎಂದು ಶ್ರೀಗಳು ಹೇಳಿದರು.
ಬಸವಗಳನ್ನು ಅನಾವರಣ ಮಾಡಿ ಮಾತನಾಡಿದ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ಅನೇಕ ಭಾಗಗಳ ರೈತಾಪಿ ವರ್ಗದವರಿಗೆ ಸುತ್ತೂರು ಶ್ರೀಗಳು ಶಕ್ತಿಯಾಗಿದ್ದಾರೆ. ಆ ಭಾಗದ ಅನೇಕ ಕೆರೆಗಳಿಗೆ ನೀರು ತುಂಬಿಸುವಂತಹ ಕಾಯಕದಲ್ಲಿ ಅವರ ಪಾತ್ರ ಮಹತ್ತರವಾದದ್ದು. ಬಹುಶಃ 21 ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ ಪ್ರಭು, ತೋಂಟದ ಸಿದ್ದಲಿಂಗೇಶ್ವರ, ಮಲೆ ಮಹದೇಶ್ವರರನ್ನು ನಾವು ನೋಡಿಲ್ಲ. ಅವರೆಲ್ಲರ ಪ್ರತಿ ರೂಪವಾಗಿ ಸುತ್ತೂರು ಶ್ರೀಗಳು ನಮ್ಮೊಂದಿಗೆ ಇದ್ದಾರೆ ಎಂದರು.
ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬೊಮ್ಮನಹಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಮಹಂತ ಶ್ರೀಗಳು ಜೋಡಿ ಬಸವೇಶ್ವರ ದೇವಸ್ಥಾನವನ್ನು ಲೋಕಾರ್ಪಣೆ ಗೊಳಿಸಿದರು. ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಹೊಸೂರು ಹುಂಡಿ ಗುರುಮಲ್ಲೇಶ್ವರ ದಾಸೋಹ ಮಠಾಧ್ಯಕ್ಷರಾದ ರಾಜಶೇಖರ ಸ್ವಾಮೀಜಿ, ದಯಾನಂದಸ್ವಾಮಿ, ನಾಗೇಶ್, ಮಾಡ್ರಹಳ್ಳಿ ಪಟ್ಟದ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕರೋಹಟ್ಟಿ ವಿರಕ್ತಮಠದ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ನೆರಗ್ಯಾತನಹಳ್ಳಿ ಮಠದ ಇಮ್ಮಡಿ ಶಿವಕುಮಾರಸ್ವಾಮಿ, ಕುದೇರು ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಸೋಸಲೆ ತೋಪಿನ್ಮಠದ ಇಮ್ಮಡಿ ಷಡಕ್ಷರ ಸ್ವಾಮೀಜಿ, ಮುಡುಕುತೊರೆ ಕಲ್ಲು ಮಠದ ನಂದಿಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಳ್ಳೀಪುರ ಪಟ್ಟದ ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಕುರುಬೂರು ಪಟ್ಟದ ಮಠದ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net