ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದವರ ಬಂಧನ

ಅಪರಾಧ
ಅಪರಾಧ
Published on

ಮೈಸೂರು:

ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಲೆವೆಲ್-1 ಪರೀಕ್ಷೆಯಲ್ಲಿ ಅಂಗವಿಕಲ ಅಭ್ಯರ್ಥಿ ಎಂದು ನಕಲಿ ದಾಖಲೆ ನೀಡಿ ಬೇರೆಯವರಿಂದ ಪರೀಕ್ಷೆ ಬರೆಸಲು ಯತ್ನಿಸಿದ ಪ್ರಕರಣದಲ್ಲಿ ಮೂವರನ್ನು ನಗರದ ಹೆಬ್ಬಾಳು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ದೌಸಾ ನಿವಾಸಿ ವಿಕಾಸ್ ಮೀನಾ, ಜೈಪುರ ನಿವಾಸಿ ವಿಜಯ್ ಮೀನಾ , ಬಿಹಾರದ ಸಾರಣ್ ಜಿಲ್ಲೆಯ ಪಿಪ್ರಾ ನಿವಾಸಿ ಸುಮಿತ್ ಕುಮಾರ್‌ಸಿಂಗ್ ಬಂಧಿತರು.
ಆಗಸ್ಟ್ 6ರಂದು ಹೆಬ್ಬಾಳಿನ ಐಯಾನ ಡಿಜಿಟಲ್ ಝೋನ್ (ಐಡಿಝೆಡ್) ಪರೀಕ್ಷಾ ಕೇಂದ್ರದಲ್ಲಿ ಆರ್‌ಆರ್‌ಬಿ ಪರೀಕ್ಷೆ ನಿಗದಿ ಯಾಗಿತ್ತು. ಅಂದು ಬೆಳಗ್ಗೆ 8.11ಕ್ಕೆ ವಿಕಾಸ್ ಮೀನಾ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಅವರೊಂದಿಗೆ ಸುಮಿತ್ ಕುಮಾರ್ ಸಿಂಗ್ ಇದ್ದರು. ಸುಮಿತ್ ತನ್ನ ಬಲಗೈಗೆ ಕ್ರೇಪ್ ಬ್ಯಾಂಡೇಜ್ ಸುತ್ತಿಕೊಂಡು ನನಗೆ ಪರೀಕ್ಷೆ ಬರೆಯಲು ಅಗದಿರುವುದರಿಂದ ಬರಹ ಸಹಾಯಕನನ್ನು ಕರೆ ತಂದಿರುವುದಾಗಿ ವಿಕಾಸ್ ಪರಿಚಯಿಸಿದ್ದ.
ಅಲ್ಲದೇ ವೈದ್ಯರ ಪ್ರಮಾಣಪತ್ರವೊಂದನ್ನು ನೀಡಿ, ಸಹಾಯಕ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿದ್ದಾನೆ. ಆದರೆ ಐಯಾನ್ ಡಿಜಿಟಲ್ ಸಂಸ್ಥೆಯ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಇಬ್ಬರ ಚಲನ ವಲನ ಗಮನಿಸಿ ಅನುಮಾನಗೊಂಡಿದ್ದಾರೆ. ಹೀಗಾಗಿ ಬರಹ ಸಹಾಯಕ ಪರೀಕ್ಷೆ ಬರೆಯಲು ಅವಕಾಶ ನೀಡದೆ, ಪರೀಕ್ಷೆ ಮುಗಿಯುವವರೆಗೆ ಆತನನ್ನು ಪರೀಕ್ಷಾ ಕೇಂದ್ರದಲ್ಲೇ ತಡೆಹಿಡಿಯಲಾಯಿತು.
ಪರೀಕ್ಷೆ ಮುಗಿದ ಬಳಿಕ ವಿಕಾಸ್ ಮೀನಾ ಮತ್ತು ಸುಮಿತ್ ಕುಮಾರ್ ಸಿಂಗ್ ಅವರಿಂದ ಅಧಿಕಾರಿಗಳು ಹೇಳಿಕೆ ಪಡೆದುಕೊಂಡರು. ವಿಚಾರಣೆ ವೇಳೆ, ಜೈಪುರದ ವಿಜಯ್ ಮೀನಾ ಅವರ ಸೂಚನೆಯಂತೆ ತಮ್ಮನ್ನು ಮೈಸೂರಿಗೆ ಪರೀಕ್ಷೆ ಬರೆಯಲು ಕಳುಹಿಸಲಾಗಿತ್ತು ಎಂದು ಇಬ್ಬರೂ ತಿಳಿಸಿದ್ದಾರೆ ಎನ್ನಲಾಗಿದೆ.
ಸುಮಿತ್‌ಕುಮಾರ್ ಸಿಂಗ್ ಈ ಹಿಂದೆ ತಾನು ಮಧುರೈನಲ್ಲಿ ನಡೆದ ಆರ್‌ಆರ್‌ಬಿ ಪರೀಕ್ಷೆಯೊಂದರಲ್ಲಿ ಇದೇ ರೀತಿ ಬದಲಿಯಾಗಿ ಪರೀಕ್ಷೆ ಬರೆದಿದ್ದು, ಈಗ ವಿಜಯ್ ಮೀನಾ ತನ್ನನ್ನು ಮೈಸೂರಿಗೆ ಕಳುಹಿಸಿದ್ದ. ವಿಕಾಸ್‌ಮೀನಾ ಪರವಾಗಿ ಬರಹ ಸಹಾಯಕನಾಗಿ ಪರೀಕ್ಷೆ ಬರೆಯಲು ಹಣ ನೀಡಿರುವುದಾಗಿ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಸಂಬಂಧ ಮೂವರನ್ನೂ ಪೊಲೀಸರು ಬಂಧಿಸಿದ್ದು, ಪರೀಕ್ಷಾ ಅಕ್ರಮದಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net