ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಆಗಲ್ಲ

ತಿ.ನರಸೀಪುರ ತಾಲೂಕಿನ ಆದಿಬೆಟ್ಟಹಳ್ಳಿ ಗ್ರಾಮದಲ್ಲಿ ಸಂಸದ ಸುನೀಲ್ ಬೋಸ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಎಚ್.ಎನ್.ಉಮೇಶ್, ಎ.ಬಿ.ಮಂಜುನಾಥ್, ದಿಲೀಪ್ ಕುಮಾರ್, ಮಲ್ಲಯ್ಯ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಆದಿಬೆಟ್ಟಹಳ್ಳಿ ಗ್ರಾಮದಲ್ಲಿ ಸಂಸದ ಸುನೀಲ್ ಬೋಸ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಎಚ್.ಎನ್.ಉಮೇಶ್, ಎ.ಬಿ.ಮಂಜುನಾಥ್, ದಿಲೀಪ್ ಕುಮಾರ್, ಮಲ್ಲಯ್ಯ ಇತರರು ಇದ್ದರು.
Published on
ತಿ.ನರಸೀಪುರ: ಸಚಿವರು, ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯ ಯಾರೇ ಹೇಳಿದರೂ ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವದ ಬದಲಾವಣೆ ಆಗಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂದರ್ಭದಲ್ಲಿ ಕರೋಹಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಯನ್ನು ಪಕ್ಷ ನಿರ್ಧರಿಸಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಆಗದು. ಹೈಕಮಾಂಡ್ ಸದೃಢ ಹಾಗೂ ಸಬಲವಾಗಿದ್ದು, ಸೂಕ್ತ ಸಮಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕರೆಲ್ಲರೂ ಬದ್ಧರಾಗಬೇಕಿದೆ ಎಂದರು.
ಸಚಿವ ಮಹದೇವಪ್ಪ ಕೇವಲ ದಸರಾ ಉದ್ಘಾಟನೆ ಹಾಗೂ ಬಾವುಟ ಹಾರಿಸುವುದಕ್ಕಷ್ಟೇ ಮೈಸೂರಿನಲ್ಲಿ ಸೀಮಿತರಾಗಿದ್ದಾರೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯವರದ್ದೇ ಸರ್ಕಾರವಿತ್ತು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದರು. ಆ ವೇಳೆ ಅವರು ರಾಜ್ಯಕ್ಕೆ ನೀಡಿದ ಕೊಡುಗೆಯೇನು ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆ ನವೀಕರಣಕ್ಕೆ ನೂರಾರು ಕೋಟಿ ರೂ.ಗಳ ಅನುದಾನ ನೀಡಿದ್ದು ಯಾರು ಎಂಬುದನ್ನು ಆರೋಪ ಮಾಡಿದವರು ನೆನಪಿಸಿಕೊಳ್ಳಲಿ. ಉಸ್ತುವಾರಿ ಸಚಿವರಾಗಿ ಮಹದೇವಪ್ಪ ಅವರೇ ದಸರಾ ಉದ್ಘಾಟನೆ ಮಾಡಬೇಕು, ಅದು ಬಿಟ್ಟು ಬೇರೆಯವರು ಮಾಡಲು ಸಾಧ್ಯವೇ ಎಂದು ಟಾಂಗ್ ನೀಡಿದರು.
ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅಪಾರವಾದ ಕೊಡುಗೆ ನೀಡಿದ್ದು, ಇನ್ನೂ ಎರಡೂವರೆ ವರ್ಷಗಳ ಅವಧಿಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಖಜಾನೆ ಖಾಲಿಯಾಗಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ತರಲು ಸಾಧ್ಯವಾಗುತ್ತಿತ್ತೆ. ರಾಜಕೀಯವಾಗಿ ವಿರೋಧ ಪಕ್ಷದವರು ನಾವು ಒಳ್ಳೆ ಕೆಲಸ ಮಾಡಿದರೂ ಟೀಕೆ ಮಾಡುತ್ತಾರೆ. ಅವರ ಟೀಕೆಗೆ ಹೆಚ್ಚಿನ ಮಹತ್ವ ನೀಡಲಾಗದು ಎಂದರು.
ಕ್ಷೇತ್ರದ ಅಭಿವೃದ್ಧಿಗೆ ನಮ್ಮ ತಂದೆಯೊಂದಿಗೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇನೆ. ಈ ಹಿಂದೆ ಚುನಾವಣೆ ವೇಳೆ ಕರೋಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಭರವಸೆ ನೀಡಿದ್ದೆ. ಅದರಂತೆ ಈಗ 4.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮುಂದಿನ ವಾರ ಭೂಮಿಪೂಜೆ ಮಾಡಲಾಗುತ್ತದೆ. ಕ್ಷೇತ್ರದ ರೈತರ ಬಹು ನಿರೀಕ್ಷಿತ ಚಿದರವಳ್ಳಿ-ಉಕ್ಕಲಗೆರೆ ನಾಲಾ ಕಾಮಗಾರಿಗೆ ನೂರು ಕೋಟಿ ರೂ. ಬಿಡುಗಡೆಯಾಗಿದ್ದು, ಸಚಿವರೊಡಗೂಡಿ ಫೆ.20ರಂದು ಭೂಮಿ ಪೂಜೆ ಮಾಡಲಾಗುವುದು. 100 ಕೋಟಿ ರೂ. ವೆಚ್ಚದಲ್ಲಿ ತುರುಗನೂರು ನಾಲೆ ಆಧುನಿಕರಣ ಕಾಮಗಾರಿ ಮುಗಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸಂಸದರು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಬನ್ನಹಳ್ಳಿಹುಂಡಿ ಗ್ರಾಮದ ಸಾಮಾನ್ಯ ವರ್ಗದ ಬೀದಿಯ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಕರೋಹಟ್ಟಿ, ವಾಟಾಳು, ಹ್ಯಾಕನೂರು, ಅಡಿಬೆಟ್ಟಹಳ್ಳಿ, ಮೂಗೂರು ಮೋಳೆ, ಹೊಸಹಳ್ಳಿ ಮೋಳೆ, ಮಾಡ್ರಹಳ್ಳಿ, ಕನ್ನಹಳ್ಳಿ, ಕೊತ್ತೇಗಾಲ ಹಾಗೂ ಕುರುಬೂರು ಗ್ರಾಮಗಳಲ್ಲಿ ಸಾಮಾನ್ಯ ವರ್ಗದ ಕಾಲನಿ ಹಾಗೂ ಪರಿಶಿಷ್ಟ ಜಾತಿ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ.ಎಸ್.ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಹ್ಯಾಕನೂರು ಉಮೇಶ್, ಮಾಜಿ ಸದಸ್ಯ ಕುಕ್ಕೂರು ಗಣೇಶ್, ಸೋಸಲೆ ಪಿಎಸಿಸಿಎಸ್ ಮಾಜಿ ಅಧ್ಯಕ್ಷರಾದ ಎಂ.ಪರಶಿವಮೂರ್ತಿ, ಎ.ಬಿ.ಮಂಜುನಾಥ್, ಪುಟ್ಟಸುಬ್ಬಯ್ಯ, ಉಮೇಶ್, ರಂಜಿತ್, ಹ್ಯಾಕನೂರು ಡೇ ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷ ಶಿವಕುಮಾರ್, ಮಾಜಿ ಸದಸ್ಯ ಮಹೇಶ, ಯಜಮಾನ ಲಿಂಗರಾಜು, ಪಿ.ಮಹದೇವಸ್ವಾಮಿ, ವಾಟಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗೇಶ್, ಮಾಜಿ ಸದಸ್ಯ ಎಂ.ಬಿ.ಸಾಗರ್, ಗುತ್ತಿಗೆದಾರರಾದ ರಾಜೇಗೌಡ, ದಿಲೀಪ್ ಕುಮಾರ್, ಕೆ.ಎಂ.ಮಧುಕುಮಾರ್, ಸಂಸದರ ಆಪ್ತ ಕಾರ್ಯದರ್ಶಿ ಬಿ.ಬಸವರಾಜು, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಜಿಪಂ ಎಇಇಗಳಾದ ಪಿ.ಎನ್.ಚರಿತ, ಕೆ.ಶಿವರಾಜು, ದೇವರಾಜು, ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ಚಂದ್ರನ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಸಿಡಿಪಿಒ ಗೋವಿಂದರಾಜು, ಬಿಸಿಎಂ ವಿಸ್ತರಣಾಧಿಕಾರಿ ಎಂ.ರಾಜಣ್ಣ, ಮುಖಂಡರಾದ ಎಂ.ಸಾಗರ್, ಕನ್ನಳ್ಳಿ ಲಕ್ಷ್ಮಣ, ಕೆ.ಎಂ.ಶಿವಕುಮಾರ್, ಕೆ.ಎನ್.ಬಸವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net