ದ್ವೇಷ ರಾಜಕಾರಣಕ್ಕೆ ತಕ್ಕ ಉತ್ತರ ಸಿಗಲಿದೆ

ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ಮಾಜಿ ಶಾಸಕ ಕೆ.ಮಹದೇವ್ ವಿತರಿಸಿದರು. ಅಣ್ಣಯ್ಯ ಶೆಟ್ಟಿ, ಎಂ.ಜೆ.ಸ್ವಾಮಿ, ಸುನೀತಾ ಮಂಜುನಾಥ್, ಆಶಾ, ಜೆ.ಎಸ್.ನಾಗರಾಜ್, ತಿಮ್ಮನಾಯಕ ಇದ್ದರು.
ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ಮಾಜಿ ಶಾಸಕ ಕೆ.ಮಹದೇವ್ ವಿತರಿಸಿದರು. ಅಣ್ಣಯ್ಯ ಶೆಟ್ಟಿ, ಎಂ.ಜೆ.ಸ್ವಾಮಿ, ಸುನೀತಾ ಮಂಜುನಾಥ್, ಆಶಾ, ಜೆ.ಎಸ್.ನಾಗರಾಜ್, ತಿಮ್ಮನಾಯಕ ಇದ್ದರು.
Published on
ಪಿರಿಯಾಪಟ್ಟಣ: ಪದಾಧಿಕಾರಿಗಳಾಗಿ ನೇಮಕಗೊಳ್ಳುತ್ತಿರುವವರು ನಾಯಕತ್ವ ಹಾಗೂ ಪಕ್ಷಕ್ಕೆ ಕಳಂಕ ತರದಂತೆ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ಕೆ.ಮಹದೇವ ತಿಳಿಸಿದರು.
ಪಿರಿಯಾಪಟ್ಟಣದಲ್ಲಿ ಸೋಮವಾರ ಜೆಡಿಎಸ್ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಿಸಿ ಮಾತನಾಡಿ, ಮುಂದಿನ ಎಲ್ಲ ಚುನಾವಣೆಗಳಿಗೂ ಪಕ್ಷ ಸಂಘಟನೆ ಮಾಡಲು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಘಟನೆಗೆ ಮಾಡಲು ನಿರ್ಲಕ್ಷೃ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗುವುದು ಎಂದರು.
ಇತ್ತೀಚೆಗೆ ಸಚಿವ ಕೆ.ವೆಂಕಟೇಶ್ ನನ್ನ ಬಗ್ಗೆ ಹಗುರವಾಗಿ ಮತ್ತು ನಿರಾಧಾರ ಆರೋಪ ಮಾಡಿದ್ದಾರೆ. ತಾಲೂಕಿನಲ್ಲಿ ಎಚ್.ಎಂ.ಚನ್ನಬಸಪ್ಪ, ಕೆ.ಎಸ್.ಕಾಳಮರೀಗೌಡ, ಎಚ್.ಸಿ.ಬಸವರಾಜು ಮತ್ತು ನಾನು ಸೇರಿದಂತೆ ನಮ್ಮ ಶಾಸಕತ್ವದ ಅವಧಿಯಲ್ಲಿ ನಮ್ಮದೇ ಆದ ಕೊಡುಗೆ ನೀಡಿದ್ದೇವೆ. ಆದರೆ, ಈ ಕ್ಷೇತ್ರದಲ್ಲಿ ಬೇರೆಯವರ ಕೊಡುಗೆ ಏನೂ ಇಲ್ಲ. ಎಲ್ಲವನ್ನು ನಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದು ಸಚಿವರಿಗೆ ಗೌರವ ತರುವುದಿಲ್ಲ ಎಂದರು.
ಸಚಿವರು ತಮ್ಮ ಮಗನನ್ನು ರಾಜಕೀಯದಲ್ಲಿ ಪ್ರತಿಷ್ಠಾಪಿಸಲು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇನ್ನು ಮುಂದೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅವರು ಉತ್ತಮ ರಾಜಕಾರಣಿಯಾಗಿದ್ದರೆ ನಮ್ಮನ್ನು ಧೈರ್ಯವಾಗಿ ಎದುರಿಸಲಿ. ಅದನ್ನು ಬಿಟ್ಟು ಕೆಟ್ಟ ಪದಗಳನ್ನು ಬಳಕೆ ಮಾಡಿ ಬೈಯ್ಯುವುದು ಎಷ್ಟರ ಮಟ್ಟಿಗೆ ಸರಿ. ನಮ್ಮ ಪರವಾಗಿ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಸುಳ್ಳು ಕೇಸು ಹಾಕಿಸಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ ಎಂದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿಸಿದ 4600ಕ್ಕೂ ಹೆಚ್ಚು ವಿವಿಧ ಮಾಸಾಶನಗಳನ್ನು ರದ್ದುಪಡಿಸಲಾಗಿದೆ. ಸಾಗುವಳಿ ಚೀಟಿಗಳನ್ನು ರದ್ದುಪಡಿಸುವಂತೆ ಎಸಿಗೆ ಶಿಫಾರಸು ಮಾಡಿದ್ದಾರೆ. ಇದು ದ್ವೇಷದ ರಾಜಕಾರಣದ ಪರಮಾವಧಿ. ಇದಕ್ಕೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ತಾಲೂಕಿನ ರಾಗಿ ಕೇಂದ್ರಗಳಲ್ಲಿ ಕ್ವಿಂಟಾಲ್‌ಗೆ ತಲಾ ನಾಲ್ಕು ಕೆಜಿ ಕಡಿಮೆ ಮಾಡಲಾಗುತ್ತಿದೆ. ಇದು ಭ್ರಷ್ಟಾಚಾರದ ಉತ್ತಮ ಉದಾಹರಣೆ. ಈ ವಿಷಯ ಇನ್ನೂ ಮುಖ್ಯಮಂತ್ರಿಗಳಿಗೆ ತಿಳಿದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾಗಿ ಅಣ್ಣಯ್ಯಶೆಟ್ಟಿ ಅವರನ್ನು ಮುಂದುವರಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜೆ.ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುನೀತಾ ಮಂಜುನಾಥ್, ಉಪಾಧ್ಯಕ್ಷರಾಗಿ ಆಶಾ, ಕಾನೂನು ಘಟಕದ ಅಧ್ಯಕ್ಷರಾಗಿ ಜೆ.ಎಸ್.ನಾಗರಾಜ್, ಎಸ್.ಟಿ. ಘಟಕದ ಅಧ್ಯಕ್ಷರಾಗಿ ತಿಮ್ಮನಾಯಕ, ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ರವಿ, ಕೋರ್ ಕಮಿಟಿ ಅಧ್ಯಕ್ಷರಾಗಿ ಎಚ್.ಡಿ.ರಾಜೇಂದ್ರ, ಒಬಿಸಿ ಘಟಕದ ಅಧ್ಯಕ್ಷರಾಗಿ ಡಿ.ಎ.ನಾಗೇಂದ್ರ, ಪದಾಧಿಕಾರಿಗಳಾಗಿ ಪಿ.ಸಿ.ಕೃಷ್ಣ, ಸುನಿಲ್, ಮಂಜುನಾಥ್ ಸಿಂಗ್, ಜವರಪ್ಪ, ಮಂಜುನಾಥ್, ಮುತ್ತುರಾಜ್ ಸೇರಿದಂತೆ ಹಲವರನ್ನು ನೇಮಕ ಮಾಡಿ ನೇಮಕಾತಿ ಪತ್ರ ವಿತರಿಸಲಾಯಿತು.
ಕೆ.ರಮೇಶ್, ಗೋವಿಂದೇಗೌಡ, ರಾಜೇಗೌಡ, ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net