ನ್ಯಾಯ ವಿತರಣೆಯಲ್ಲಿ ರಾಜಿ ಬೇಡ

ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 46ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳು.
ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 46ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳು.
Published on
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ 46ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿ ಜಾತಿ ವ್ಯವಸ್ಥೆಯಿದ್ದು, ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ ಎಂದು ಹೇಳಿದರು.
ಮಧ್ಯ ರಾತ್ರಿಯಲ್ಲಿ ಮಹಿಳೆಯರು ನಿರ್ಭಯದಿಂದ ಓಡಾಡುವಂತಾದಾಗ ಮಾತ್ರ, ನಿಜಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಲ್ಲದೆ, ಕಾನೂನು ಸುವ್ಯವಸ್ಥೆ ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.
ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಾಗ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ. ಕೆಲಸದಲ್ಲಿರುವ ಸಂದರ್ಭದಲ್ಲಿ ಕುಟುಂಬದವರ ಯೋಚನೆ ಮಾಡುವ ಅಗತ್ಯವಿಲ್ಲ. ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತೀರಿ ಎಂದು ನಂಬಿರುವುದಾಗಿ ಹೇಳಿದರು.
ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರೊಂದಿಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು. ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂತಹ ಆಮಿಷಗಳಿಗೆ ಒಳಗಾಗಬಾರದು. ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಕಿವಿ ಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net