ಪಠ್ಯದ ಜತೆ ಪಠ್ಯೇತರ ಚಟುವಟಿಕೆಯೂ ಇರಲಿ: ಪ್ರೊ.ಮೊರಬದ ಮಲ್ಲಿಕಾರ್ಜುನ

 ಅಂತರ ಪ್ರೌಢಶಾಲಾ ನೃತ್ಯ ಸ್ಪರ್ಧೆ ‘ಸಂಭ್ರಮ’ ವನ್ನು ಉದ್ಘಾಟಿಸಲಾಯಿತು
ಅಂತರ ಪ್ರೌಢಶಾಲಾ ನೃತ್ಯ ಸ್ಪರ್ಧೆ ‘ಸಂಭ್ರಮ’ ವನ್ನು ಉದ್ಘಾಟಿಸಲಾಯಿತು
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು
  • ಪ್ರತಿಭೆ ಹೊರತರಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು
ಮೈಸೂರು: ಎಲ್ಲರ ಅಂತರಂಗದಲ್ಲೂ ಒಂದು ಪ್ರತಿಭೆ ಅಡಗಿರುತ್ತದೆ, ಅದು ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ ಪ್ರೌಢಶಾಲಾ ನೃತ್ಯ ಸ್ಪರ್ಧೆ ‘ಸಂಭ್ರಮ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದು, ಅದನ್ನು ಹೊರತರಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪುರಸ್ಕೃತ ಪ್ರೊ.ಕೆ.ರಾಮಮೂರ್ತಿರಾವ್ ಮಾತನಾಡಿ, ಎಲ್ಲರೂ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನೃತ್ಯ, ಸಂಗೀತ, ಸಾಹಿತ್ಯ ಇವುಗಳು ಸಹ ಪಠ್ಯದ ಒಂದು ಭಾಗವಾಗಿವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪರಿಪೂರ್ಣವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು. 
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇವುಗಳು ಪೂರಕವಾಗಿವೆ. ಸೋಲು, ಗೆಲುವುಗಳನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕು. ಚಿತ್ರಕಲೆ, ಸಂಗೀತ ಇವುಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಸಮಯಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ತಿಳಿಸಿದರು.
ಚಂಪಕ ಅಕಾಡೆಮಿ ಸಂಸ್ಥಾಪಕಿ ವಿದುಷಿ ಡಾ.ನಾಗಲಕ್ಷ್ಮೀ ನಾಗರಾಜನ್ ಮಾತನಾಡಿ, ಸಂಭ್ರಮ ಕಾರ್ಯಕ್ರಮವು ನೃತ್ಯ, ಸಂಗೀತ ಮುಂತಾದ ಕಲೆಗಳನ್ನು ಉಳಿಸಿ ಬೆಳೆಸಲು ಸಹಾಯಕವಾಗಿದೆ. ಜೆಎಸ್‌ಎಸ್ ಸಂಸ್ಥೆ ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ ಎಂದರು.
ಪ್ರಾಂಶುಪಾಲ ಟಿ.ಗುರುಪಾದಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಭ್ರಮ ಸಮಿತಿ ಸಂಚಾಲಕಿ ಎಂ.ಎಸ್. ರಶ್ಮಿ, ಸಹಸಂಚಾಲಕಿ ವೈ.ಎಸ್.ಶ್ವೇತಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net