ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ, ಜೆಡಿಎಸ್‌ನಿಂದಲೇ ಸ್ಪರ್ಧೆ : ಜಿ.ಟಿ. ದೇವೇಗೌಡ ಘೋಷಣೆ
ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ
Published on:
Copied
Follow Us
ಮೈಸೂರು: ನಾನು ಜೆಡಿಎಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಇದ್ದರೆ ಮತದಾರರು ನೀವು ಏನು ಹೇಳುತ್ತೀರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳೀದರು.
ತಾಲೂಕಿನ ಜಯಪುರ ಗ್ರಾಮದ ಕೋಣಪ್ಪ ಸ್ವಾಮಿ ದೇವಾಲಯ ಬಳಿ ಜುಂಪುರದಿಂದ ಬರಡನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2.64 ಕೋಟಿ ರೂ. ವೆಚ್ಚದ ರಸ್ತೆ ನಿರ್ವಾಣ ಕಾಮಗಾರಿ, ಜಯಪುರ ಗ್ರಾಮದ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ವಾತನಾಡಿದರು.
ಜೆಡಿಎಸ್ ಪಕ್ಷದಿಂದಲೇ ಮುಂದಿನ ಚುನಾವಣೆ ಎದುರಿಸುತ್ತೇನೆ. ಚುನಾವಣೆ ಟಿಕೆಟ್‌ಗೆ ಅರ್ಜಿ ಹಾಕಿ ಎಂದರೆ ಹಾಕುತ್ತೇನೆ. ನಾನು ಜೆಡಿಎಸ್ ಪಕ್ಷ ಬಿಡುವ ಮಾತೇ ಇಲ್ಲ. ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡದಿದ್ದರೆ ಕ್ಷೇತ್ರದ ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಈ ಹಿಂದೆ ನಾನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಜೆಡಿಎಸ್‌ಅನ್ನು ತಳಮಟ್ಟದಿಂದ ಕಟ್ಟುವಾಗ ಮಾಜಿ ಸಚಿವ ಸಾ.ರಾ. ಮಹೇಶ್ ಬಿಜೆಪಿಯಲ್ಲಿ ಇದ್ದರು. ಪಿರಿಯಾಪಟ್ಟಣ ಮಹದೇವು, ಹಾಲಿ ಸಚಿವ ಕೆ.ವೆಂಕಟೇಶ್ ಜತೆಗೆ ಇದ್ದರು. ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಊರಲ್ಲೇ ಇರಲಿಲ್ಲ, ಉಳಿದವರನ್ನಂತೂ ಕೇಳಲೇಬೇಡಿ. ಇವರು ಯಾರು ಇಲ್ಲದ ದಿನಗಳಲ್ಲಿ ನಾನು ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಗಲಿರುಳು ದುಡಿದು ಏಕಾಂಗಿಯಾಗಿ ಜೆಡಿಎಸ್ ಕಟ್ಟಿದೆ ಎಂದು ತಾವು ಪಟ್ಟ ಪರಿಶ್ರಮವನ್ನು ಜೆಡಿಎಸ್ ವರಿಷ್ಠರಿಗೆ ನೆನಪಿಸುವ ಕಾರ್ಯ ಮಾಡಿದರು.
ಜೆಡಿಎಸ್‌ನ 25 ಜನರು ಎಚ್.ಡಿ. ದೇವೇಗೌಡ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲು ತೆರಳಿದ್ದರು. ಅಲ್ಲಿಗೆ ಹೋದವರಿಗೆ ಎಚ್.ಡಿ. ದೇವೇಗೌಡರು ಹೇಳಿದ ಬುದ್ಧಿವಾತು ಏನೆಂದರೆ ‘ಜಿ.ಟಿ.ದೇವೇಗೌಡರು ನನ್ನ ಜತೆ ಇದ್ದು ಪಕ್ಷವನ್ನು ಕಟ್ಟಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರದ್ದೇ ಆದ ಶಕ್ತಿ ಹೊಂದಿದ್ದಾರೆ. ಅವರು ಇಂದು ವಿರೋಧ ಪಕ್ಷದ ನಾಯಕರಾಗಿದ್ದರೆ ವಿಧಾನಸಭೆ ಒಳಗೆ ಅವರು ಅತ್ಯಂತ ಯಶಸ್ವಿಯಾಗಿ ಆಡಳಿತ ಪಕ್ಷವನ್ನು ಎದುರಿಸಿ ನಿಲ್ಲುತ್ತಿದ್ದರು. ಜೆಡಿಎಸ್‌ಗೆ ವಿಧಾನಸಭೆಯಲ್ಲಿ ಗಟ್ಟಿ ಧ್ವನಿ ಇರುತ್ತಿತ್ತು. ಅವರನ್ನು ನಾವು ಸರಿಯಾದ ರೀತಿ ನಡೆಸಿಕೊಳ್ಳಬೇಕಿತ್ತು’ ಎಂದು ಬೇಸರದಿಂದ ಹೇಳಿದ್ದಾರೆ ಎಂದರು.
ನನಗೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡುವುದಿಲ್ಲ, ನಾನು ಬೇರೆ ಪಕ್ಷ ಸೇರುತ್ತೇನೆ ಎಂಬ ಊಹಾಪೋಹ ಇದೆ. ಈ ಊಹಾಪೋಹಕ್ಕೆ ಕಾರ್ಯಕರ್ತರು ಕಿವಿಗೊಡಬಾರದು. ಹುಣಸೂರು ಕ್ಷೇತ್ರದಲ್ಲಿ 25ರಿಂದ 30 ವರ್ಷಗಳ ಕಾಲ ನಾನು ದುಡಿದ ಹಿನ್ನೆಲೆಯಲ್ಲಿ ಇಂದು ಜಿ.ಡಿ. ಹರೀಶ್‌ಗೌಡ ಶಾಸಕರಾಗಿದ್ದಾರೆ. ಅವರು ಮತ್ತೇ ಹುಣಸೂರಲ್ಲಿ ಮರು ಆಯ್ಕೆಗೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ವಿಚಾರವನ್ನು ಕ್ಷೇತ್ರದ ಕಾರ್ಯಕರ್ತರಿಗೆ ಬಿಡುತ್ತೇನೆ. ನೀವು ನಿಲ್ಲಿ ಅಂದ್ರೆ ನಿಲ್ಲುತ್ತೇನೆ, ಬೇಡ ಬಿಟ್ ಬಿಡಿ ಅಂದ್ರೆ ಬಿಡುತ್ತೇನೆ. ಕ್ಷೇತ್ರದ ಜನರ ತೀರ್ಮಾನವೇ ಅಂತಿಮ ಎಂದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಎಸ್. ಶ್ರೀಕಾಂತ್, ದಾರಿಪುರ ಬಸವಣ್ಣ, ಬರಡನಪುರ ಬಸವಣ್ಣ, ಮರಿಸಿದ್ದೇಗೌಡ, ತಿಮ್ಮೇಗೌಡ, ಎಂ.ನಾಗರಾಜು, ಜವರನಾಯಕ, ಅಬ್ದುಲ್ ಮುತಾಲಿಫ್, ಬಿ.ರೇಣುಕಾ, ಮಾವಿನಹಳ್ಳಿ ಅಭಿಷೇಕ್, ರಾಜೇಶ್, ಗೋಪಾಲಪುರ ಬಿ.ಕೆ.ಬಸವೇಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.