ಆಸ್ತಿಗಾಗಿ ಗಲಾಟೆ, ಗದ್ದಲಗಳು ಸಾಮಾನ್ಯ ಎನಿಸಿದೆ. ಇದುವೇ ಪ್ರಾಣ ಮತ್ತು ಮಾನ ಹಾನಿ ಘಟನೆಗಳಿಗೂ ಕಾರಣವಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳ ಆಸ್ತಿಗಳಿಗೆ ವಾರಸುದಾರರೇ ಇಲ್ಲ. ಇವುಗಳು ಆಯಾಯ ಶಾಲೆಗಳ ಹೆಸರಿನಲ್ಲಿ ಆಸ್ತಿ ನೋಂದಣಿಯೇ ಆಗಿಲ್ಲ...!
ಸರ್ಕಾರಿ ಶಾಲೆಗಳ ಜಮೀನು ಅತಿಕ್ರಮಣ ತಡೆಯಲು ಮತ್ತು ಆಸ್ತಿ ಸಂರಕ್ಷಣೆಗಾಗಿ ‘ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನ’ ಜಾರಿಯಾಗಿ ಐದು ವರ್ಷವಾದರೂ ನಿರೀಕ್ಷಿತ ಮಟ್ಟದಲ್ಲಿ ಫಲಕೊಟ್ಟಿಲ್ಲ. ಹೀಗಾಗಿ, ಸರ್ಕಾರಿ ಶಾಲೆಗಳ ಆಸ್ತಿ ಕೈತಪ್ಪುವ ಭೀತಿ ಮುಂದುವರಿದಿದೆ. ಇವುಗಳ ಜಾಗ ಭೂಗಳ್ಳರ ಪಾಲಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶೇ.27.18ರಷ್ಟು ಸರ್ಕಾರಿ ಶಾಲೆಗಳ ಆಸ್ತಿ ಇನ್ನೂ ನೋಂದಣಿಯೇ ಆಗಿಲ್ಲ. ಇವುಗಳ ಜಾಗ ಭೂ ಒಡೆತನವೂ ಖಾತ್ರಿಯಾಗದಿರುವುದು ಅಚ್ಚರಿ.
ಶೇ.72ರಷ್ಟು ಶಾಲಾ ಆಸ್ತಿ ನೋಂದಣಿ:
ಜಿಲ್ಲೆಯಲ್ಲಿ 906 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 955 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 233 ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ 2,094 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
ಈ ಪೈಕಿ 690 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 684 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 151 ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ 1,525 ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿಯಾಗಿದ್ದು, ಸರ್ಕಾರಿ ಜಾಗ ಹದ್ದುಬಸ್ತು ಮಾಡಿ ರಕ್ಷಣೆ ಮಾಡಲಾಗಿದೆ. ಇವುಗಳು ಭೂವ್ಯಾಜ್ಯದಿಂದ ಮುಕ್ತವಾಗಿವೆ. ನೋಂದಣಿ ಗುರಿ ಸಾಧನೆ ಪ್ರಮಾಣ ಶೇ.72.82ರಷ್ಟಾಗಿದೆ.
ಅಡಕತ್ತರಿಯಲ್ಲಿ ಶಾಲಾ ಸ್ಥಿರಾಸ್ತಿ:
ಇನ್ನೂ ಬಹಳಷ್ಟು ಸರ್ಕಾರಿ ಶಾಲೆಗಳ ಆಸ್ತಿಗಳ ಮಾಲೀಕತ್ವವೇ ನಿಗದಿಯಾಗಿಲ್ಲ. ಆಯಾಯ ಶಾಲೆಗಳ ಸ್ಥಿರಾಸ್ತಿ ಅವುಗಳ ಹೆಸರಿನಲ್ಲಿ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಇಂತಹ 569 ಶಾಲೆಗಳಿವೆ. ಇದರಲ್ಲಿ 216 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 271 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 82 ಸರ್ಕಾರಿ ಪ್ರೌಢಶಾಲೆಗಳ ಆಸ್ತಿಗಳ ನೋಂದಣಿ ಇನ್ನೂ ಬಾಕಿ ಉಳಿದಿದೆ. ಇವುಗಳ ಆಸ್ತಿ ಸದ್ಯಕ್ಕೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಮೈಸೂರು ತಾಲೂಕಿನಲ್ಲೇ ಹಿನ್ನಡೆ:
ಮೈಸೂರು ತಾಲೂಕಿನಲ್ಲೇ ಸರ್ಕಾರಿ ಶಾಲೆಗಳ ಆಸ್ತಿ ಬಾಕಿ ಬಹಳಷ್ಟಿದೆ. 29 ಕಿರಿಯ ಪ್ರಾಥಮಿಕ, 61 ಹಿರಿಯ ಪ್ರಾಥಮಿಕ, 15 ಪ್ರೌಢಶಾಲೆಗಳ ಆಸ್ತಿ ನೋಂದಣಿ ಇನ್ನೂ ಸಾಧ್ಯವಾಗಿಲ್ಲ. ಭೂಮಿಯ ಬೆಲೆ ಗಗನಕ್ಕೇರಿರುವ ಮೈಸೂರು ತಾಲೂಕಿನಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ.
ನಂತರ ಸ್ಥಾನದಲ್ಲಿರುವ ಹುಣಸೂರು ತಾಲೂಕಿನಲ್ಲಿ 102 ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಇತ್ಯರ್ಥವಾಗಿಲ್ಲ. ಮೈಸೂರು ಉತ್ತರ ವಲಯದಲ್ಲಿ 73, ಮೈಸೂರು ದಕ್ಷಿಣ ವಲಯದಲ್ಲಿ 24, ಕೆ.ಆರ್.ನಗರ ತಾಲೂಕಿನಲ್ಲಿ 33, ಎಚ್.ಡಿ.ಕೋಟೆ ತಾಲೂಕಿನಲ್ಲಿ 93, ಪಿರಿಯಾಪಟ್ಟಣ ತಾಲೂಕಿನಲ್ಲಿ 62, ತಿ.ನರಸೀಪುರ ತಾಲೂಕಿನಲ್ಲಿ 42, ನಂಜನಗೂಡು ತಾಲೂಕಿನಲ್ಲಿ 35 ಸರ್ಕಾರಿ ಶಾಲೆಗಳ ಆಸ್ತಿ ಅವುಗಳ ಹೆಸರಿನಲ್ಲಿ ಇಲ್ಲವೇ ಇಲ್ಲ.
ಭೂದಾನ ಆಸ್ತಿಯದ್ದೇ ಸಮಸ್ಯೆ:
ಒಂದಷ್ಟು ಪ್ರಕರಣಗಳಲ್ಲಿ ಹಿಂದೆ ಶಾಲೆಗಳಿಗೆ ದಾನ ನೀಡಿದವರು ನಕಲಿ ದಾಖಲೆ ಸೃಷ್ಟಿಸಿ ತಾವು ದಾನ ನೀಡಿಲ್ಲ. ಇದು ತಮ್ಮದೇ ಜಾಗ ಎಂದು ಇದೀಗ ವಾದಿಸುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ದಾನ ನೀಡಿದ ಸಮಯದಲ್ಲಿ ಆ ಜಾಗವನ್ನು ಶಾಲೆ ಹೆಸರಿಗೆ ನೋಂದಣಿ ಆಗದೆ ನಿರ್ಲಕ್ಷಿಸಲಾಗಿದ್ದು, ಇದರ ಪರಿಣಾಮ ಈಗಲೂ ಆ ಜಾಗ ಮೂಲ ವಾರಸುದಾರರ ಹೆಸರಲ್ಲೇ ಇದೆ.
ಭೂಮಿ ಬೆಲೆಯೇರಿದಂತೆ ಆ ಕುಟುಂಬದ ವಾರಸುದಾರರು ತಮ್ಮ ಪೂರ್ವಜರು ದಾನ ಮಾಡಿರುವ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳಿಲ್ಲ. ಇದಕ್ಕೆ ನಮ್ಮ ಸಮ್ಮತಿಯೂ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲ ಶಾಲೆಗಳ ಜಾಗ ಭೂಗಳ್ಳರಿಂದ ಒತ್ತುವರಿಯಾಗಿರುವುದೂ ಇದೆ ಎಂದು ತಿಳಿದು ಬಂದಿದೆ.
ಜಟಿಲ ಸಮಸ್ಯೆಯಿಂದ ಅಭಿಯಾನಕ್ಕೆ ಹಿನ್ನೆಡೆ:
ಸರ್ಕಾರಿ ಶಾಲೆ, ಕಾಲೇಜುಗಳ ಸಂರಕ್ಷಣೆಗಾಗಿ ಸರ್ಕಾರದ ಕಳೆದ ಐದು ವರ್ಷಗಳಿಂದ ಅಭಿಯಾನ ನಡೆಸುತ್ತಿದೆ. ಈ ಸಂದರ್ಭದಲ್ಲಿ ಭೂ ದಾಖಲೆಗಳ ನೋಂದಣಿ, ಜಿಪಿಎಸ್ ಮೂಲಕ ಗುರುತಿಸುವಿಕೆ ಮತ್ತು ಒತ್ತುವರಿ ತೆರವುಗೊಳಿಸಲಾಗುತ್ತದೆ. ದಾಖಲೆಗಳಿಲ್ಲದ ಶಾಲೆಗಳ ಆಸ್ತಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರತಿ ವರ್ಷ ಮೂರು ತಿಂಗಳು ಸರ್ಕಾರಿ ಶಾಲಾ ಆಸ್ತಿ ಸಂರಕ್ಷಣಾ ಆಂದೋಲನ ಚುರುಕುಗೊಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ಶಾಲೆಗಳ ಆಸ್ತಿ ಅವುಗಳ ಹೆಸರಲ್ಲಿ ಇಲ್ಲ.
ದಾನ ನೀಡಿದವರು ನಕಲಿ ದಾಖಲೆ ಸೃಷ್ಟಿಸಿದ್ದರೆ, ಯಾರಾದರೂ ಒತ್ತುವರಿ ಮಾಡಿದ್ದರೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕಾನೂನಾತ್ಮಕವಾಗಿ ಮೂಲ ದಾಖಲೆ ಪಡೆದು ಪರಿಶೀಲಿಸಿ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕಿದೆ. ಶಾಲೆ ಹೆಸರಿಗೆ ಆಸ್ತಿ ನೋಂದಣಿಗೆ ಕ್ರಮ ವಹಿಸಬೇಕೆಂದು ಸರ್ಕಾರ ಸೂಚಿಸುತ್ತಾ ಬರುತ್ತಿದೆ. ಆದರೆ, ಕೆಲ ಜಟಿಲ ಸಮಸ್ಯೆಗಳಿಂದ ಈ ಅಭಿಯಾನಕ್ಕೆ ಹಿನ್ನಡೆಯಾಗುತ್ತಿದೆ.
ಕೆಲ ಆಸ್ತಿಗಳಿಗೆ ದಾಖಲೆಯೇ ಇಲ್ಲ:
1960-1970ಕ್ಕಿಂತ ಹಿಂದಿನ ಶಾಲೆಗಳ ಆಸ್ತಿ ವಿಚಾರ ಕ್ಲಿಷ್ಟಕರವಾಗಿದೆ. ಈ ಅವಧಿಯಲ್ಲಿ ಶಾಲೆಗಳಿಗೆ ದಾನ ಕೊಟ್ಟಿರುವ ಕುರಿತು ದಾಖಲಾತಿಗಳಿಲ್ಲ. ವ್ಯವಸ್ಥಿತವಾಗಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿಯೂ ಆಗಿಲ್ಲ. ಅವುಗಳು ದಾಖಲಾತಿಯ ಅಪ್‌ಡೇಟ್ ಸಹ ಆಗಿಲ್ಲ.
ಹೀಗಾಗಿ, ಶಾಲೆಗೆ ಭೂದಾನ ಮಾಡಿರುವ ಕುರಿತು ದಾನಕೊಟ್ಟವರ ಬಳಿಯೂ ದಾಖಲೆ ಇಲ್ಲ. ಇದನ್ನು ಸ್ವೀಕಾರ ಮಾಡಿರುವ ಶಾಲೆ ಅಥವಾ ಶಾಲಾ ಶಿಕ್ಷಣ ಇಲಾಖೆಯ ಬಳಿಯೂ ಸೂಕ್ತ ದಾಖಲಾತಿಯೇ ಇಲ್ಲವಾಗಿದೆ. ಶಾಲೆ ಇರುವ ಜಾಗದ ಕುರಿತು ಬುನಾದಿ, ಮೂಲ ಕಾಗದ ಪತ್ರಗಳೇ ಎಷ್ಟೊಂದು ಶಾಲೆಗಳ ಬಳಿ ಇಲ್ಲವಾಗಿದೆ. ಆದರೆ, ಸದ್ಯಕ್ಕೆ ಶಾಲಾ ಆಸ್ತಿ ಅನುಭೋಗದಲ್ಲೇ ಮಾತ್ರ ಇದೆ. ವಾಸ್ತವವಾಗಿ ಅದು ದಾಖಲಾತಿಯಲ್ಲಿ ಕ್ರಮಬದ್ಧಗೊಳಿಸಿಲ್ಲ. ಹೀಗೆ ಅನೇಕ ಸವಾಲುಗಳು, ಸಮಸ್ಯೆಗಳು ಎದುರಾಗಿವೆ.
ಆಸ್ತಿ ಮಾಲೀಕತ್ವದ ದಾಖಲೆಯ ಡಿಜಿಟಲ್ ರೂಪದಲ್ಲಿ ಪಡೆಯುವ ಇ-ಆಸ್ತಿ ವ್ಯವಸ್ಥೆ ಜಾರಿಯಾದ ಮೇಲೆ ಶಾಲಾ ಆಸ್ತಿ ನೋಂದಣಿ ಸುಲಭಗೊಂಡಿದೆ. ಕೆಲ ದಾಖಲಾತಿ ಆಧಾರದ ಮೇಲೆ ಸರ್ಕಾರಿ ಶಾಲೆಗಳ ಆಸ್ತಿಗಳ ಒಡೆತನ ನೋಂದಣಿಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯಕುಮಾರ್ ವಿಜಯವಾಣಿಗೆ ತಿಳಿಸಿದರು.
"
ಸರ್ಕಾರಿ ಶಾಲಾ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಆಯಾಯ ಶಾಲೆ ಹೆಸರಿಗೆ ನೋಂದಣಿ ಮಾಡಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಲಾಗುತ್ತದೆ.