ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ರಂಗಭೂಮಿ ಸಹಕಾರಿ

ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಮಕ್ಕಳ ನಾಟಕ ಪ್ರದರ್ಶನವನ್ನು ನಿವೃತ್ತ ಡಿವೈ.ಎಸ್.ಪಿ. ಶಾಂತಮಲ್ಲಪ್ಪ ಉದ್ಘಾಟಿಸಿದರು. ಟಿ. ಸತೀಶ್ ಜವರೇಗೌಡ, ಚಂದ್ರು ಮಂಡ್ಯ, ಪಿ.ಪ್ರಶಾಂತ್ ಗೌಡ, ರವಿಕುಮಾರ್ ಬೆಕ್ಯಾ, ಕೆ.ಎಲ್. ಅನೂಪ್ ಇದ್ದರು.
ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಮಕ್ಕಳ ನಾಟಕ ಪ್ರದರ್ಶನವನ್ನು ನಿವೃತ್ತ ಡಿವೈ.ಎಸ್.ಪಿ. ಶಾಂತಮಲ್ಲಪ್ಪ ಉದ್ಘಾಟಿಸಿದರು. ಟಿ. ಸತೀಶ್ ಜವರೇಗೌಡ, ಚಂದ್ರು ಮಂಡ್ಯ, ಪಿ.ಪ್ರಶಾಂತ್ ಗೌಡ, ರವಿಕುಮಾರ್ ಬೆಕ್ಯಾ, ಕೆ.ಎಲ್. ಅನೂಪ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರ ಪಾಲಿಕೆ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ಅಭಿಮತ
  • ‘ಕಣ್ಕಟ್ ನಗರ’ ಮಕ್ಕಳ ನಾಟಕ ಪ್ರದರ್ಶನ
ಮೈಸೂರು: ಸಮಾಜದಲ್ಲಿ ರಂಗಭೂಮಿಗೆ ಮಹತ್ವದ ಸ್ಥಾನವಿದೆ. ಅದು ಜನರ ಬದುಕನ್ನು ತಿದ್ದಿ ತೀಡಿ ರೂಪಿಸುತ್ತದೆ. ಅದರಲ್ಲೂ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ತುಂಬಾ ಸಹಕಾರಿಯಾದುದು. ಇಂತಹ ಸದಭಿರುಚಿಯ ನಾಟಕ ಕಲೆ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ಸೃಷ್ಟಿಸಬಲ್ಲದು ಎಂದು ನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ಅಭಿಪ್ರಾಯಪಟ್ಟರು.
ಅದಮ್ಯ ರಂಗಶಾಲೆಯ ವತಿಯಿಂದ ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಕಣ್ಕಟ್ ನಗರ’ ಮಕ್ಕಳ ನಾಟಕ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಟಕಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡಲು ಸಾಧ್ಯವಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ರಂಗ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ರಂಗಭೂಮಿ ತುಂಬ ಸವಾಲಿನದ್ದು. ಮಕ್ಕಳಿಂದ ವಯಸ್ಸಿಗೆ ಮೀರಿದ ಪಾತ್ರಾಭಿನಯ ಮಾಡಿಸುವುದು ಮತ್ತು ಸಂಭಾಷಣೆ ಹೇಳಿಸುವುದು ಕಠಿಣವಾದ ಕಾರ್ಯ. ಇದಕ್ಕೆ ಮಕ್ಕಳಿಗೆ ಸೂಕ್ತವಾದ ನಿರಂತರ ತರಬೇತಿಯ ಅಗತ್ಯವಿದೆ. ಈ ರಂಗ ತರಬೇತಿಯ ಕಾರ್ಯ ಮಾಡುತ್ತಿರುವ ಅದಮ್ಯ ರಂಗಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ನಾಟಕದಲ್ಲಿ ಅಭಿನಯಿಸುವುದು ಸುಲಭವಲ್ಲ. ಅದಕ್ಕೆ ಅಪಾರ ಪ್ರತಿಭೆ ಮತ್ತು ಪರಿಶ್ರಮ ಬೇಕು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಬೇಕು. ಬದುಕಿನ ನಾನಾ ಪಾತ್ರಗಳನ್ನು ವೇದಿಕೆಯಲ್ಲಿ ತರುವ ಶಕ್ತಿ ರಂಗಭೂಮಿಗಿದೆ. ಇಂತಹ ರಂಗಭೂಮಿಗೆ ನಾವೆಲ್ಲರೂ ಉತ್ತೇಜನ ನೀಡಬೇಕು ಎಂದರು.

ಯುವಜನರು ಕಳೆದುಹೋಗಿದ್ದಾರೆ:

ನಿವೃತ್ತ ಡಿವೈಎಸ್‌ಪಿ ಶಾಂತಮಲ್ಲಪ್ಪ ಮಾತನಾಡಿ, ಇಂದಿನ ಯುವಜನತೆಯಲ್ಲಿ ಸಾಹಿತ್ಯ, ಸಂಗೀತ, ನಾಟಕ ಕಲೆಯ ಕುರಿತು ಆಸಕ್ತಿ ಇಲ್ಲದ್ದಂತಾಗಿದೆ. ಅವರೆಲ್ಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಲೋಕದಲ್ಲಿ ಕಳೆದುಹೋಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ನೀಡುವುದರಿಂದ ಪಠ್ಯದ ಕಲಿಕೆ ಪರಿಣಾಮಕಾರಿಯಾಗುತ್ತದೆ. ನಾಟಕಗಳ ಮೂಲಕ ಅವರಲ್ಲಿ ಶಿಸ್ತಿನ ಬದುಕು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಸಾಧ್ಯವಿದೆ. ನಾಟಕದಲ್ಲಿನ ಒಳ್ಳೆಯ ಮತ್ತು ದುಷ್ಟ ಪಾತ್ರಗಳ ಮೂಲಕ ಅವರಲ್ಲಿ ಮನಪರಿವರ್ತನೆ ಉಂಟು ಮಾಡಬಹುದು ಎಂದು ತಿಳಿಸಿದರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ವಿ.ಕೆ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ, ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಕೆ.ಎಲ್. ಅನೂಪ್, ಪದಾಧಿಕಾರಿಗಳಾದ ಪರಮೇಶ್ ಕೆ. ಉತ್ತನಹಳ್ಳಿ, ಜ್ಯೋತಿ ಸೋಮರಾಜು, ಜಿ. ರವೀಂದ್ರ ಕುಮಾರ್, ಕುಮಾರಸ್ವಾಮಿ ವರುಣ ಇದ್ದರು.

ಸನ್ಮಾನ:

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಡಿವೈಎಸ್ ಪಿ.ಶಾಂತಮಲ್ಲಪ್ಪ ಹಾಗೂ ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಕೆ.ಎಲ್. ಅನೂಪ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಉಮಾಶ್ರೀ ಜಿ. ಕೂಡ್ಲಿಗಿ ಅವರ ನಿರ್ದೇಶನದಲ್ಲಿ ಅದಮ್ಯ ರಂಗಶಾಲೆಯ ಮಕ್ಕಳು ಅಭಿನಯಿಸಿದ ‘ಕಣ್ಕಟ್ ನಗರ’ ನಾಟಕವು ಪ್ರೇಕ್ಷಕರನ್ನು ರಂಜಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net