ಕಿರುರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಗ್ರೀಷ್ಮ ರಂಗೋತ್ಸವ’ ಸಮಾರೋಪ ಕಾರ್ಯಕ್ರಮದಲ್ಲಿ ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ಡಾ.ಹಾಸನ ರಘು ಮಾತನಾಡಿದರು. ಎ.ಎಂ.ಬಾಬು, ಡಾ.ಬಿ.ಎಸ್.ಚನ್ನಕೇಶವ ಮೂರ್ತಿ, ದೀಪಕ್ ಮೈಸೂರು, ನಾಗೇಂದ್ರ ಪ್ರಸಾದ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
‘ಗ್ರೀಷ್ಮ ರಂಗೋತ್ಸವ’ ಸಮಾರೋಪ
ಮೈಸೂರು: ಸಮಾಜದಲ್ಲಿ ಪರಿವರ್ತನೆ ಮತ್ತು ಜಾಗೃತಿ ಮೂಡಿಸಲು ರಂಗಭೂಮಿ ಕಲೆ ಉತ್ತಮ ಮಾಧ್ಯಮ ಎಂದು ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ಡಾ.ಹಾಸನ ರಘು ಹೇಳಿದರು.
ಬೆಂಗಳೂರಿನ ‘ಉದ್ಭವ ಕಲಾವಿದರು’ ಸಂಸ್ಥೆ, ಸಂಚಲನ ಮೈಸೂರು ಸಂಸ್ಥೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಗ್ರೀಷ್ಮ ರಂಗೋತ್ಸವ’ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿಯು ಕೇವಲ ಕಥೆ, ಅಭಿನಯವಷ್ಟೇ ಅಲ್ಲ, ಅದು ಪ್ರಸ್ತುತ ವಿದ್ಯಮಾನಗಳು ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಇದು ಸಮಾಜದ ತಪ್ಪುಗಳನ್ನು ತಿದ್ದುವ ಮತ್ತು ಬದಲಾವಣೆ ತರುವ ಸಾಂಸ್ಕೃತಿಕ ಮಾಧ್ಯಮವಾಗಿದೆ ಎಂದು ಹೇಳಿದರು.
ನಾಟಕದಿಂದ ಚಲನಚಿತ್ರರಂಗಕ್ಕೆ ಹೋದವರು ಅನೇಕರಿದ್ದಾರೆ. ಆದರೆ ಸಿನಿಮಾದಿಂದ ಮತ್ತೆ ನಾಟಕಕ್ಕೆ ವಾಪಸ್ ಬಂದವರು ಕಡಿಮೆ. ಅದರಲ್ಲಿ ನಾನೂ ಒಬ್ಬ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಕಲೆ ಕುರಿತು ಕಲಿಯಲು ಉತ್ತಮ ಅವಕಾಶ ದೊರೆಯಿತು. ಬಿ.ವಿ. ಕಾರಂತ ಅವರು ಬಹಳಷ್ಟು ಕಲಿಸಿಕೊಟ್ಟರು. ಈ ಕಾರಣಕ್ಕೆ ಅವರನ್ನು ಸದಾ ಸ್ಮರಿಸುತ್ತೇನೆ ಎಂದರು.
ಪುಟ್ಟಣ್ಣ ಕಣಗಾಲ್ ಅವರು ಸಾಹಸ ಕಲಾವಿದನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. 15 ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದ ಕುರಿತು ಅಧ್ಯಯನ ಮಾಡಿರುವೆ. ಈ ಕಾರಣಕ್ಕೆ ಬುಡಕಟ್ಟು ಸಂಸ್ಥೆಯಲ್ಲೂ ಕೆಲಸ ನಿರ್ವಹಿಸಿರುವೆ.
ನಾನು ನಡೆಸುತ್ತಿರುವ ಗುರುಕುಲದಲ್ಲಿ ವಿದ್ಯಾರ್ಥಿಗಳು ಮಲ್ಲಕಂಬ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಗುರುಸ್ಥಾನ ಸುಲಭವಾಗಿ ದೊರೆಯಲ್ಲ. ಯಾವುದೇ ಕ್ಷೇತ್ರದಲ್ಲಿ ಯಾದರೂ ಕಲಿಕೆ ನಿರಂತರ ಪ್ರಕ್ರಿಯೆ. ಕಲಾವಿದರು ಅಹಂಕಾರ ಬಿಟ್ಟು ಶ್ರದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಣೆ ಮಾಡಿದರೆ ಸಾಧನೆ ಸಾಧ್ಯಎಂದರು.
ಕೆಪಿಸಿಸಿ ರಾಜ್ಯ ಸಂಚಾಲಕ ಹಾಗೂ ನಿರ್ದೇಶಕ ಎ.ಎಂ.ಬಾಬು, ನಿವೃತ್ತ ವಿಜ್ಞಾನಿ ಡಾ.ಬಿ.ಎಸ್.ಚನ್ನಕೇಶವ ಮೂರ್ತಿ, ಸಂಚಲನ ಮೈಸೂರು ಸಂಸ್ಥೆಯ ದೀಪಕ್ ಮೈಸೂರು, ನಾಗೇಂದ್ರ ಪ್ರಸಾದ್ ಇದ್ದರು.
ಬಳಿಕ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ನಿರ್ದೇಶನದಲ್ಲಿ ಸಂಚಲನ ಮೈಸೂರು ರಂಗ ತಂಡದಿಂದ ‘ಎರಡೆರಡ್ಲಾ ಐದು’ ನಾಟಕ ಪ್ರದರ್ಶನಗೊಂಡಿತು.