ಅಮರಶಿಲ್ಪಿಯ ಕಲಾಕೃತಿಗಳು ಅಜರಾಮರ

 ಜಕಣಾಚಾರಿ ಸಂಸ್ಮರಣಾ ದಿನಾಚರಣೆಗೆ ಗೈರಾಗಿದ್ದ ಜನಪ್ರತಿನಿಧಿಗಳ ವಿರುದ್ಧ ವಿಶ್ವಕರ್ಮ ಸಮುದಾಯದವರು, ಸಾರ್ವಜನಿಕರುಪ್ರತಿಭಟನೆ ನಡೆಸಿದರು
ಜಕಣಾಚಾರಿ ಸಂಸ್ಮರಣಾ ದಿನಾಚರಣೆಗೆ ಗೈರಾಗಿದ್ದ ಜನಪ್ರತಿನಿಧಿಗಳ ವಿರುದ್ಧ ವಿಶ್ವಕರ್ಮ ಸಮುದಾಯದವರು, ಸಾರ್ವಜನಿಕರುಪ್ರತಿಭಟನೆ ನಡೆಸಿದರು
Published on

ಪ್ರಮುಖ ಮುಖ್ಯಾಂಶಗಳು

  • *ಎಂಎಲ್‌ಸಿ ಡಾ.ತಿಮ್ಮಯ್ಯ ಪ್ರಶಂಸೆ
  • *ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಮೈಸೂರು: ಅಮರ ಶಿಲ್ಪಿ ಜಕಣಾಚಾರಿ ಅನೇಕ ದೇವಾಲಯಗಳನ್ನು ಸುಂದರವಾಗಿ ಕೆತ್ತನೆ ಮಾಡಿದ್ದು, ಅವರ ಶ್ರಮ ಹಾಗೂ ಶ್ರದ್ಧೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು. 
 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಕಣಾಚಾರಿ ಅವರ ಕಲೆ ಮತ್ತು ಶಿಲ್ಪಕಲೆ ಎಂದಿಗೂ ಅಜರಾಮರ. ಅವರ ಕಲೆ ಮತ್ತು ಶಿಲ್ಪಕಲೆ ಕಾಲದಿಂದ ಕಾಲಕ್ಕೆ ಬೆಳಕಾಗುವಂತಹ ಶಕ್ತಿ ಹೊಂದಿವೆ. ಇನ್ನು ಲಕ್ಷಾಂತರ ವರುಷ ಕಳೆದರೂ ಅವರ ಕಲೆ ಮತ್ತು ಶಿಲ್ಪಕಲೆ ಅಮರವಾಗಿರುತ್ತದೆ. ಮುಂದಿನ ಪೀಳಿಗೆಗೆ ಬೆಳಕನ್ನು ಚೆಲ್ಲುತ್ತದೆ ಎಂದು ಹೇಳಿದರು. 
ಕಲ್ಲಿನಲ್ಲಿ ಕೆತ್ತನೆ ಮಾಡಿ ಚಿತ್ರಕಲೆ ಬಿಡಿಸುವುದು ಅತ್ಯಂತ ಕಠಿಣವಾದ ಕೆಲಸ. ನಮ್ಮ ದೇಶದಲ್ಲಿರುವ ದೇವಾಲಯಗಳು ವಿಗ್ರಹಗಳ ಕೆತ್ತನೆಗಳು ಎಲ್ಲಿಯೂ ಇಲ್ಲ. ಇದಕ್ಕೆ ಕಾರಣ ನಮ್ಮ ಶಿಲ್ಪಿಗಳು. ಅಮರಶಿಲ್ಪಿ ಜಕಣಾಚಾರಿ ಅವರ ಶ್ರಮ ಆದರ್ಶವನ್ನು ವಿಶ್ವಕರ್ಮ ಸಮಾಜದ ಜನರು ಮೈಗೂಡಿಸಿಕೊಂಡು ಇನ್ನೂ ಅವರ ಹೆಸರನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
 ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಶಿಲ್ಪಿ ಜಕಣಾಚಾರಿ ಅವರು ಮಹಾನ್ ಶಿಲ್ಪಿ, ತಮ್ಮ ಅದ್ಭುತವಾದ ಕೆತ್ತನೆಯಿಂದ ಹೆಚ್ಚು ಜನಪ್ರಿಯತೆ ಹೊಂದಿದವರು. ಅವರ ಕಲೆ ಮತ್ತು ಶಿಲ್ಪ ಕಲೆ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಹೇಳಿದರು.
ಜಕಣಾಚಾರಿ ಅವರ ಕಲೆ ಇನ್ನೂ ಎಷ್ಟು ತಲೆಮಾರು ಬಂದರು ಅವರ ಹೆಸರು ಅಮರವಾಗಿರುತ್ತದೆ. ಪ್ರತಿಯೊಬ್ಬರು ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ದೇಶದಲ್ಲಿ ಯಾವ ಶಿಲ್ಪಿ ಬಂದರೂ ಜಕಣಾಚಾರಿ ಅವರ ಹೆಸರು ಅಳಿಸಲಾಗುವುದಿಲ್ಲ. ಅದಕ್ಕಾಗಿಯೇ ಅವರಿಗೆ ಅಮರಶಿಲ್ಪಿ ಜಕಣಾಚಾರಿ ಎಂದು ಕರೆಯುತ್ತಾರೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಜನರು ಮೊದಲಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದಾರೆ. ಮದುವೆ ಆಗಬೇಕೆಂದರೆ ತಾಳಿ ಮಾಡಿಕೊಡಲು, ಮನೆ ಕಟ್ಟಲು, ಮರಗೆಲಸ ಮಾಡಲು ವಿಶ್ವಕರ್ಮ ಸಮಾಜ ಬೇಕು. ಇವರ ಕೆಲಸವಿಲ್ಲದೆ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ. ಮೂಲ ಕಸುಬು ಮರೆಯಬೇಡಿ. ಜತೆಗೆ ಸಮುದಾಯದಲ್ಲಿ ಬದಲಾವಣೆ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಬೇಕು. ಉನ್ನತ ಹುದ್ದೆಗಳಲ್ಲಿರಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ  ನಿವೃತ್ತ ಜಂಟಿ ನಿರ್ದೇಶಕ ಮಂಟೇಲಿಂಗಾಚಾರ್ ಮಾತನಾಡಿ, ಜಕಣಾಚಾರಿ ಅವರು ಏಕಮೇವ ಅದ್ವಿತೀಯ ಶಿಲ್ಪಿ. ತಮ್ಮ ಜೀವನವನ್ನೇ ಶಿಲ್ಪಕಲೆಗೆ ಮುಡಿಪಿಟ್ಟ ಮಹಾನ್ ವ್ಯಕ್ತಿ. ಇವರನ್ನು ಜಗತ್ ಪ್ರಭು ಎಂದು ಕರೆಯುತ್ತಿದ್ದರು. ಇವರ ಶಿಲ್ಪಗಳು ಭಾರತದ ವಾಸ್ತುಶಿಲ್ಪ ಪರಂಪರೆಗೆ ಅಪಾರ ಕೊಡುಗೆ ನೀಡಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಎಲ್ಲ ಕ್ಷೇತ್ರಗಳಿಗೂ ಮೂಲವಾದಂತಹದ್ದು, ವಿಶ್ವಕರ್ಮರ ಜ್ಞಾನ ಮತ್ತು ಶಿಲ್ಪ. ಇವೆರಡೂ ಇರುವುದು ವಿಶ್ವಕರ್ಮ ಜನಾಂಗದವರಲ್ಲಿ ಮಾತ್ರ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇನ್ನಿತರರಿದ್ದರು

ಗೈರಾದ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಗೆ ಗೈರಾಗಿದ್ದ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಯಿತು.
ಕಾರ್ಯಕ್ರಮಕ್ಕೆ ಬಂದಿದ್ದ ವಿಶ್ವಕರ್ಮ ಸಮುದಾಯದವರು, ಸಾರ್ವಜನಿಕರು ಗೈರಾದ ಸಚಿವರು, ಶಾಸಕರು, ಅಧಿಕಾರಿಗಳು ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಕಿರುರಂಗಮಂದಿರದ ವೇದಿಕೆ ಎದುರೇ ಘೋಷಣೆ ಕೂಗಿ ಕಿಡಿಕಾರಿದರು. ಬಳಿಕ ಕಲಾಮಂದಿರದ ಎದುರು ಪ್ರತಿಭಟನೆ ನಡೆಸಿದರು. ಕಾಟಾಚಾರಕ್ಕೆ ಏಕೆ ಕಾರ್ಯಕ್ರಮ ಮಾಡುತ್ತೀರಾ? ಜನಪ್ರತಿನಿಧಿಗಳು ಏಕೆ ಬಂದಿಲ್ಲ...ಹೀಗೆ ವಿವಿಧ ಪ್ರಶ್ನೆಗಳ ಸುರಿಮಳೆಗೈದರು.
ಕಾರ್ಯಕ್ರಮ ಆಯೋಜನೆ ಮಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಇದಕ್ಕೂ ಬಗ್ಗಲಿಲ್ಲ. ಪ್ರತಿಭಟನೆ ವಿಷಯದ ತಿಳಿದ ಬಳಿಕ ಶಾಸಕ ಕೆ.ಹರೀಶಗೌಡ, ಎಂಎಲ್ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ದೌಡಾಯಿಸಿ ಸಮಾಧಾನಪಡಿಸಿದರು. ಬಳಿಕವೇ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net