ಎರಡು ಸಮುದಾಯದ ಸಾಮರಸ್ಯ ಕಾಪಾಡುವಲ್ಲಿ ತಾಲೂಕು ಆಡಳಿತ ಯಶಸ್ವಿ

ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇಗುಲದ ಬಾಗಿಲನ್ನು ತಾಲೂಕು ಆಡಳಿತದ ನೇತೃತ್ವದಲ್ಲಿ ತೆರೆದು ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ್ ಜೆ.ಮಂಜುನಾಥ್, ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ಹೊಸೂರು ಕುಮಾರ್ ಇತರರಿದ್ದಾರೆ.
ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇಗುಲದ ಬಾಗಿಲನ್ನು ತಾಲೂಕು ಆಡಳಿತದ ನೇತೃತ್ವದಲ್ಲಿ ತೆರೆದು ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ್ ಜೆ.ಮಂಜುನಾಥ್, ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ಹೊಸೂರು ಕುಮಾರ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • 14ವರ್ಷಗಳ ಶ್ರೀಬಸವೇಶ್ವರಸ್ವಾಮಿಯ ಅಜ್ಞಾತವಾಸದ ಅವಧಿ ಅಂತ್ಯ
ಹುಣಸೂರು : ದೇಗುಲ ಪ್ರವೇಶಕ್ಕೆ ಸಂಬಂಧ ಎರಡು ಸಮುದಾಯಗಳ ನಡುವಿನ ತಿಕ್ಕಾಟವನ್ನು ತಾಲೂಕು ಆಡಳಿತ ಅಂತ್ಯಗೊಳಿಸುವ ಮೂಲಕ ಸಾಮರಸ್ಯ ಕಾಪಾಡುವಲ್ಲಿ ಯಶಸ್ಸು ಸಾಧಿಸಿದೆ. 14ವರ್ಷಗಳ ಶ್ರೀಬಸವೇಶ್ವರಸ್ವಾಮಿಯ ಅಜ್ಞಾತವಾಸದ ಅವಧಿ ಅಂತ್ಯಗೊಂಡಿದೆ.
ತಾಲೂಕಿನ ಬಿಳಿಗೆರೆ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇಗುಲದ ಬಾಗಿಲನ್ನು ತಾಲೂಕು ಆಡಳಿತದ ಸತತ ಪ್ರಯತ್ನದ ನಂತರ ಸೋಮವಾರ ತೆರೆಯಲಾಯಿತು. ತಹಸೀಲ್ದಾರ್ ಜೆ.ಮಂಜುನಾಥ್ ನೇತೃತ್ವದಲ್ಲಿ ಗ್ರಾಮದ ಎಲ್ಲ ಸಮುದಾಯದಗಳ ಮುಖಂಡರು ದೇಗುಲದಲ್ಲಿ ಆಯೋಜನೆಗೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಮಂಜುನಾಥ್, ಮುಜರಾಯಿ ಇಲಾಖೆಗೆ ಸೇರಿರುವ ಬಿಳಿಗೆರೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶಕ್ಕಾಗಿ ತಿಕ್ಕಾಟ ನಡೆದಿತ್ತು. ಈ ಕುರಿತು ಕಳೆದ 6 ತಿಂಗಳಿನಿಂದ ತಾಲೂಕು ಆಡಳಿತ ಹಲವಾರು ಶಾಂತಿಸಭೆಗಳನ್ನು ಆಯೋಜಿಸಿತ್ತು. ಪ್ರತಿ ಸಭೆಯಲ್ಲೂ ಎಲ್ಲ ಸಮುದಾಯಗಳ ಮುಖಂಡರು ಮತ್ತು ಗ್ರಾಮಸ್ಥರಿಗೆ ತಿಳಿಹೇಳಲಾಗಿತ್ತು. ಗ್ರಾಮಸ್ಥರು ಕೂಡ ತಾಲೂಕು ಆಡಳಿತದ ಉದ್ದೇಶವನ್ನು ಅರಿತು ಅದರಂತೆ ನಡೆದುಕೊಳ್ಳಲು ನಿರ್ಧರಿಸಿದರು. ಎರಡೂ ಕಡೆಯುವರೂ ಈ ದೇಗುಲ ಊರಿಗೆ ಸೇರಿದ್ದು ಎಲ್ಲರೂ ಇಲ್ಲಿ ಬಂದು ಪೂಜೆ ಕೈಗೊಳ್ಳಲು ಅವಕಾಶ ಇದೆ ಎಂದು ಮನಗಂಡು ತಾಲೂಕು ಆಡಳಿತಕ್ಕೆ ಸಾಥ್ ನೀಡಿದರು. ಇದೀಗ ದೇಗುಲಕ್ಕೆ ಸುಣ್ಣಬಣ್ಣ ಬಳಿ ಸಿಂಗಾರಗೊಳಿಸಲಾಗಿದೆ. ತಲೆಮಾರುಗಳಿಂದ ಅರ್ಚಕವೃತ್ತಿ ನಡೆಸುತ್ತಿರುವ ಕುಟುಂಬವೇ ಅರ್ಚಕ ವೃತ್ತಿಯನ್ನು ಮುಂದುವರೆಸಿದ್ದಾರೆಂದರು.
ದಲಿತ ಮುಖಂಡರಾದ ಡಿ.ಕುಮಾರ್ ಮತ್ತು ನಿಂಗರಾಜ ಮಲ್ಲಾಡಿ ಮಾತನಾಡಿ, ದಶಕಗಳಿಂದ ನಮ್ಮ ಹಕ್ಕಿಗಾಗಿ ನಡೆಸಿದ್ದ ಹೋರಾಟ ಇದೀಗ ಸುಖಾಂತ್ಯ ಕಂಡಿದೆ. ದೇವರು, ಧರ್ಮ ಎನ್ನುವುದು ನಮ್ಮ ಭಾವನಾತ್ಮಕ ವಿಷಯಗಳಾಗಿದ್ದು, ಯಾರೊಬ್ಬರೂ ಅಡ್ಡಿಪಡಿಸಬಾರದು. ಪ್ರತಿ ಸಾಮಾನ್ಯಸಭೆ, ಕುಂದುಕೊರೆತ ಸಭೆಗಳಲ್ಲೂ ಈ ವಿಷಯದ ಕುರಿತಾಗಿ ಪ್ರಸ್ತಾಪಿಸುತ್ತಿದ್ದೆವು. ತಾಲೂಕು ಆಡಳಿತ ಇದೀಗ ಸಮಸ್ಯೆಯನ್ನು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಪರಿಹರಿಸಿದೆ. ತಾಲೂಕು ಆಡಳಿತಕ್ಕೆ ನಮ್ಮ ಧನ್ಯವಾದಗಳು ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ದೇವರ ನಂಬಿಕೆ ಎನ್ನುವುದು ಅವರ ವೈಯಕ್ತಿಕ ವಿಚಾರವಾಗಿದೆ. ದೇವಾಲಯಗಳಲ್ಲಿ ಇಂದಿಗೂ ಪ್ರವೇಶ ನಿರಾಕರಣೆ ಎನ್ನುವಂತಹ ಮನೋಭಾವ ದೂರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನ ನಮಗೆ ಪವಿತ್ರ ಗ್ರಂಥವಾಗಬೇಕು ಎಂದರು.
ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಮುನಿಯಪ್ಪ, ಮುಖಂಡರಾದ ಸ್ವಾಮಿಗೌಡ, ಶಿವಲಿಂಗೇಗೌಡ, ಸಣ್ಣಯ್ಯ, ಜಿ.ಪಂ. ಮಾಜಿ ಸದಸ್ಯ ಮಂಜುನಾಥ್, ಗ್ರಾ.ಪಂ. ಸದಸ್ಯ ಪ್ರಕಾಶ್, ರಘು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net