ಗರಿಬಿಚ್ಚಿದ ಸುತ್ತೂರು ಜಾತ್ರೆ ಸಂಭ್ರಮ

ಸಂಸದ ಜಗದೀಶ ಎಸ್.ಶೆಟ್ಟರ್ ಅವರು ನಗಾರಿ ಬಾರಿಸುವ ಮೂಲಕ ಸುತ್ತೂರು ಜಾತ್ರೆಗೆ ಗುರುವಾರ ಚಾಲನೆ ನೀಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಶ್ರೀ ಶಂಕರ ರಾಜೇಂದ್ರ ಸ್ವಾಮೀಜಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರಿದ್ದರು.
ಸಂಸದ ಜಗದೀಶ ಎಸ್.ಶೆಟ್ಟರ್ ಅವರು ನಗಾರಿ ಬಾರಿಸುವ ಮೂಲಕ ಸುತ್ತೂರು ಜಾತ್ರೆಗೆ ಗುರುವಾರ ಚಾಲನೆ ನೀಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಶ್ರೀ ಶಂಕರ ರಾಜೇಂದ್ರ ಸ್ವಾಮೀಜಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಪಿಲಾ ನದಿ ತೀರದ ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಯೊಂದಿಗೆ ಚಾಲನೆ
  • ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅಭಿಷೇಕ
ಮೈಸೂರು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವಕ್ಕೆ ಮಕರ ಸಂಕ್ರಾಂತಿ ಹಬ್ಬ ದಿನವಾದ ಗುರುವಾರ ಸಂಜೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. 

ಹಳೇ ಮೈಸೂರು ಪ್ರಾಂತ್ಯದಲ್ಲಿ ‘ಸುತ್ತೂರು ಜಾತ್ರೆ’ ಎಂದೇ ಹೆಸರುವಾಸಿಯಾಗಿರುವ ಈ ಮಹೋತ್ಸವದ ಸಡಗರ ಗರಿಬಿಚ್ಚಿಕೊಂಡಿತು. ಆರು ದಿನಗಳ ಕಾಲ ವಿವಿಧ ಚಟುವಟಿಕೆಗಳೊಂದಿಗೆ ಜನಸಮೂಹವನ್ನು ಆಕರ್ಷಿಸಲಿದೆ.
ಒಂದು ಸಹಸ್ರ ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಶ್ರೀಮಠ ಹೊಂದಿದೆ. ಶತಮಾನಗಳಿಂದ ನಡೆಸಿಕೊಂಡು ಬಂದಿರುವ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಜ್ಞಾನಾನ್ನ ದಾಸೋಹಗಳ ಕೈಂಕರ್ಯ ಜಾತ್ರಾ ವೇಳೆ ಸಾರ್ವಜನಿಕರಿಗೆ ದರ್ಶನವಾದವು.
ಕರ್ತೃ ಗದ್ದುಗೆ ಪ್ರಾತಃಕಾಲ ನಸುಮುಂಜಾನೆ 4ಕ್ಕೆ ಅನುಜ್ಞೆ, ಮಹಾಸಂಕಲ್ಪ ಪೂರ್ವಕ ಮಹಾರುದ್ರಾಭಿಷೇಕ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಜಾತ್ರೆ ಆರಂಭಗೊಂಡಿತು. 
ನಂತರ ಮೇಗಳಾಪುರ-ಮಾಧವಗೆರೆ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್‌ಪೇರಿ ನಡೆಯಿತು. 
ಮೈಸೂರಿನ ಹೊಸಮಠದ ಕಿರಿಯ ಶ್ರೀಗಳಾದ ಸಿದ್ದಬಸವ ಸ್ವಾಮೀಜಿಯಿಂದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿತು. ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ಕಿರಿಯ ಶ್ರೀ ರುದ್ರಮಹಾಂತ ಸ್ವಾಮೀಜಿ ಧರ್ಮ ಸಂದೇಶ ನೀಡಿದರು.
ಬೆಳಗ್ಗೆ 8 ಗಂಟೆ ಹೊತ್ತಿಗೆ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಉತ್ಸವಮೂರ್ತಿಯನ್ನು ಶ್ರೀಮಠದಿಂದ ಕರ್ತೃ ಗದ್ದುಗೆಗೆ ಬಿಜಯಂಗೈಯಲಾಯಿತು. ತದನಂತರ ಕರ್ತೃ ಗದ್ದುಗೆಯಲ್ಲಿ ಆಗ್ರೋದಕ, ಪುಣ್ಯಾಹ, ನಾಂದಿ, ಕಳಸ ಸ್ಥಾಪನೆ ಮಾಡಲಾಯಿತು. ಹೀಗೆ ವಿವಿಧ ಧಾರ್ಮಿಕ ವಿಧಿವಿಧಾನದೊಂದಿಗೆ ಜಾತ್ರಾ ಚಟುವಟಿಕೆ ತೆರೆದುಕೊಂಡಿತು.
ಸಂಜೆ 5.30ರ ಸುಮಾರಿಗೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರವನ್ನು ಸಂಸದ ಜಗದೀಶ ಎಸ್.ಶೆಟ್ಟರ್ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. 
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಅಮೀನಗಡದ ಪ್ರಭುಶಂಕರ ಮಠದ ಶ್ರೀ ಶಂಕರ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಬೇಲೂರಿನ ಎಚ್.ಕೆ.ಸುರೇಶ್, ಚಿಕ್ಕಮಗಳೂರಿನ ಎಚ್.ಡಿ.ತಮ್ಮಯ್ಯ, ತಮಿಳುನಾಡಿನ ಭವಾನಸಾಗರದ ಶಾಸಕ ಎ.ಬಣ್ಣಾರಿ, ಎಂಎಲ್‌ಸಿ ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಗಣ್ಯರು, ಸಹಸ್ರಾರು ಜನರು ಉತ್ಸವಕ್ಕೆ ಸಾಕ್ಷಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net