ಆರೋಗ್ಯ ಕ್ಷೇತ್ರದಲ್ಲಿ ರೋಗಶಾಸ್ತ್ರಜ್ಞರ ಪಾತ್ರ ಹಿರಿದು

 ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಡಾ.ಬಿ.ಸುರೇಶ್, ಡಾ. ಸುರೇಶ್ ಹನಗವಾಡಿ,  ಡಾ.ಎಚ್.ಬಸವನಗೌಡಪ್ಪ,  ಡಾ.ಡಿ.ನಾರಾಯಣಪ್ಪ, ಡಾ.ಆಶಾ, ಡಾ.ಸುಚಿತ್ರಾ ಇತರರು ಇದ್ದರು.
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಡಾ.ಬಿ.ಸುರೇಶ್, ಡಾ. ಸುರೇಶ್ ಹನಗವಾಡಿ, ಡಾ.ಎಚ್.ಬಸವನಗೌಡಪ್ಪ, ಡಾ.ಡಿ.ನಾರಾಯಣಪ್ಪ, ಡಾ.ಆಶಾ, ಡಾ.ಸುಚಿತ್ರಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ ಸಮಕುಲಾಧಿಪತಿ ಡಾ.ಬಿ.ಸುರೇಶ್ ಅಭಿಪ್ರಾಯ
  • ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನ
 ಮೈಸೂರು: ರೋಗಶಾಸ್ತ್ರ ತಜ್ಞರು ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮೂಲಕ ರೋಗಿಗಳ ಜೀವ ಉಳಿಸುವಲ್ಲಿ ಹಾಗೂ ವೈದ್ಯಕೀಯ ಸಂಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಮಕುಲಾಧಿಪತಿ ಡಾ.ಬಿ.ಸುರೇಶ್ ಹೇಳಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿ, ಕರ್ನಾಟಕ ಚಾಪ್ಟರ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ಪೆಥಾಲಜಿಸ್ಟ್ ಆ್ಯಂಡ್ ಮೈಕ್ರೋಬಯಾಲಜಿಸ್ಟ್ಸ್(ಕೆಸಿಐಎಪಿಎಂ) ಸಹಯೋಗದಲ್ಲಿ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನದಲ್ಲಿ (ಕ್ಯಾಪ್‌ಕಾನ್-2026) ಮಾತನಾಡಿದರು.
ರೋಗಶಾಸ್ತ್ರಜ್ಞರು(ಪೆಥಾಲಜಿಸ್ಟ್) ರೋಗದ ಮೂಲ, ಸ್ವರೂಪ ಮತ್ತು ಪರಿಣಾಮವನ್ನು ಅಧ್ಯಯನ ಮಾಡುವ ವೈದ್ಯಕೀಯ ತಜ್ಞರು, ರಕ್ತ, ಅಂಗಾಂಶಗಳು ಮತ್ತು ದೇಹದ ದ್ರವಗಳನ್ನು ಪರೀಕ್ಷಿಸುವ ಮೂಲಕ ವೈದ್ಯರಿಗೆ ಸರಿಯಾದ ರೋಗನಿರ್ಣಯ ಮಾಡಲು ಸಹಾಯ ಮಾಡುತ್ತಾರೆ. ಇವರನ್ನು ವೈದ್ಯರ ವೈದ್ಯರು ಎಂದೂ ಕರೆಯುತ್ತಾರೆ. ಹೀಗಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಯಕೃತ್ತು ಅಥವಾ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಪ್ರಶಂಸೆ ಶಸ್ತ್ರಚಿಕಿತ್ಸಕರಿಗೆ ಸಿಗುತ್ತದೆ. ಆದರೆ, ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದ ಮುಂದೆ ಕುಳಿತು ನಿಖರ ವರದಿ ನೀಡುವ ಪೆಥಾಲಜಿಸ್ಟ್‌ಗಳ ಶ್ರಮ ತೆರೆಯ ಮರೆಯಲ್ಲೇ ಉಳಿದುಬಿಡುತ್ತದೆ. ತೀವ್ರ ನಿಗಾ ಘಟಕದ ವೈದ್ಯರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಇವರು ನೀಡುವ ವರದಿ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.
 1980ರ ದಶಕದ ಮದ್ರಾಸ್ ಮೆಡಿಕಲ್ ಕಾಲೇಜಿನ ದಿನಗಳನ್ನು ಸ್ಮರಿಸಿದ ಅವರು, ವೈದ್ಯಕೀಯ ರಂಗ ಬೆಳೆದುಬಂದ ಹಾದಿಯನ್ನು ಮೂರು ಹಂತಗಳಲ್ಲಿ ವಿವರಿಸಿದರು. 
ಮೊದಲ ಹಂತ ಸಂಪೂರ್ಣವಾಗಿ ವೈದ್ಯರ ಕ್ಲಿನಿಕಲ್ ಜ್ಞಾನ ಮತ್ತು ರೋಗಲಕ್ಷಣಗಳ ಅವಲೋಕನದ ಮೇಲಿದ್ದ ಆಧಾರ. ಎರಡನೇಯದು ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳಂತಹ ವೈದ್ಯಕೀಯ ಚಿತ್ರಣ, ತಂತ್ರಜ್ಞಾನಗಳ ಆಗಮನ. 
ಮೂರನೇ ಹಂತದಲ್ಲಿ ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮತ್ತು ನಿಖರ ವೈದ್ಯಕೀಯ ಯುಗಕ್ಕೆ ಕಾಲಿಟ್ಟಿದ್ದು, ಇದು ರೋಗನಿರ್ಣಯವನ್ನು ಇನ್ನಷ್ಟು ವೇಗ ಹಾಗೂ ನಿಖರಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು. 
 ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಅತ್ಯಾಧುನಿಕ ಟಿಶ್ಯೂ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ ಡಾ.ಬಿ.ಸುರೇಶ್, ರಾಜ್ಯದಲ್ಲೇ ಇಂತಹ ಸೌಲಭ್ಯ ಹೊಂದಿರುವ ಮೊದಲ ಕೇಂದ್ರಗಳಲ್ಲಿ ಇದು ಒಂದಾಗಿದ್ದು, ಯುವ ಪೆಥಾಲಜಿಸ್ಟ್‌ಗಳು ಅಂಗಾಂಶ ಮಾದರಿ ಬಳಸಿಕೊಂಡು ಭವಿಷ್ಯದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಇದು ದೊಡ್ಡ ವೇದಿಕೆಯಾಗಲಿದೆ ಎಂದು ತಿಳಿಸಿದರು.
ದಾವಣಗೆರೆಯ ಜೆಜೆಎಂ ಪೆಥಾಲಜಿ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ, ಕೆಸಿಐಎಪಿಎಂ ಅಧ್ಯಕ್ಷ ಕೆ.ವಿ.ಸಂತೋಷ್, ಕಾರ್ಯದರ್ಶಿ ಡಾ.ಆದಿತ್ಯ ಅಗ್ನಿಹೋತ್ರಿ, ಖಜಾಂಚಿ ಡಾ.ತೇಜಸ್ವಿ ಕೃಷ್ಣ, ಡಾ.ವಿಜಯಶಂಕರ, ಡಾ.ಆಶಾ, ಡಾ.ಸುಚಿತ್ರಾ, ಡಾ.ರಾಜಲಕ್ಷ್ಮೀ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net