ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಪಾತ್ರ ಮಹತ್ವದು

ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾರದಾ ಪೂಜೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿ.ಎಸ್. ಕುಮಾರ್, ಶೋಭಾ ವಿಶುಕುಮಾರ್, ಯೋಗೇಶ್, ಕೃಷ್ಣ, ಆಶಾ, ಕವನಾ, ರಕ್ಷಿತ್ ಇದ್ದರು.
ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾರದಾ ಪೂಜೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿ.ಎಸ್. ಕುಮಾರ್, ಶೋಭಾ ವಿಶುಕುಮಾರ್, ಯೋಗೇಶ್, ಕೃಷ್ಣ, ಆಶಾ, ಕವನಾ, ರಕ್ಷಿತ್ ಇದ್ದರು.
Published on
ಬೆಟ್ಟದಪುರ: ಶಿಕ್ಷಣ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮೈಸೂರಿನ ವಕೀಲ ಎಸ್.ವಿಶ್ವಾರಾಧ್ಯ ಅಭಿಪ್ರಾಯಪಟ್ಟರು.
ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾರದಾ ಪೂಜೆ ಮತ್ತು ಶಾಲಾ ವಾರ್ಷಿಕೋತ್ಸವ ‘ಹೆಜ್ಜೆಗೆಜ್ಜೆ ನಿನಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಶಿಕ್ಷಣ ಪ್ರಮುಖ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಕಲಿಕೆಗೆ ಹೆಚ್ಚು ಒತ್ತು ನೀಡಿ ಉತ್ತಮ ಅಂಕ ಗಳಿಸುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.
ಭುವನಹಳ್ಳಿ ಗ್ರಾ.ಪಂ ಪಿಡಿಒ ಹರೀಶ್ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂಬ ನಿರ್ಧಾರವನ್ನು ಸರ್ಕಾರ ಜಾರಿಗೆ ತಂದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರ ಶ್ರಮದ ಫಲವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಶಿಕ್ಷಕ ಬಿ.ಪಿ.ಚನ್ನೇಗೌಡ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ಜತೆಗೆ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪ್ರತಿಭಾನ್ವಿತ ನಾಲ್ವರು ವಿದ್ಯಾರ್ಥಿಗಳಿಗೆ ಇಂಜಿನಿಯರ್ ಬಿ.ಬಿ. ಕೀರ್ತಿಕುಮಾರ್ ತಮ್ಮ ಕುಟುಂಬ ವತಿಯಿಂದ ನೀಡುವ ನಗದು ಪುರಸ್ಕಾರವನ್ನು ಶೈಲಜಾ ಭುಜಲಿಂಗೇಗೌಡ, ವಕೀಲರಾದ ಎಸ್.ವಿಶ್ವಾರಾಧ್ಯ ಪುತ್ರ ಗಿರೀಶ್ ನೆನಪಿಗಾಗಿ ಏಳನೇ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಭಾಗ್ಯಾ ವಿಶ್ವಾರಾಧ್ಯ, ಆರಕ್ಷಕ ಸಿಬ್ಬಂದಿ ಬಿ.ಸಿ.ರಾಘವೇಂದ್ರ ತಮ್ಮ ಕುಟುಂಬ ವತಿಯಿಂದ ನೀಡುವ ಆದರ್ಶ ವಿದ್ಯಾರ್ಥಿ ಪುರಸ್ಕಾರವನ್ನು ಪುಷ್ಪಲತಾ ಚಂದ್ರಶೇಖರ್, ಒಂದರಿಂದ ಏಳನೇ ತರಗತಿವರೆಗಿನ ಪ್ರತಿ ತರಗತಿಯ ಒಬ್ಬ ಕ್ರಿಯಾಶೀಲ ವಿದ್ಯಾರ್ಥಿಗೆ ಜ್ಯೋತಿಷಿಗಳಾದ ಭವಾನಿ ಷಣ್ಮುಖಾರಾಧ್ಯ ಕುಟುಂಬ ವತಿಯಿಂದ ನೀಡುವ ಪ್ರತಿಭಾ ಪುರಸ್ಕಾರವನ್ನು ರಮ್ಯಾ ಸತೀಶಾರಾಧ್ಯ ವಿದ್ಯಾರ್ಥಿಗಳಿಗೆ ವಿತರಿಸಿದರು.
ಅಂಗನವಾಡಿ ಪುಟಾಣಿಗಳ ನೃತ್ಯ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಮಾಜಿಕ ಸಂದೇಶ ನೀಡುವ ಕಿರು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರನನ್ನು ರಂಜಿಸಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್ ಕುಮಾರ್, ಉಪಾಧ್ಯಕ್ಷೆ ಶೋಭಾ ಹಾಗೂ ಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಕೃಷ್ಣ, ಆಶಾ, ಕವನಾ, ರಕ್ಷಿತ್, ಅಂಗನವಾಡಿ ಕಾರ್ಯಕರ್ತೆ ರೂಪಾ, ಸಹಾಯಕಿ ಶಾರದಾ, ಅಡುಗೆ ಸಿಬ್ಬಂದಿ ಪ್ರತಿಮಾ, ಸೌಮ್ಯಾ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net