ಕೆರೆಗೋಡು ಮಣ್ಣಿನಿಂದ ರಸ್ತೆ ಕೆಸರುಮಯ

ಅಂಬಲಾರೆ ಗ್ರಾಮದ ಕೆರೆ ಏರಿ ಮೇಲೆ ಗೋಡು ಮಣ್ಣು ರಸ್ತೆಗೆ ಅಂಟಿಕೊಂಡು ಕೆಸರುಮಯವಾದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ವಾಹನ ಸಂಚರಿಸಲು ಹರಸಾಹಸಪಟ್ಟಿತ್ತು.
ಅಂಬಲಾರೆ ಗ್ರಾಮದ ಕೆರೆ ಏರಿ ಮೇಲೆ ಗೋಡು ಮಣ್ಣು ರಸ್ತೆಗೆ ಅಂಟಿಕೊಂಡು ಕೆಸರುಮಯವಾದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ವಾಹನ ಸಂಚರಿಸಲು ಹರಸಾಹಸಪಟ್ಟಿತ್ತು.
Published on
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಅಂಬಲಾರೆ ಗ್ರಾಮದಿಂದ ಬಿಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಕೆರೆ ಏರಿ ಮೇಲಿನ ಮುಖ್ಯರಸ್ತೆಯಲ್ಲಿ ಬಿದ್ದಿರುವ ಕೆರೆಗೋಡು ಮಣ್ಣು ತೆರವಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆರೆಯಲ್ಲಿನ ಗೋಡು ಮಣ್ಣನ್ನು ಸಾಗಿಸುವ ವೇಳೆ ವಾಹನಗಳಿಂದ ರಸ್ತೆ ಮೇಲೆ ಮಣ್ಣು ಚೆಲ್ಲಿತ್ತು. ಅದು ರಸ್ತೆಗೆ ಅಂಟಿಕೊಂಡಿದೆ. ಪರಿಣಾಮ ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಮಯವಾಗಿ ಮಾರ್ಪಾಟಾಗುತ್ತಿದ್ದು, ವಾಹನ ಸವಾರರು ಸಂಚರಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಈ ರಸ್ತೆ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರತಿನಿತ್ಯ ಶಾಲಾ ವಾಹನಗಳು, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಕೆಸರುಮಯವಾಗಿರುವುದರಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ಇದು ಮಾತ್ರವಲ್ಲದೆ ಈ ಭಾಗದ ರೈತರಿಗೂ ಓಡಾಟ ಮಾಡಲು ಸಂಕಷ್ಟವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಮೇಲಿರುವ ಗೋಡು ಮಣ್ಣನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ಪ್ರಕಾಶ್, ಸಂತೋಷ್ ಪಾಟೀಲ್, ಮಹೇಶ್, ರಾಘವೇಂದ್ರ, ತ್ರಿನೇಶ್, ಪ್ರಸನ್ನ, ಅರುಣ್ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net