ಕಾಂಗ್ರೆಸ್ ಆಡಳಿತ ವೈಫಲ್ಯವೇ ನಿಜವಾದ ಸಾಧನೆ

ಎಲ್.ನಾಗೇಂದ್ರ
ಎಲ್.ನಾಗೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಟೀಕೆ
ಮೈಸೂರು: ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆಯೇ ಶೂನ್ಯ. ಭ್ರಷ್ಟಾಚಾರ, ಸಾಲದ ಸುಳಿ, ಆಡಳಿತ ವೈಫಲ್ಯವೇ ಇದರ ನಿಜವಾದ ಸಾಧನೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಟೀಕಿಸಿದರು.
ಯಾವ ಸಾಧನೆ ಮಾಡಿದೆ ಎಂದು ತುಮಕೂರಿನಲ್ಲಿ ಸಾಧನಾ ಸಮಾವೇಶ ಮಾಡಿದೆ? ಅನೀತಿ, ಅಧರ್ಮ, ಅರಾಜಕತೆ, ಭಷ್ಟಾಚಾರವೇ ಸಾಧನೆಯೇ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಕಿತ್ತಾಟ ಈಗಲೂ ಮುಂದುವರಿದಿದೆ. ಸಚಿವರು ಮತ್ತು ಶಾಸಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿ ಯಾತ್ರೆ ನಡೆಸಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. 2023-24ರಲ್ಲಿ ಗ್ಯಾರಂಟಿ ಯೋಜನೆಗಳಿಗೆ 36,000 ಕೋಟಿ ರೂ. ಕೊಟ್ಟು, 82,000 ಕೋಟಿ ರೂ. ಸಾಲ ಮಾಡಲಾಗಿದೆ. 2024-25ರಲ್ಲಿ 56,000 ಕೋಟಿ ರೂ. ನೀಡಿ, 1.05 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. 
2025-26ರಲ್ಲಿ 52,000 ಕೋಟಿ ರೂ. ವ್ಯಯಿಸಿ, 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. 3 ವರ್ಷದಲ್ಲಿ 5 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಬಡ್ಡಿ ಪಾವತಿಗೆ 45,600 ಕೋಟಿ ರೂ. ವ್ಯಯಿಸಲಾಗುತ್ತಿದೆ. ಸಾಲ ಮಾಡಿ ಗ್ಯಾರಂಟಿ ಯೋಜನೆ ನೀಡುವುದೂ ಸಾಧನೆಯೇ? ಎಂದು ಹರಿಹಾಯ್ದರು.
ಸರ್ಕಾರವು ವಿವಿಧ ಹಗರಣಗಳಲ್ಲಿ ಮುಳುಗಿದೆ. ನಾಗೇಂದ್ರ ವಿರುದ್ಧ ವಾಲ್ಮೀಕಿ ನಿಗಮ ಹಗರಣ, ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಜಮೀರ್ ಅಹಮದ್ ವಿರುದ್ಧ ಕಲ್ಯಾಣ ಕರ್ನಾಟಕ ನಿಧಿ ಹಂಚಿಕೆಯಲ್ಲಿ ಭ್ರಷ್ಟಾಚಾರ, ಭೈರತಿ ಸುರೇಶ್, ರಹೀಮ್ ಖಾನ್ ವಿರುದ್ಧ ಅಮೃತ ಯೋಜನೆ, ನಗರಾಭಿವೃದ್ಧಿ ನಿಧಿಯಲ್ಲಿ ಹಣ ದುರುಪಯೋಗದ ಆರೋಪಗಳು ತನಿಖಾ ಹಂತದಲ್ಲಿವೆ. ಸಿಎಂಗೆ ಮುಡಾ ನಿವೇಶನ ಹಗರಣದ ಮಸಿ ಅಂಟಿಕೊಂಡಿದೆ. ಇದುವೇ ಇವರ ಸಾಧನೆ ಎಂದು ಕುಟುಕಿದರು.
 ಬಸ್ ದರ, ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ, ಹಾಲಿನ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಹಾಲಿನ ಮೇಲಿನ 5 ರೂ. ಸಬ್ಸಿಡಿಯನ್ನೂ ನಿಲ್ಲಿಸಲಾಗಿದೆ. ಸುಮಾರು 350 ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಸಿಎಂ ಜಿಲ್ಲೆಯಾದ ಮೈಸೂರಿಗೆ ಸರ್ಕಾರದ ಕೊಡುಗೆ ಶೂನ್ಯ.
 ಕನಿಷ್ಠ ಸಾವಿರ ಜನರಿಗೆ ಉದ್ಯೋಗ ನೀಡುವ ಬೃಹತ್ ಕೈಗಾರಿಕೆ ತರಲು ಸಾಧ್ಯವಾಗಿಲ್ಲ. ಉತ್ತಮ ರಸ್ತೆ ನಿರ್ಮಾಣವಾಗಿಲ್ಲ. ದಸರಾದಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡದೆ ಕೇವಲ ಪ್ಯಾಚ್ ವರ್ಕ್ ಮಾಡಲಾಯಿತು ಎಂದು ದೂರಿದರು. 
ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗಿವೆ. ಗೃಹ ಸಚಿವರು ಕೇವಲ ಮಾಹಿತಿ ಪಡೆಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಮೈಸೂರು ನಗರದಲ್ಲಿ 1,000 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಾಲವಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಕುಟುಕಿದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಸೋಮಸುಂದರ್, ವಸಂತಕುಮಾರ್, ಬಿ.ಎಂ.ರಘು, ರುದ್ರಮೂರ್ತಿ, ಕಾರ್ತಿಕ್ ಮರಿಯಪ್ಪ, ಶಿವರಾಜ್, ಸಂತೋಷ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net