ಶರಣ ತತ್ವಗಳು ಇಡೀ ಮನುಕುಲದ ಆಸ್ತಿ

ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಂಕರ್ ಮಹದೇವ ಬಿದರಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಡಾ.ಸಿ.ಸೋಮಶೇಖರ್, ತೋಂಟದಾರ್ಯ ಇತರರು ಇದ್ದರು.
ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಂಕರ್ ಮಹದೇವ ಬಿದರಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಡಾ.ಸಿ.ಸೋಮಶೇಖರ್, ತೋಂಟದಾರ್ಯ ಇತರರು ಇದ್ದರು.
Published on
ಬಸವಾದಿ ಶರಣರ ತತ್ವಗಳು ಇಡೀ ಮಾನವ ಕುಲಕೋಟಿಯ ಆಸ್ತಿಯಾಗಿದ್ದು, ಅವರು 12ನೇ ಶತಮಾನದಲ್ಲಿ ಕೊಟ್ಟಿರುವ ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ್ ಮಹದೇವ ಬಿದರಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವ ತತ್ವ ಎನ್ನುವುದು ಜೀವನ ಪದ್ಧತಿಯಾಗಿದೆ. ಬಸವಣ್ಣ ಅವರು ಕೇವಲ ನಮಗೆ ಮಾತ್ರ ಅಲ್ಲ ಇಡೀ ಮಾನವ ಕುಲಕೋಟಿಗೆ ಸೇರಿದವರು. ಅವರ ತತ್ವಗಳನ್ನು ಪಾಲಿಸುವ ಕರ್ತವ್ಯ 800 ಕೋಟಿ ಜನರ ಮೇಲೂ ಇದೆ ಎಂದರು.
ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಎಲ್ಲ ಬಸವ ಬಳಗಗಳು, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ಬಸವ ಜಯಂತಿ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಆಚರಣೆ ಮಾಡಬೇಕು. ಮೈಸೂರಿನ ಆದರ್ಶ ಪದ್ಧತಿಯನ್ನು ಎಲ್ಲ ಸಂಘಟನೆಗಳು ಅನುಸರಿಸಬೇಕು ಎಂದರು.
ಸಿಖ್ ಜನಾಂಗಕ್ಕಿಂತ ಲಿಂಗಾಯತ ಸಮುದಾಯ ಶೇ.2ರಷ್ಟು ಹೆಚ್ಚಿದೆ. ಆದರೆ, ಅವರಲ್ಲಿರುವ ಸಾಮಾಜಿಕ ಕಳಕಳಿ, ಆರ್ಥಿಕ, ರಾಜಕೀಯ, ಸಾಮಾಜಿಕ ಶಕ್ತಿ ನಮ್ಮಲ್ಲಿ ಇಲ್ಲ. ಇದಕ್ಕೆ ಕಾರಣ ಏನು ಎಂದು ನಾವು ಆತ್ಮಶೋಧನೆ ಮಾಡಬೇಕಿದೆ ಎಂದರು.
ವೀರಶೈವರು-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ. ಒಬ್ಬರ ತತ್ವಗಳು ಸಂಸ್ಕೃತದಲ್ಲಿ ಮತ್ತೊಬ್ಬರದ್ದು ಕನ್ನಡದಲ್ಲಿ ಇರಬಹುದು. ಎರಡೂ ಒಂದೇ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ ದೊಡ್ಡ ಮಟ್ಟದ ಕ್ರಾಂತಿಯನ್ನೇ ಮಾಡಿದ್ದರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವವನ್ನು ಪರಿಚಯ ಮಾಡಿದರು ಎಂದು ತಿಳಿಸಿದರು.
ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಮಾತನಾಡಿ, ನಾವು ಇಂದು ಬಸವಣ್ಣನವರ ಜಯಂತಿ ಮಾತ್ರ ಆಚರಣೆ ಮಾಡುತ್ತಿಲ್ಲ. ಇದು ಒಂದು ಚಿಂತನೆಯ ಉದಯ. ಮಾನವತವಾದ ಮಹಾ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾಯೋಗಿಯ ಸ್ಮರಣೆ. ಅವರ ವಚನಗಳು ಸದಾ ಪ್ರಸ್ತುತ ಎಂದರು.
ಎಡಿಸಿ ಡಾ.ಪಿ.ಶಿವರಾಜು ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂದು ಹೇಳಿಕೊಟ್ಟವರು ನಮ್ಮ ಬಸವಣ್ಣ. ಹಾಗಾಗಿ, ಇಡೀ ಜಗತ್ತು ಶಾಂತಿಯಿಂದ ಇರಬೇಕಾದರೆ ಬಸವ ತತ್ವ ಆಚರಣೆ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಬೆಂಗಳೂರಿನ ಸಮಂಗಲಿ ಶೇವಾಶ್ರಮದ ಡಾ.ಎಸ್.ಜಿ.ಸುಶೀಲಮ್ಮ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ರೈತ ಪರ ಹೋರಾಟಗಾರ ಕುರುಬೂರು ಶಾಂತಕುಮಾರ್, ಶಿಕ್ಷಣ ತಜ್ಞ ಎನ್.ಸಚ್ಚಿದಾನಂದ ಮೂರ್ತಿ, ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರನ್ನು ಅಭಿನಂದಿಸಲಾಯಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್, ಮಾಜಿ ಎಂಎಲ್‌ಸಿಗಳಾದ ತೋಂಟದಾರ್ಯ, ಪ್ರೊ.ಕೆ.ಆರ್.ಮಲ್ಲಿಕಾರ್ಜನಪ್ಪ, ಮಾಜಿ ಶಾಸಕ ಸಿ.ಎನ್.ನಿರಂಜನ್‌ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು, ಬಸವ ಜಯಂತಿ-2026 ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net