ವಾರಸುದಾರರಿಲ್ಲದ ಆಸ್ತಿಗಳಿಗೆ ಅಧಿಕಾರಿಗಳೇ ಮಾಲೀಕರು!

ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಲೋಕಯುಕ್ತ ರಿಂದ ಸಾರ್ವಜನಿಕ ರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರಿಗೆ ಲಾರಿ ಪ್ರಕಾಶ್ ದೂರು ಮಾಡುತ್ತಿರುವುದು.
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಲೋಕಯುಕ್ತ ರಿಂದ ಸಾರ್ವಜನಿಕ ರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರಿಗೆ ಲಾರಿ ಪ್ರಕಾಶ್ ದೂರು ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ನಾಗರಿಕರ ದೂರು
  • ಎಸಿ ಆದೇಶ ಇದ್ದರೂ ಖಾತೆ ಮಾಡಿಕೊಡುತ್ತಿಲ್ಲ
ಎಚ್.ಡಿ.ಕೋಟೆ : ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡಿದ್ದಾರೆ, ಜಮೀನಿಗೆ ತಿರುಗಾಡಲು ರಸ್ತೆ ಬಿಡಿಸುತ್ತಿಲ್ಲ, ತಾಲೂಕು ಮುಖ್ಯರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಎಸಿ ಆದೇಶ ಇದ್ದರೂ ಖಾತೆ ಮಾಡಿಕೊಡುತ್ತಿಲ್ಲ... ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮ ಸಹಾಯಕರು ದಾಖಲಾತಿ ನೀಡಲು ಲಂಚಕ್ಕೆ ಕೇಳುತ್ತಾರೆ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲ.. ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಮೆಡಿಕಲ್‌ಗೆ ಔಷಧಿ ಚೀಟಿ ಬರೆಯುತ್ತಾರೆ...! 
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕ ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಕೇಳಿಬಂದ ಪ್ರಮುಖ ದೂರುಗಳು.
ನಾಗರಿಕ ಲಾರಿ ಪ್ರಕಾಶ್ ಮಾತನಾಡಿ, ಕೋಟೆ ಟೌನ್ ಸ.ನಂ 166/65  1977 (ಹೊಸ ಸರ್ವೇ ನಂಬರ್ 395) ರಲ್ಲಿ ಚಿಕ್ಕತಾಯಮ್ಮ ಎಂಬುವವರಿಗೆ ದರಕಾಸ್ತು ಮೂಲಕ ಮಂಜೂರಾದ 3 ಎಕರೆ 20 ಜಮೀನನ್ನು ಎಚ್.ಡಿ.ಕೋಟೆ ವೃತ್ತದ ಗ್ರಾಮಲೆಕ್ಕಿಗ ಸಾಗುವಳಿ ಮೂಲಕ ಮಂಜೂರಾದ ಜಮೀನನ್ನು ಬೇರೆ ಸಮುದಾಯದ ಲಕ್ಷ್ಮಮ್ಮ  ಅವರಿಗೆ ಹೇಳಿಕೆ ಮೇರೆಗೆ ಖಾತೆ ಮಾಡಿ ಅದರಲ್ಲಿ ತಮ್ಮ ತಂದೆಯ ಹೆಸರಿಗೆ 2 ಎಕರೆ ಜಮೀನನ್ನು ಖಾತೆ ಮಾಡಿಸಿಕೊಂಡು ನಂತರ ಒಂದು ಎಕರೆಗೆ 50 ಲಕ್ಷ ರೂ. ನಂತೆ ಒಂದು ಕೋಟಿ ರೂ.ಗೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ವಾರಸುದಾರರು ಇಲ್ಲದ ಈ ಜಮೀನನ್ನು ರಾಜೇಶ್ ಎಂಬ ಗ್ರಾಮ ಲೆಕ್ಕಿಗ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಸೇರಬೇಕಾದ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿ ಮಾರಾಟ ಮಾಡಿದ್ದಾನೆ. ಹಾಗಾಗಿ ಈತನ ಮೇಲೆ ತನಿಖೆ ನಡೆಸಿ ಶಿಸ್ತು ಕ್ರಮ ಆಗಬೇಕು ಎಂದು ದೂರು ನೀಡಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರು ಈ ಬಗ್ಗೆ ಅರ್ಜಿ ನಮೂನೆ ಒಂದರಲ್ಲಿ ದೂರು ನೀಡಿ ಈ ಬಗ್ಗೆ ಲೋಕಾಯುಕ್ತ ರಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಮಾದಾಪುರ ಗ್ರಾಮದ ಕುಮಾರಸ್ವಾಮಿ ಮಾತನಾಡಿ ಪಡುಕೋಟೆ ಸ.ನಂ 53 ರಲ್ಲಿ ರವಿ, ರುದ್ರಮ್ಮ ಹಾಗೂ ಇತರರಿಗೆ ಪೌತಿ ಖಾತೆಯಾಗಿರುವ 5-12 ಎಕರೆ ಜಮೀನನ್ನು ಅಣ್ಣೂರು ಮತ್ತು ಸವ್ವೆ ವೃತ್ತದ ಗ್ರಾಮ ಲೆಕ್ಕಿಗ ಎಚ್.ಕೆ. ಪುನೀತ್ ಕುಮಾರ್ ದರಕಾಸ್ತು ಜಮೀನು ತನ್ನ ಹೆಸರಿಗೆ ಕ್ರಯದ ಕರಾರು ಮಾಡಿಕೊಂಡು ನಾಲ್ಕು ತಿಂಗಳಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಮೀನು ದುರಸ್ತಿ ಮಾಡಿಸಿ ನಂತರ ತನ್ನ ಪತ್ನಿ ಹೆಸರಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯ ಮಾಡಿ ಖಾತೆ ಕಡತಗಳನ್ನು ಮಾಡಿಸಿಕೊಂಡಿದ್ದಾನೆ, ಇದೇ ಸರ್ವೇ ನಂಬರ್ ನ ಜಮೀನನ್ನು ದುರಸ್ತಿ ಮಾಡಲು ಎರಡು ವರ್ಷದ ಹಿಂದೆ ಅರ್ಜಿ ಸಲ್ಲಿಸಿದರು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹಲವು ಕಾರಣಗಳನ್ನು ನೀಡಿ ದುರಸ್ತಿ ಮಾಡದೆ ವಿಲೇ ಮಾಡಿದ್ದಾರೆ. ಹಾಗಾಗಿ ಈತನ ಮೇಲೆ ಲೋಕಯುಕ್ತ ತನಿಖೆ ಮಾಡಿ ಸರ್ಕಾರಿ ಸೇವೆಯಿಂದ ವಜಾ ಮಾಡಲು ಒತ್ತಾಯಿಸಿದರು. ನಂತರ ಮಾತನಾಡಿದ ಲೋಕಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಸರಗೂರು ತಹಸೀಲ್ದಾರ್ ಅವರು ಸಾರ್ವಜನಿಕರ ಕೆಲಸ ಕಾರ್ಯ ಮಾಡುವಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಶಾಸಕರು ಹೇಳಿದರು ಅವರ ಸಮ್ಮುಖದಲ್ಲಿ ಒಪ್ಪಿಕೊಳ್ಳುತ್ತಾರೆ, ಆದರೆ ಕೆಲಸ ಮಾಡಿಕೊಡುತ್ತಿಲ್ಲ. ಗ್ರಾಮದಲ್ಲಿ ಬಹಿಷ್ಕಾರ ಹಾಕಿದ್ದಾರೆ. ತಹಸೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡಿದರು ಪ್ರಯೋಜನ ಆಗಿಲ್ಲ. ಭತ್ತದ ಖರೀದಿ ಕೇಂದ್ರ ತೆರೆಯದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಲ್ಲಿ ಡ್ರಿಪ್ ಸರಬರಾಜು ನೀಡುವ ಬಗ್ಗೆ ರೈತರಿಗೆ ಸರ್ಕಾರದಿಂದ ಸಹಾಯಧನ ಸಿಗುವ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿಲ್ಲ. ಜಕ್ಕಹಳ್ಳಿ ಮಾಳ ಆಶ್ರಮ ಶಾಲೆಯಲ್ಲಿ 150 ಹೆಣ್ಣು ಮಕ್ಕಳು ಇದ್ದಾರೆ, ಮೂಲಸೌಕರ್ಯ ಇಲ್ಲದೆ ನರಳುತ್ತಿದ್ದಾರೆ. ಇದರ ಬಗ್ಗೆ ದೂರು ನೀಡಿದರು. ಸಂಬಂಧಿಸಿದ ಅಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ತುಂಬ ಉಡಾಫೆಯಿಂದ ವರ್ತನೆ ಮಾಡುತ್ತಿದ್ದಾರೆ.
ತಹಸೀಲ್ದಾರ್ ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ, ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಬಂದರು ಸರಿಯಾಗಿ ಸಾರ್ವಜನಿಕರ ಕೆಲಸ ಮಾಡುವುದಿಲ್ಲ, ತಾಲೂಕು ಕೇಂದ್ರ ಸ್ಥಾನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಹೊರತು ಪಡಿಸಿದರೇ ಬೇರೆ ಇನ್ಯಾವುದೇ ಇಲಾಖೆ ಅಧಿಕಾರಿಗಳು ವಾಸ ಇರುವುದಿಲ್ಲ ಎಂಬ ಪ್ರಮುಖ ದೂರುಗಳು ಕೇಳಿಬಂದವು.
ದೂರುಗಳನ್ನು ಸ್ವೀಕರಿಸಿ ಸ್ಥಳದಲ್ಲಿ ಕೆಲವು ಅರ್ಜಿಗಳನ್ನು ಇತ್ಯರ್ಥ ಮಾಡಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಸಮಸ್ಯೆ ಇದೆ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲು ವಿಳಂಬ ಮಾಡಿದಲ್ಲಿ ನಾವು ಕ್ರಮ ತೆಗೆದುಕೊಳ್ಳಬಹುದು. ಉದ್ದೇಶ ಪೂರಕವಾಗಿ ನೀಡುವ ದೂರುಗಳನ್ನು ದೃಡಿಕರಣದೊಂದಿಗೆ ನೀಡಿದರೆ ಆ ಅರ್ಜಿಗಳನ್ನು ಲೋಕಾಯುಕ್ತಕ್ಕೆ ಕಳಿಸಲಾಗುತ್ತದೆ ಎಂದರು.
ತಹಸೀಲ್ದಾರ್ ಶ್ರೀನಿವಾಸ್, ಲೋಕಾಯುಕ್ತ ವೆಂಕಟೇಶ್, ಇನ್‌ಸ್ಪೆಕ್ಟರ್ ಕಿರಣ್, ಇಒ ಧರಣೀಶ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್, ವೀಣಾ, ಡಾ.ಟಿ.ರವಿಕುಮಾರ್, ಉಪ ತಹಸೀಲ್ದಾರ್ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್, ಎಇಇ ಗಣೇಶ್, ನಟಶೇಖರ ಮೂರ್ತಿ, ಮಟಕೆರೆ ಕೃಷ್ಣ, ಅನುಷಾ ಕೋಟೆ, ಸಣ್ಣಕುಮಾರ್, ವನಸಿರಿ ಶಂಕರ್, ಜಿವಿಕ ಬಸವರಾಜು ಇದ್ದರು.
ಗ್ರಾಮ ಸಹಾಯಕರಿಂದ ಲಂಚಕ್ಕೆ ಬೇಡಿಕೆ
ನೇರಳೆ ಆನಂದ್ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ರೆಕಾರ್ಡ್ ರೂಂ.ನಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕರು ರೈತರಿಗೆ ದಾಖಲಾತಿ ನೀಡಲು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದೆ ಇದ್ದರೆ ಕಡತಗಳನ್ನು ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ರಾಜಕೀಯ ಒತ್ತಡಕ್ಕೆ ಮಣಿದು ಇವರನ್ನು ಇಲ್ಲೇ ಮುಂದುರಿಸುತ್ತಿದ್ದಾರೆ. ಇವರ ಹಾವಳಿ ಮಿತಿಮೀರಿದ್ದು ಇವರ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ದೂರಿದರು.
ಕಬಿನಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಭೂಸ್ವಾದೀನ ಆದ ಜಮೀನಿನಲ್ಲಿ ಅಕರ್ಮ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸಫಾರಿ ಇಡೀ ದೇಶದಲ್ಲಿ ಇದೆ. ನಿಲ್ಲಿಸುವುದಾದರೆ ಎಲ್ಲ ಕಡೆ ನಿಲ್ಲಿಸಿ, ಬಂಡಿಪುರ ಮತ್ತು ನಾಗರಹೊಳೆ ಅರಣ್ಯದಲ್ಲಿ ಮಾತ್ರ ಹುಲಿಗಳು ಇಲ್ಲ, ಎಲ್ಲ ಕಡೆ ಇವೆ ಎಂದರು.
ಖಾಸಗಿ ಮೆಡಿಕಲ್‌ಗೆ ಚೀಟಿ ಬರೆದರೆ ಕ್ರಮ
ಸಾರ್ವಜನಿಕರಿಗೆ ಹೆಚ್ಚು ಅವಶ್ಯಕತೆ ಇರುವುದು ಆರೋಗ್ಯ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರದಿಂದ ವಿತರಣೆ ಆದ ಔಷಧ ಇದ್ದರು ವೈದ್ಯರು ಖಾಸಗಿ ಆಸ್ಪತ್ರೆಗೆ ಚೀಟಿ ಬರೆಯುತ್ತಾರೆ ಎಂಬ ದೂರುಗಳು ಇವೆ. ಸಾರ್ವಜನಿಕ ಆಸ್ಪತ್ರೆಗೆ ಬಹುತೇಕ ಬರುವವರು ಬಡವರು. ನೀವು ಹೊರಗಡೆಗೆ ಔಷಧ ತರಲು ಚೀಟಿ ಬರೆದರೆ ಬಡವರು ದುಬಾರಿ ಹಣವನ್ನು ಎಲ್ಲಿಂದ ತರಬೇಕು. ಯಾವ ವೈದ್ಯರು ಖಾಸಗಿ ಮೆಡಿಕಲ್ ಗೆ ಚೀಟಿ ಬರೆದರೆ ಅಂತವರ ಮಾಹಿತಿ ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಎಚ್ಚರಿಕೆ ನೀಡಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net