ಸುಮಾರು 13 ವರ್ಷಗಳ ಬಳಿಕ ಆಚರಿಸುತ್ತಿರುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಕೋಮಿನ ಜನರು ಒಗ್ಗಟ್ಟಾಗಿ ಪೂರ್ವ ತಯಾರಿ ನಡೆಸಲಾಗುತ್ತಿದೆ. ಗ್ರಾಮದ ಭಕ್ತರು ಹಾಗೂ ದಾನಿಗಳ ಸಹಕಾರದೊಂದಿಗೆ ನೂತನ ದೇವಾಲಯ ನಿರ್ಮಿಸಲಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ದೇವಿಯ ರಥೋತ್ಸವವು ಶುಕ್ರವಾರ ಮಧ್ಯಾಹ್ನ ನಡೆಯಲಿದ್ದು, ಇದಕ್ಕಾಗಿ ರಥವನ್ನು ಸುಂದರವಾಗಿ ಅಲಂಕರಿಸಲಾಗಿದೆ. ರಥಕ್ಕೆ ಬಣ್ಣ ಬಳಿದು ಸಿಂಗಾರ ಮಾಡಲಾಗಿದೆ. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ, ಕುಡಿಯುವ ನೀರು ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.