ಆರ್ಥಿಕ ಸಂಕಟಕ್ಕೆ ಸಿಲುಕಿ ಬಳಲುತ್ತಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಪಿಂಚಣಿ ಪಾವತಿಗಾಗಿ ರಾಜ್ಯ ಸರ್ಕಾರವು 25 ಕೋಟಿ ರೂ. ಬಿಡುಗಡೆಗೊಳಿಸಿ ಸೋಮವಾರ ಆದೇಶಿಸಿದೆ. ಆದರೆ, ಇದು ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬುವಂತಾಗಿದೆ..!
ಇದು ಪಿಂಚಣಿ ಪರದಾಟದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಹೊರತು, ಶಾಶ್ವತ ಮುಲಾಮು ಆಗಿಲ್ಲ. ಹೀಗಾಗಿ, ಮೈಸೂರು ವಿವಿ ತೊಳಲಾಟ ಮತ್ತೆ ಮುಂದುವರಿಯುವುದು ನಿಶ್ಚಿತ.
ಪಿಂಚಣಿ ವೆಚ್ಚ ನಿರ್ವಹಣೆಗಾಗಿ ಹೆಣಗಾಡುವುದು ಇನ್ನೂ ತಪ್ಪಿಲ್ಲ.
ನಿವೃತ್ತ ಬೋಧಕರು, ಬೋಧಕೇತರರಿಗೆ ಪಿಂಚಣಿ ಪಾವತಿಗಾಗಿ ವಾರ್ಷಿಕ 157.54 ಕೋಟಿ ರೂ. ವಿವಿಗೆ ಬೇಕಾಗಿದೆ. ಈ ಪೈಕಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಕೊಟ್ಟಿರುವ 50 ಕೋಟಿ ರೂ. ಮತ್ತು ಇದೀಗ 25 ಕೋಟಿ ರೂ. ಸೇರಿದಂತೆ 75 ಕೋಟಿ ರೂ. ನೀಡಿದಂತಾಗಿದೆ. ಇನ್ನೂ 82 ಕೋಟಿ ರೂ. ಆರ್ಥಿಕ ಹೊರೆ ವಿವಿ ಮೇಲೆಯೇ ಬಿದ್ದಿದೆ. ಹಾಗಾಗಿ ಪಿಂಚಣಿ ವೆಚ್ಚ ನಿರ್ವಹಣೆಗಾಗಿ ಹೆಣಗಾಡುವುದು ಇನ್ನೂ ತಪ್ಪಿಲ್ಲ.
ನಿವೃತ್ತರಿಗೆ ಪಿಂಚಣಿ ಕೊಡಲು ವಿವಿ ಬಳಿ ದುಡ್ಡು ಇರಲಿಲ್ಲ. 2025ರ ಮಾರ್ಚ್‌ವರೆಗೂ ಹೇಗೋ ಸರಿದೂಗಿಸಿದೆ. ಏಪ್ರಿಲ್‌ನಿಂದ ಸಮಸ್ಯೆ ಗಂಭೀರವಾಗುತ್ತ ಸಾಗಿತ್ತು. ಪಿಂಚಣಿದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಪಿಂಚಣಿಗೆ ಭರಿಸುವ ಮೊತ್ತವೂ ಏರಿಕೆಯಾಗಿದೆ.
ಮೈವಿವಿಯ ಪಿಂಚಣಿ ನಿಧಿ ಸಹ ಖಾಲಿಯಾಗಿದೆ. ಹೀಗಾಗಿ, ಪಿಂಚಣಿ ಪಾವತಿಗೆ ವಿವಿ ಏದುಸಿರು ಬಿಡುತ್ತಿದೆ.
157 ಕೋಟಿ ರೂ. ಪಿಂಚಣಿ ವೆಚ್ಚದ ಹೊರೆ
ಈ ಸಮಸ್ಯೆಯ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ಮೇಲಿಂದ ಮೇಲೆ ತರಲಾಗಿತ್ತು. ಪ್ರಸ್ತಾವನೆ ಸಹ ಸಲ್ಲಿಸಿ ಅನುದಾನ ಬಿಡುಗಡೆಗೆ ಕೋರಿಕೆಯನ್ನೂ ಸಲ್ಲಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಪಿಂಚಣಿ ಕೊಡಲಾಗದಂತಹ ದುಸ್ಥಿತಿಗೆ ಮೈವಿವಿ ಬಂದಿರುವುದು ನೋವಿನ ಸಂಗತಿ. ಹಾಸನ, ಮಂಡ್ಯ, ಚಾಮರಾಜನಗರದಲ್ಲಿ ಹೊಸ ವಿಶ್ವವಿದ್ಯಾಲಯ ಮಾಡುವ ಮೂಲಕ ಮೈವಿವಿ ಹರಿದುಹಂಚಿಹೋಗಿದೆ.
ವಿವಿ ಸ್ಥಿತಿಗತಿ, ಶುಲ್ಕ ಸಂಗ್ರಹ ಸೇರಿದಂತೆ ವಿವಿಧ ಸಂಗತಿಗಳನ್ನು ಗಮನಿಸದೆ, ಕೇವಲ ಪ್ರಚಾರ ಮತ್ತು ಭಾವನೆ ಆಧಾರದಲ್ಲಿ ಹೊಸ ವಿವಿ ರಚಿಸಲಾಗಿದೆ. ಸಂಯೋಜಿತ ಕಾಲೇಜುಗಳ ಸಂಖ್ಯೆ 100ಕ್ಕಿಂತ ಕೆಳಗಿಳಿದಿದ್ದು, ಆದಾಯವೂ ತಗ್ಗಿದೆ. ಇದರ ಫಲವಾಗಿ ಆರ್ಥಿಕ ತೊಂದರೆಗೆ ಸಿಲುಕಿರುವ ಮೈವಿವಿ ಮೇಲೆ 157 ಕೋಟಿ ರೂ. ಪಿಂಚಣಿ ವೆಚ್ಚದ ಹೊರೆ ಬಿದ್ದಿದೆ ಎಂದು ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಜತೆಗೆ, ಸಮಸ್ಯೆಗೆ ಸ್ಪಂದಿಸಿದ ಸಚಿವರು, ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಮೈವಿವಿ ಉಳಿಸಲು ಸಕಾರಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಅನುದಾನ ಬಿಡುಗಡೆ ಮಾಡಿ ಆದೇಶ
ಜ.6ರಂದು ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈವಿವಿ ಪಿಂಚಣಿ ಸಮಸ್ಯೆಗಳನ್ನು ಸರಿಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದರು. ಇದಾಗಿ ಆರು ದಿನದಲ್ಲೇ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಈ ಹಣ ಯಾವುದಕ್ಕೂ ಸಾಲದು ಎಂದು ಮೈವಿವಿ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.
ಕೊರತೆಯನ್ನು ಸರಿದೂಗಿಸುವುದು ಕಷ್ಟಕರ
ಶತಮಾನೋತ್ಸವ ಕಂಡಿರುವ ಮೈವಿವಿಯಲ್ಲಿ ಪಿಂಚಣಿದಾರರ ಸಂಖ್ಯೆ ಪ್ರಸ್ತಕ ಸಾಲಿನಲ್ಲಿ 1,822ರಿಂದ 1881ಕ್ಕೆ ಏರಿಕೆಯಾಗಿದೆ. 21 ಬೋಧಕ, 38 ಬೋಧಕೇತರ ಸೇರಿದಂತೆ 59 ಉದ್ಯೋಗಿಗಳು ನಿವೃತ್ತರಾಗಿದ್ದು, ಪಿಂಚಣಿ, ಪಿಂಚಣಿ ಸೌಲಭ್ಯಗಳ ಬಾಬ್ತಿಗಾಗಿ 157.54 ಕೋಟಿ ರೂ. ಬೇಕಾಗಿದೆ.
ಆದರೆ, ಪ್ರಸ್ತಕ ಆರ್ಥಿಕ ವರ್ಷದಲ್ಲಿ 295.59 ಕೋಟಿ ರೂ. ನಿರೀಕ್ಷಿತ ಆದಾಯ ಮಾತ್ರವಾಗಿದೆ. 403.31 ಕೋಟಿ ರೂ. ನಿರೀಕ್ಷಿತ ವೆಚ್ಚವಾಗಿದೆ. ಆದಾಯ-ಖರ್ಚು ಕಳೆದರೆ 107.72 ಕೋಟಿ ರೂ. ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರವು ಪಿಂಚಣಿ ಅನುದಾನ 157.54 ಕೋಟಿ ರೂ. ಸಂಪೂರ್ಣವಾಗಿ ಬಿಡುಗಡೆ ಮಾಡಿದರೆ 18 ಲಕ್ಷ ರೂ. ಮಾತ್ರ ಕೊರತೆ ಆಗುತ್ತಿತ್ತು. ಆದರೆ, 75 ಕೋಟಿ ರೂ. ನೀಡಿರುವುದರಿಂದ ಉಂಟಾಗಿರುವ ಕೊರತೆಯನ್ನು ಸರಿದೂಗಿಸುವುದು ಕಷ್ಟಕರವಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.
ಕಾಯಂ ಬೋಧಕರು ನೇಮಕವಾದರೆ ಅವರಿಗೆ ಸರ್ಕಾರವೇ ಸಂಬಳ ಕೊಡಲಿದೆ. ಆದರೆ, 14 ವರ್ಷದಿಂದ ಅವರ ನೇಮಕಾತಿ ಆಗದಿದ್ದರಿಂದ ಅತಿಥಿ ಉಪನ್ಯಾಸರಿಗೆ ವಿವಿಯಿಂದಲೇ ವೇತನ ಕೊಡುವಂತಾಗಿದೆ.
ವಿವಿಯ ಪಿಂಚಣಿ ನಿಧಿ ಕಳೆದ ವರ್ಷವೇ ಖಾಲಿ
ಇದು ಸಹ ಹೊರೆಯೇ. ವಿವಿಧ ಇಲಾಖೆಗಳ ನಿವೃತ್ತ ನೌಕರರಿಗೆ ಪಿಂಚಣಿ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ, ಇಲ್ಲಿಯ ನಿವೃತ್ತರಿಗೆ ಪಿಂಚಣಿ ಹಣವನ್ನು ಮೈವಿವಿ ಆಂತರಿಕ ಸಂಪನ್ಮೂಲದಿಂದಲೇ ನೀಡಲಾಗುತ್ತಿದೆ. ಇದುವೇ ಸಮಸ್ಯೆಗೆ ಮೂಲ ಕಾರಣವಾಗಿದೆ. ವಿವಿಯ ಪಿಂಚಣಿ ನಿಧಿ ಕಳೆದ ವರ್ಷವೇ ಭರಿದಾಗಿದೆ. ಕರೋನಾ ಸಂದರ್ಭದಲ್ಲಿ ಪಿಂಚಣಿಗೆ ಸರ್ಕಾರ ಆರ್ಥಿಕ ನೆರವು ತಗ್ಗಿದೆ. ಬಳಿಕ ಸುಧಾರಣೆಯಾಗಿಲ್ಲ.
ಮೈಸೂರು ಜಿಲ್ಲೆಗೆ ಸೀಮಿತವಾಗಿರುವ ಮೈವಿವಿಗೆ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಆದಾಯವೂ ಗಣನೀಯವಾಗಿ ತಗ್ಗಿದೆ. ಆದರೆ, ಹಿಂದಿದ್ದಷ್ಟೇ ವೆಚ್ಚ ಈಗಲೂ ಇದೆ. ಇದು ಆರ್ಥಿಕ ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಸರ್ಕಾರವೇ ಪಿಂಚಣಿದಾರರಿಗೆ ನೇರವಾಗಿ ಪಿಂಚಣಿ ಭರಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬಹುದಾಗಿದೆ. ಇಲ್ಲವಾದರೆ, ವಿವಿ ನಡೆಸುವುದೂ ಕಷ್ಟ. ಪಿಂಚಣಿ ಭರಿಸಲು ಪ್ರತಿ ತಿಂಗಳು ಪರದಾಡುವುದೂ ತಪ್ಪಲ್ಲ.
ಅನುದಾನ ಕೊಟ್ಟು ಷರತ್ತು ವಿಧಿಸಿದ ಸರ್ಕಾರ
ಪಿಂಚಣಿ ಪಾವತಿಗಾಗಿ 2ನೇ ಕಂತಿನ ಹೆಚ್ಚುವರಿ ಅನುದಾನ ಬಿಡುಗಡೆಯೊಂದಿಗೆ ಕೆಲ ಷರತ್ತುಗಳನ್ನೂ ರಾಜ್ಯ ಸರ್ಕಾರ ವಿಧಿಸಲಾಗಿದೆ. ವಿಶ್ರಾಂತಿ ವೇತನಕ್ಕಾಗಿ ಪುನಃ ಹೆಚ್ಚುವರಿ ಅನುದಾನವನ್ನು ಕೋರಬಾರದು.
ಈ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸತಕ್ಕದ್ದು. ಹಣ ಬಳಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಹೊಸ ತಾಂತ್ರಿಕ ಕೋರ್ಸ್ ಆರಂಭಿಸಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿಕೊಳ್ಳಬೇಕು ಎಂದು ತಾಕಿತ್ತು ಮಾಡಿದೆ.
ಮಂಜೂರಾದ ಹುದ್ದೆಗಳಿಂತ ಹೆಚ್ಚಿನ ನೇಮಕಾತಿ ಮಾಡಿಕೊಂಡಿರುವುದನ್ನು ಕೈಬಿಡಬೇಕು. ಅನುಪಯುಕ್ತ, ಬಳಕೆಯಲ್ಲಿ ಇಲ್ಲದ ಕಟ್ಟಡಗಳನ್ನು ಬಾಡಿಗೆಗೆ ನೀಡಬೇಕು. ಕಡಿಮೆ ದಾಖಲಾತಿ ಇರುವ ಕೋರ್ಸ್‌ಗಳನ್ನು ಮುಚ್ಚಬೇಕು.
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಆರ್ಥಿಕ ಆದೇಶ, ಮಿತವ್ಯಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆಯನ್ನು ಪಾಲನೆ ಮಾಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಉಪಕಾರ್ಯದರ್ಶಿ ಎನ್.ಕುಮಾರ್ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಉಳಿದ ವಿವಿಗಳಿಗೂ ಹಣ ಬಿಡುಗಡೆ
ಮೈಸೂರು ವಿವಿಯಂತೆ ರಾಜ್ಯದ ಉಳಿದ ವಿವಿಗಳೂ ಇದೇ ಸಮಸ್ಯೆ ಎದುರಿಸುತ್ತಿವೆ.
ಹೀಗಾಗಿ, ಧಾರವಾಡದ ಕರ್ನಾಟಕ ವಿವಿಗೆ 25 ಕೋಟಿ ರೂ., ಬೆಂಗಳೂರು ವಿವಿಗೆ 5 ಕೋಟಿ ರೂ., ಕಲಬುರಗಿಯ ಗುಲ್ಬರ್ಗಾ ವಿವಿ, ಮಂಗಳೂರು ವಿವಿ, ಶಿವಮೊಗ್ಗದ ಕುವೆಂಪು ವಿವಿಗೆ ತಲಾ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಗುಲ್ಬರ್ಗಾ, ಮಂಗಳೂರು ಮತ್ತು ಕುವೆಂಪು ವಿವಿಗೆ ಇಷ್ಟು ಹಣ ಬೇಕಾಗಿರಲಿಲ್ಲ. ಅನುದಾನಕ್ಕಾಗಿ ಮೈವಿವಿ, ಧಾರವಾಡ ವಿವಿ ಬಹಳಷ್ಟ ಶ್ರಮ ಹಾಕಿದ್ದವು.
"
ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಗಾಗಿ ರಾಜ್ಯ ಸರ್ಕಾರವು 25 ಕೋಟಿ ರೂ. ಅನುದಾನ ಬಿಡುಗಡೆಗೆ ಆದೇಶಿಸಲಾಗಿದೆ. ಆದರೆ, ಇಷ್ಟು ಹಣ ಯಾವುದಕ್ಕೂ ಸಾಲದು. ಇನ್ನೂ 75 ಕೋಟಿ ರೂ.ಗೂ ಹೆಚ್ಚು ಆರ್ಥಿಕ ಹೊರೆ ಹಾಗೆ ಮುಂದುವರಿದಿದೆ.