ಪಿರಿಯಾಪಟ್ಟಣ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಬೇಗ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ಹಾರಂಗಿ ಇಲಾಖೆಯ ಎಇಇ ಗೋಕುಲ್ ಕುಡುವ ಅವರಿಗೆ ಮನವಿ ಸಲ್ಲಿಸಿದರು. ಎ.ಎಸ್.ಸೋಮಶೇಖರ್, ಎಂ.ಎನ್.ಚಂದ್ರಶೇಖರ್, ಐಲಾಪುರ ರಾಮು, ರಾಜೇಗೌಡ, ಚಂದ್ರು ಇತರರಿದ್ದರು.
Published on:
Copied
Follow Us
ಮೈಮಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿಕೆ
ಬೆಟ್ಟದಪುರ:ಪಿರಿಯಾಪಟ್ಟಣ ತಾಲೂಕಿನ 150 ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಸರಿಯಾಗಿ ಪೂರ್ಣಗೊಳ್ಳದ ಪರಿಣಾಮ ಬಹುತೇಕ ಕೆರೆಗಳಿಗೆ ನೀರು ತಲುಪಿಲ್ಲ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು.
ಕುಶಾಲನಗರದ ಹಾರಂಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಶುಕ್ರವಾರ ತೆರಳಿ ತಾಲೂಕಿನ ಜನತೆ ಪರವಾಗಿ ಕೆರೆ ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, 2024ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ, ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ ಎಂದು ಭರವಸೆ ನೀಡಿದ್ದರು. ಇದರಿಂದ ರೈತರು ತಮ್ಮ ಕೆರೆಗಳಿಗೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು. ಆದರೆ ಇದುವರೆಗೂ ಯೋಜನೆಯ ಉದ್ದೇಶ ಈಡೇರಿಲ್ಲ ಎಂದು ಬೇಸರಿಸಿದರು.
ಪ್ರಸಕ್ತ ವರ್ಷ ತೀವ್ರ ಬರಗಾಲದಿಂದ ಬೆಳೆಗಳು ಒಣಗುತ್ತಿದ್ದು, ಜಲಮೂಲಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗದಿರುವುದರಿಂದ ರೈತರು ಹಲವು ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ ಎಂದರು.
ಈ ಸಂಕಷ್ಟದ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದರೆ ರೈತರು, ಜಾನುವಾರುಗಳು ಹಾಗೂ ಪರಿಸರಕ್ಕೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ ತಾಲೂಕು ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ಆದರೆ ಯೋಜನೆ ಕೇವಲ ಪ್ರಚಾರಕ್ಕೆ ಸೀಮಿತವಾಗಿರುವಂತೆ ಕಾಣುತ್ತಿದೆ ಎಂದು ಟೀಕಿಸಿದರು.
ನೆರೆಯ ಹುಣಸೂರು ತಾಲೂಕಿನಲ್ಲಿ ಕೆರೆ-ಕಟ್ಟೆಗಳು ತುಂಬಿದ್ದು, ಅಲ್ಲಿನ ರೈತರಿಗೆ ಅನುಕೂಲವಾಗಿದೆ. ಪಿರಿಯಾಪಟ್ಟಣದಲ್ಲಿ ಶಾಸಕರು ಕೇವಲ ಕಾಲಹರಣ ಮಾಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಹೊರತು ರೈತರ ಪರ ಒಂದು ಕೆಲಸವನ್ನು ಮಾಡುತ್ತಿಲ್ಲ. ಹಾಗಾಗಿ ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ, ಯೋಜನೆಯ ಉದ್ದೇಶದಂತೆ ತಾಲೂಕಿನ ಎಲ್ಲ ಕೆರೆಗಳಿಗೆ ತುರ್ತಾಗಿ ನೀರು ತುಂಬಿಸಬೇಕು. ತಕ್ಷಣ ಕ್ರಮಕೈಗೊಳ್ಳದಿದ್ದರೆ ತಾಲೂಕಿನ ರೈತರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹಾರಂಗಿ ಎಇಇ ಗೋಕುಲ್ ಕುಡುವ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ಬಹು ಬೇಗ ಅದು ಪೂರ್ಣಗೊಳ್ಳಲಿದ್ದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಎ.ಎಸ್ ಸೋಮಶೇಖರ್, ಎಂ.ಎನ್ ಚಂದ್ರಶೇಖರ್, ಐಲಾಪುರ ರಾಮು, ರಾಜೇಗೌಡ, ಚಂದ್ರು, ರವಿ ಸೇರಿದಂತೆ ಇತರರು ಇದ್ದರು.