ಜನಪ್ರಿಯತೆಯ ಗೀಳಿಗೆ ಕಮರಿದೆ ಗುರುಕುಲ ಮಾದರಿ ಪದ್ಧತಿ

 ವಿಭಾಗಮಟ್ಟದ ಎರಡು ದಿನಗಳ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಪ್ರಮೋದ್ ಶಿಗ್ಗಾವಿ ಉದ್ಘಾಟಿಸಿದರು. ಸತೀಶ್ ತಿಪಟೂರು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ ಸುದರ್ಶನ್ ಇತರರಿದ್ದರು.
ವಿಭಾಗಮಟ್ಟದ ಎರಡು ದಿನಗಳ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಪ್ರಮೋದ್ ಶಿಗ್ಗಾವಿ ಉದ್ಘಾಟಿಸಿದರು. ಸತೀಶ್ ತಿಪಟೂರು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ ಸುದರ್ಶನ್ ಇತರರಿದ್ದರು.
Published on
ಇಂದಿನ ದಿನದಲ್ಲಿ ಪಾಲಕರು ಮಕ್ಕಳನ್ನು ರಿಯಾಲಿಟಿ ಶೋಗಳಲ್ಲಿ ಬಿತ್ತರಿಸಿ ಜನಪ್ರಿಯತೆ ಪಡೆಯುವ ಗೀಳಿಗೆ ಕಲೆ, ನೃತ್ಯ, ಸಂಗೀತಗಳನ್ನು ಕಲಿಸುವ ಮನೋಭಾವವನ್ನು ಹೊಂದಿದ್ದಾರೆ. ಹಾಗಾಗಿ ನಮ್ಮಲ್ಲಿ ತಾಳ್ಮೆಯೆನ್ನುವುದೆ ಮರೆಯಾಗಿದ್ದು, ಇಂದಿನ ದಿನಮಾನಗಳಲ್ಲಿ ತಾಳ್ಮೆ ಎಂಬುದು ಬಹಳ ಮುಖ್ಯವಾಗಿದೆ ಎಂದು ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ಪ್ರಮೋದ್ ಶಿಗ್ಗಾವಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭೂಮಿಗೀತ ರಂಗವೇದಿಕೆಯಲ್ಲಿ ಆಯೋಜಿಸಿರುವ ವಿಭಾಗಮಟ್ಟದ ಎರಡು ದಿನಗಳ ಕಲಾ ಪ್ರತಿಭೋತ್ಸವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರೀಲ್ಸ್ ಮತ್ತು ಟಿವಿಗಳ ರಿಯಾಲಿಟಿ ಶೋಗಳ ಆರ್ಭಟದಲ್ಲಿ ಹಿಂದಿನ ಗುರುಕುಲ ಮಾದರಿಯ ಪದ್ಧತಿ ಕಮರಿಹೋಗಿದೆ. ಕಾರಣ ಯಾರಿಗೂ ತಾಳ್ಮೆ ಇಲ್ಲದಂತಾಗಿದೆ ಎಂದರು.
ಸ್ಪರ್ಧೆ ಯಾರ ಜತೆಗಲ್ಲ, ಬದಲಾಗಿ ನಮ್ಮ ಜತೆಗೆ ನಾವೇ ಸ್ಪರ್ಧೆ ನಡೆಸಬೇಕಿದೆ. ಇದು ಬಹಳ ಮುಖ್ಯ. ನಮ್ಮ ಮುಂದಿನ ಗಟ್ಟಿ ಹೆಜ್ಜೆಯನ್ನಿಡಲು ಸ್ಪರ್ಧೆ ಒಂದು ನೆಪ ಮಾತ್ರ. ಹಾಗಾಗಿ ವಿಜೇತರಾದವರು ಭವಿಷ್ಯದಲ್ಲಿ ಅದಕ್ಕೂ ಮಿಗಿಲಾದ ಗುರಿಯ ಕಡೆಗೆ ಚಿಂತಿಸಿ ತೊಡಗಿಕೊಳ್ಳಬೇಕು. ಗೆಲ್ಲದವರು ಮುಂದಿನ ಸ್ಪರ್ಧೆಗಳಲ್ಲಿ ಹೇಗೆ ಗೆಲ್ಲಬೇಕೆಂಬ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಮೂಲಕ ನಮಗೆ ನಾವೇ ಸ್ಪರ್ಧಿಗಳಾಗಬೇಕು ಎಂದು ಬಣ್ಣಿಸಿದರು.
ಎಷ್ಟೋ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದರೂ, ಸರಿಯಾಗಿ ಕನ್ನಡವನ್ನು ಬರೆಯಲು ಬರದಂತಹ, ಅಲ್ಪಪ್ರಾಣ, ಮಹಾಪ್ರಾಣಗಳ ವ್ಯತ್ಯಾಸ ತಿಳಿಯದ, ಮಾತಿನಲ್ಲಿ ಸ್ಪಷ್ಟತೆಯಿಲ್ಲಂತಹ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡು ನಾಟಕಗಳಲ್ಲಿ ಭಾಗವಹಿಸಿ ಒಂದು ವರ್ಷದಲ್ಲೇ ಬಹು ದೊಡ್ಡ ಬದಲಾವಣೆಗಳು ಕಾಣಿಸಿವೆ. ಹಾಗಾಗಿ ರಂಗಭೂಮಿಯ ಪಾಠ ಯಾರನ್ನು ಬೇಕಾದರೂ ಚುರುಕುಗೊಳಿಸುವ, ಪ್ರಜ್ಞಾವಂತರನ್ನಾಗಿಸುವ ಶಕ್ತಿ ಹೊಂದಿದೆ ಎಂದರು.
ಮಕ್ಕಳನ್ನು ಪಾಲಕರು ಯಾವುದಕ್ಕೂ ಸೀಮಿತಗೊಳಿಸಬಾರದು, ಮಕ್ಕಳನ್ನು ಕಟ್ಟಿ ಹಾಕುವ ಕೆಲಸ ಮಾಡಬಾರದು. ಇವತ್ತಿನ ಮಕ್ಕಳಲ್ಲಿ ಅವರ ಬದುಕನ್ನು ಅವರೇ ರೂಪಿಸಿಕೊಳ್ಳುವ ಪರಿಜ್ಞಾನವಿದೆ. ಮಕ್ಕಳಲ್ಲಿ ಕಲೆ ಮತ್ತು ಕಲಿಕೆಯನ್ನು ಜತೆಗೆ ಕೊಂಡೊಯ್ಯುವ ಕೆಲಸವಾಗಲಿ. ಮಕ್ಕಳಿದ್ದ ಕಡೆಯಲ್ಲಿ ಉತ್ಸಾಹದ ಚಿಲುಮೆ ಉಕ್ಕುತ್ತದೆ. ಇದಕ್ಕೆ ರಂಗಾಯಣ ಹಮ್ಮಿಕೊಂಡಿರುವ ಚಿಣ್ಣರ ಮೇಳಗಳು ಸಾಕ್ಷಿಯಾದಂತಿವೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net