ಅರಮನೆ ಅಂಗಳ ಪ್ರವೇಶಿಸಿದ ಗಜಪಡೆ

 ಅರಮನೆ ಅಂಗಳ ಪ್ರವೇಶಿಸಿದ ಗಜಪಡೆ
ಅರಮನೆ ಅಂಗಳ ಪ್ರವೇಶಿಸಿದ ಗಜಪಡೆ
Published on

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಶುಕ್ರವಾರ ಮೈಸೂರು ಅರಮನೆಯನ್ನು ಪ್ರವೇಶಿಸಿತು.

ಮೊದಲ ತಂಡದಲ್ಲಿ ಆಗಮಿಸಿರುವ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ ಹಾಗೂ ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ ಮತ್ತು ಲಕ್ಷ್ಮೀ, ಮತ್ತಿಗೋಡು ಶಿಬಿರದ ಏಕಲವ್ಯ, ಬಂಡೀಪುರದ ರಾಮಪುರ ಶಿಬಿರದ ಶ್ರೀಕಂಠ ಆನೆಗಳು ಅರಮನೆ ಅಂಗಳದ ಬಿಡಾರಕ್ಕೆ ಸೇರಿದವು.
ಬೆಳಗ್ಗೆ 9.52ರಿಂದ 10.19 ಗಂಟೆಯೊಳಗೆ ಸಲ್ಲುವ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಪೂಜೆ ಸಲ್ಲಿಸಿ ಶಾಸ್ತ್ರೋಕ್ತವಾಗಿ ಗಜಪಡೆಯನ್ನು ಬರಮಾಡಿಕೊಳ್ಳಲಾಯಿತು. ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ಹಾಗೂ ಚಾಮುಂಡಿಬೆಟ್ಟದ ಮುಖ್ಯ ಅರ್ಚಕ ಶಶಿ ಶೇಖರ್ ದೀಕ್ಷಿತ್ ಪೂಜೆ ಸಲ್ಲಿಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಇತರ ಜನಪ್ರತಿನಿಧಿಗಳು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ಗಜಪಡೆಯನ್ನು ಬರಮಾಡಿಕೊಂಡರು. ಈ ವೇಳೆ ನಗರ ಪೊಲೀಸ್ ವಾದ್ಯ ವೃಂದದವರು ಸಂಗೀತ ನುಡಿಸಿದರು. ಪೊಲೀಸ್ ಇಲಾಖೆಯಿಂದ ಗಜಪಡೆ ಮತ್ತು ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಎಫ್ ರವಿಶಂಕರ್, ಡಿಸಿಎಫ್‌ಗಳಾದ ಡಾ.ಐ.ಬಿ.ಪ್ರಭುಗೌಡ, ಪರಮೇಶ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮೃಗಾಲಯದ ಕಾರ್ಯನಿರ್ವಹಾಕ ನಿರ್ದೇಶಕಿ ಅನುಷಾ, ನಟಿ ಭವ್ಯಾ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ರಾಜ್ಯ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net