ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ ವೈಭವ

ತಿ.ನರಸೀಪುರದಲ್ಲಿ ಗುರುವಾರ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಶಿವಕಾಮಸುಂದರಿ ಅಮ್ಮನವರ ಸಮೇತ ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ  ಸಂಭ್ರಮದಿಂದ ಜರುಗಿತು.
ತಿ.ನರಸೀಪುರದಲ್ಲಿ ಗುರುವಾರ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಶಿವಕಾಮಸುಂದರಿ ಅಮ್ಮನವರ ಸಮೇತ ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ತಿ.ನರಸೀಪುರದಲ್ಲಿ ಯುಗಾದಿ ಹಬ್ಬದ ಜಾತ್ರೆಗೆ ತೇರು ಮೆರುಗು
  • ನೀಲಕಂಠ ದೀಕ್ಷಿತ್, ಟಿ.ಎಸ್.ರಾಘವೇಂದ್ರ ನೇತೃತ್ವದಲ್ಲಿ ವಿಶೇಷ ಪೂಜೆ
ತಿ.ನರಸೀಪುರ: ಪಟ್ಟಣದ ಹಳೇ ಸಂತೆಮಾಳದ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ ಯುಗಾದಿ ಹಬ್ಬದ ದಿನವಾದ ಗುರುವಾರ ವೈಭವದಿಂದ ಜರುಗಿತು.
ದೇವಾಲಯದಲ್ಲಿ ಮುಂಜಾನೆ ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಉತ್ಸವಮೂರ್ತಿಗೆ ಪುಷ್ಪಾಲಂಕಾರ ಹಾಗೂ ಆಭರಣಗಳಿಂದ ಶಂಗರಿಸಿ, ದಳವಾಯಿ ಅಗ್ರಹಾರದ ಶ್ರೀ ರಾಮಮಂದಿರಕ್ಕೆ ತರಲಾಯಿತು. ವಿಶೇಷ ಪೂಜೆ ಸಲ್ಲಿಸಿ ಮಂಟಪೋತ್ಸವ ನಡೆಸಿದ ಬಳಿಕ ರಥ ಸಂಚರಿಸುವ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ದಳವಾಯಿ ಅಗ್ರಹಾರ ರಸ್ತೆಯ ಅಡುಗೆ ಕಂಟ್ರಾೃಕ್ಟರ್ ಮಣಿ ಅವರ ಮನೆ ಮುಂದೆ ವಿವಿಧ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ಸಿಂಗಾರಗೊಂಡು ಸಿದ್ಧವಾಗಿದ್ದ ರಥದ ಸುತ್ತ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸಿ, ರಥದ ಮೇಲೆ ಕೂರಿಸಲಾಯಿತು. ರಥದ ನಾಲ್ಕು ಚಕ್ರಗಳಿಗೆ ತೆಂಗಿನಕಾಯಿ ಒಡೆದು ನಮಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ರಥಕ್ಕೆ ಚಾಲನೆ ದೊರೆಯಿತು.
ದಳವಾಯಿ ಅಗ್ರಹಾರ, ಹಳೇ ಅಂಚೆ ಕಚೇರಿ ರಸ್ತೆ, ಹಳೇ ಪ್ರೈಮರಿ ಸ್ಕೂಲ್ ರಸ್ತೆ ಮೂಲಕ ತೇರಿನ ಬೀದಿಯಲ್ಲಿ ಕೊನೆಗೊಂಡಿತು. ಆನಂತರ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ದಣಿದಿದ್ದ ಭಕ್ತರಿಗೆ ಪಾನಕ-ಮಜ್ಜಿಗೆ, ಜ್ಯೂಸ್, ಚಾಕಲೇಟ್, ಉಪಾಹಾರ, ಐಸ್‌ಕ್ರೀಂ ವಿತರಣೆ ಮಾಡಲಾಯಿತು. ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆಗಮಿಕ ನೀಲಕಂಠ ದೀಕ್ಷಿತ್, ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ, ಅರ್ಚಕರಾದ ಆರ್.ಅರ್ಜುನ್, ಬಿ.ಶೇಷನ್, ಉದ್ಯಮಿ ಎನ್.ರೇಣುಕಾಪ್ರಸಾದ್(ಮಧು), ಎನ್.ಶ್ರೀಕಂಠಪ್ರಸಾದ್(ಚಂದು) ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net