ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಕೆ.ಎಂ.ಹರಿಣಿಕುಮಾರ್, ಮಂಜುನಾಥ್ ಎನ್. ಬೇದ್ರೆ, ಪ್ರೊ.ಶೈಲೇಂದ್ರ ಮೋಹನ್, ಎನ್.ಕೇಶವ ಮೂರ್ತಿ, ಪಿ.ಆನಂದ್ ಇದ್ದರು.
ಮೈಸೂರು: ಕೃತಕ ಬುದ್ಧಿಮತ್ತೆ ಅಳವಡಿಸುವ ಮೂಲಕ ಕೃಷಿಯ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಹೇಳಿದರು.
ರೇಡಿಯೋ ಕಿಸಾನ್ ದಿನದ ಸಂದರ್ಭದಲ್ಲಿ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಕೃಷಿ ನವೋದ್ಯಮಗಳನ್ನು ಕುರಿತು ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಕೃಷಿ ಭೂಮಿಯು ಸ್ವರ್ಗದ ಭೂಮಿ. ಆದರೆ ರಾಸಾಯನಿಕಗಳ ಅತಿಯಾದ ಬಳಕೆಯಿಂದ ನಾವು ಅದನ್ನು ನರಕದ ಭೂಮಿಯಾಗಿ ಬದಲಾವಣೆ ಮಾಡುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರವು ದೇಶದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಅಡಿಪಾಯವಾಗಿದೆ. ಗ್ರಾಮೀಣ ಬದುಕು ಈ ಕೃಷಿಯಿಂದಲೇ ನಡೆಯುತ್ತಿದೆ. ಆಹಾರ ಭದ್ರತೆ ಹಾಗೂ ವಿವಿಧ ರೀತಿಯ ಆಹಾರ ಸಂಸ್ಕರಣೆಯಿಂದ ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಹೇಳಿದರು.
ಕೃಷಿ ಕ್ಷೇತ್ರ ಶೇ.46ರಷ್ಟು ಜನಸಂಖ್ಯೆಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಒದಗಿಸುತ್ತಿದ್ದು, ಒಟ್ಟು ದೇಶಿಯ ಉತ್ಪನ್ನಕ್ಕೆ ಶೇ.18ರಷ್ಟು ಜಿಡಿಪಿಯನ್ನು ಕೊಡುಗೆಯಾಗಿ ಕೃಷಿ ಕ್ಷೇತ್ರ ನೀಡುತ್ತಿದೆ. ಕೃಷಿಯನ್ನು ನಂಬಿ ನಡೆಯುವ ಕೈಗಾರಿಕೆಗಳು ಆರ್ಥಿಕವಾಗಿ ಸದೃಢವಾಗಲು ಹೊಸ ಆಯಾಮಗಳನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಸರ್ಕಾರ ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದ್ದರೂ ಕೃಷಿ ಕ್ಷೇತ್ರದಲ್ಲಿ ಹವಾಮಾನ ಬದಲಾವಣೆ, ಕೃಷಿ ವೆಚ್ಚದ ಏರಿಕೆ, ಬೆಳೆಯ ಅಪಾಯಗಳು ಮಾರುಕಟ್ಟೆಯ ಅಸ್ಥಿರತೆಗಳಿಂದ ಕೃಷಿ ಕ್ಷೇತ್ರದಲ್ಲಿ ತೊಂದರೆಗಳನ್ನು ಅನುಭವಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದತ್ತಾಂಶ ಆಧಾರಿತ ಹಾಗೂ ಮುಂಚಿತ ನಿರ್ಧಾರಗಳನ್ನು ಕೈಗೊಳ್ಳಲು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಸಹಾಯವನ್ನು ಬಳಸಿಕೊಳ್ಳಬಹುದಾಗಿದೆ. ಕೃತಕ ಬುದ್ಧಿಮತ್ತೆಯಿಂದ ರೈತರ ಜೀವನೋಪಾಯವನ್ನು ಬದಲಾವಣೆ ಮಾಡಲು ಅತ್ಯಂತ ಸಹಾಯಕವಾಗಿದೆ. ರೈತರು ಜ್ಞಾನವನ್ನು ಹೆಚ್ಚು ಗಳಿಸುವಲ್ಲಿ ಕೃತಕ ಬುದ್ಧಿಮತ್ತೆಯು ಸಹಾಯಕವಾಗಿದೆ ಎಂದು ತಿಳಿಸಿದರು.
ಆಕಾಶವಾಣಿ ಸಹಾಯಕ ನಿರ್ದೇಶಕ ಮಂಜುನಾಥ್ ಎನ್.ಬೇದ್ರೆ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಆಕಾಶವಾಣಿ ರೇಡಿಯೋ ಮಹತ್ತರ ಪಾತ್ರ ವಹಿಸಿಕೊಂಡು ಮುನ್ನಡೆಸುತ್ತ ಬರುತ್ತಿದೆ. ಆಕಾಶವಾಣಿಯಲ್ಲಿ ಬರುವ ಕೃಷಿ ಕಾರ್ಯಕ್ರಮಗಳಲ್ಲಿ ಇನ್ನು ಹೊಸ ಹೊಸ ವಿನೂತನ ಕಾರ್ಯಕ್ರಮಗಳನ್ನು ರೈತರಿಗೆ ಹಂತ ಹಂತವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಆಕಾಶವಾಣಿಯಲ್ಲಿ ನಡೆಸುವ ಕೃಷಿ ರಂಗದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆ ಕ್ಷಣದ ಅಗತ್ಯಗಳನ್ನು ಕೃಷಿ ರಂಗದ ಕಾರ್ಯಕ್ರಮದಲ್ಲಿ ರೈತರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.
ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ ಮೂರ್ತಿ, ಪಿ.ಆನಂದ್ ಇದ್ದರು.