ಸರ್ಕಾರದ ಮೂಲಧ್ಯೇಯ ಜನಪರ ಆಡಳಿತ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ
ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ಬನ್ನಿಮಂಟಪದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭ
  • ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು 1950ರ ಜನವರಿ 26ರಿಂದ ಜಾರಿ
ಮೈಸೂರು: ‘ಗಣರಾಜ್ಯೋತ್ಸವ’ ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ. ದೇಶದ ಶ್ರೇಷ್ಠ ಸಂವಿಧಾನವನ್ನು ಮನಃಪೂರ್ವಕವಾಗಿ ಅಂತಃಕರಣದಿಂದ ಒಪ್ಪಿ ಸಂತಸಪಟ್ಟ ದಿನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತವು ಸ್ವಾತಂತ್ರ್ಯಗೊಂಡ ನಂತರ ಇಡೀ ದೇಶವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು 1950ರ ಜನವರಿ 26ರಿಂದ ಜಾರಿಗೆ ತರಲಾಯಿತು. ಅಂದಿನಿಂದ ಸಂವಿಧಾನ ದಿನ, ಗಣರಾಜ್ಯೋತ್ಸವ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್ ಸೇರಿದಂತೆ ಹಲವಾರು ಹೋರಾಟಗಾರರನ್ನು ನೆನೆಯುವುದರ ಜತೆಗೆ ನಮ್ಮ ದೇಶದ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರನ್ನು ಗೌರವಪೂರ್ವಕವಾಗಿ ಸದಾ ಸ್ಮರಿಸಬೇಕಿದೆ ಎಂದರು.
ಸಮಾಜದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿದ್ದು, ನಮ್ಮ ಸರ್ಕಾರದ ಮೂಲಧ್ಯೇಯ ಜನಪರ ಆಡಳಿತ, ಆಡಳಿತ ಯಂತ್ರವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸರ್ವರ ಒಳಿತಿಗಾಗಿ ನಮ್ಮ ಸರ್ಕಾರ ಬದ್ಧ. ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ಸರ್ಕಾರದ ಮೂಲ ಧ್ಯೇಯ ಸಮಾನತೆ, ಸಾಮಾಜಿಕ ನ್ಯಾಯ. ಅದರಲ್ಲೂ ಶೋಷಿತರು, ಹಿಂದುಳಿದ ವರ್ಗದವರ ಮೂಲ ಅವಶ್ಯಕತೆ ಪೂರೈಸುವ ಆಶಯವನ್ನು ಹೊಂದಿದೆ. ಆರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅನೇಕ ಜನಪರ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, 5 ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಹವಾಗಿರುವ ಪಡಿತರ ಚೀಟಿ ಕುಟುಂಬಗಳ ಸದಸ್ಯರಿಗೆ 2023ರ ಜುಲೈಯಿಂದ 2024ರ ಡಿಸೆಂಬರ್ ತನಕ 620 ಕೋಟಿ ರೂ., 1,04,380 ಕ್ವಿಂಟಾಲ್ ಅಕ್ಕಿ ಪೂರೈಸಲಾಗುತ್ತಿದೆ. ಯುವ ನಿಧಿ ಯೋಜನೆಯಡಿ 35.71 ಕೋಟಿ ರೂ.ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ 9.60 ಲಕ್ಷ ಗ್ರಾಹಕರಿಗೆ ಗರಿಷ್ಠ 200 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ಒದಗಿಸಿ ಪ್ರತಿ ಮಾಹೆ ಸರಾಸರಿ 39.06 ಕೋಟಿ ರೂ.ಸಹಾಯ ಧನ ವೆಚ್ಚ ಭರಿಸುತ್ತಿದ್ದು, ಈ ವರೆಗೆ 1093.73 ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯ ಲಾಭವನ್ನು ಶೇ.94ರಷ್ಟು ಮಹಿಳಾ ಪ್ರಯಾಣಿಕರು ಪಡೆಯುತ್ತಿದ್ದಾರೆ. 
ಈ ವರೆಗೆ 38.58 ಕೋಟಿ ಟಿಕೆಟ್ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ 984.50 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಗೃಹಲಕ್ಷ್ಮಿಯೋಜನೆಯಡಿ ಈ ವರೆಗೆ 6,73,050 ಮಹಿಳೆಯರ ಖಾತೆಗೆ 2,000 ರೂ.ನಂತೆ 3096 ಕೋಟಿ ರೂ.ಸಂದಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನು ರಚಿಸಲು ಅಧಿಸೂಚಿಸಲಾಗಿದ್ದು, ಮೈಸೂರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಸ್ವಚ್ಛ ಸರ್ವೇಕ್ಷಣ್ 2025-26ರ ಅಡಿಯಲ್ಲಿ ಮೈಸೂರು ನಗರವು ಈಗ 7 ಸ್ಟಾರ್ ಗಾರ್ಬೇಜ್ ಫ್ರೀ ಸಿಟಿ ಪ್ರಮಾಣೀಕರಣ ಪಡೆಯುವ ಗುರಿ ಹೊಂದಿದೆ. ಪಾಲಿಕೆ ಆರ್ಥಿಕ ಸಂಪನ್ಮೂಲ ಶಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದು, 2025-26ರಲ್ಲಿ 220 ಕೋಟಿ ರೂ.ಆಸ್ತಿ ತೆರಿಗೆ ವಸೂಲು ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇ-ಸ್ವತ್ತು ಅಭಿಯಾನದಲ್ಲಿ ಮೈಸೂರು ಪಾಲಿಕೆ ಮುಂದಿದ್ದು, ಈ ವರೆಗೆ ಸುಮಾರು 60,000 ಸ್ವತ್ತುಗಳಿಗೆ ಇ-ಸ್ವತ್ತು ದಾಖಲೆ ನೀಡಿದೆ ಎಂದು ತಿಳಿಸಿದರು.
59.60 ಕೋಟಿ ರೂ. ವೆಚ್ಚದಲ್ಲಿ ಹುಣಸೂರು ತಾಲೂಕಿನಲ್ಲಿ 1 ಮೆಟ್ರಿಕ್ ಪೂರ್ವ, ಮೈಸೂರು ನಗರದಲ್ಲಿ 8 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ. ಕೆ.ಆರ್.ನಗರ, ಸಾಲಿಗ್ರಾಮದಲ್ಲಿ 2 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಭವನಗಳ ನಿರ್ಮಾಣ, ಪ್ರಗತಿ ಕಾಲನಿ, ಸ್ಮಶಾನಗಳ ಅಭಿವೃದ್ಧಿ, ವಿವಿಧ ಕಾಮಗಾರಿಗಾಗಿ 33.96 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಈವರೆಗೂ 18.76 ಕೋಟಿ ರೂ. ವೆಚ್ಚ ಮಾಡಿದೆ. ಭೌಗೊಳಿಕ ಗುರುತು ಬೆಳೆಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಬೆಳೆಗಳ ವಿಸ್ತೀರ್ಣ ಹೆಚ್ಚಿಸುವಿಕೆ, ಉತ್ಪಾದನೆಗೆ ಉತ್ತೇಜನ ನೀಡಿದ್ದು, ಮೈಸೂರು, ನಂಜನಗೂಡು ತಾಲೂಕಿನಲ್ಲಿ ಹೊಸ ಪ್ರದೇಶ ವಿಸ್ತರಣೆ, ತರಬೇತಿ ಆಯೋಜಿಸಲಾಗಿದೆ. ಈ ಬೆಳೆಗಳನ್ನು ಹೊರ ದೇಶಗಳಿಗೆ ರಫ್ತು ಮಾಡಲು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೈಜೋಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸದ ಸುನೀಲ್ ಬೋಸ್, ಶಾಸಕ ತನ್ವೀರ್ ಸೇಠ್, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net