ವಿದ್ಯಾರ್ಥಿಗಳ ಸಾಹಸಕ್ಕೆ ಮನಸೋತ ಪ್ರೇಕ್ಷಕರು

ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ 68ನೇ ವಾರ್ಷಿಕ ಈಜು ಸ್ಪರ್ಧಾ ದಿನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಈಜುಕೊಳದಲ್ಲಿ ಪಿರಮಿಡ್ ಆಕೃತಿ ನಿರ್ಮಿಸಿ ಗಮನ ಸೆಳೆದರು.
ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ 68ನೇ ವಾರ್ಷಿಕ ಈಜು ಸ್ಪರ್ಧಾ ದಿನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಈಜುಕೊಳದಲ್ಲಿ ಪಿರಮಿಡ್ ಆಕೃತಿ ನಿರ್ಮಿಸಿ ಗಮನ ಸೆಳೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಗಮನ ಸೆಳೆದ ಈಜು ಸ್ಪರ್ಧೆ
ನೀರಿನಲ್ಲಿ ಮೀನಿನಂತೆ ಈಜುತ್ತಾ, ವೇಗವಾಗಿ ಚಲಿಸಿ, ಪಿರಮಿಡ್ ಆಕೃತಿ ನಿರ್ಮಿಸಿ, ಎತ್ತರದಿಂದ ನೀರಿಗೆ ಧುಮುಕಿದ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.
ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ನಡೆದ 68ನೇ ವಾರ್ಷಿಕ ಈಜು ಸ್ಪರ್ಧಾ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಈಜಿನ ವಿವಿಧ ಪ್ರಕಾರಗಳು ಹಾಗೂ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸುಮಾರು 10 ಅಡಿ ಆಳದ ನೀರಿನಲ್ಲಿ ತೇಲುತ್ತಾ ಒಬ್ಬರ ಮೇಲೆ ಮತ್ತೊಬ್ಬರು ನಿಂತು ಪಿರಮಿಡ್ ನಿರ್ಮಿಸಿದ ಅಚ್ಚರಿ ಮೂಡಿಸಿದರು. ಒಬ್ಬ ಈಜುಗಾರನ ಮೇಲೆ ಮತ್ತೊಬ್ಬರು ಹತ್ತಿ ಇಬ್ಬರೂ ಒಟ್ಟಾಗಿ ಸುಮಾರು 10 ಅಡಿ ಎತ್ತರದಿಂದ ನೀರಿಗೆ ಧುಮುಕಿದಾಗ ಸಭಿಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಎತ್ತರದಿಂದ ನೀರಿಗೆ ಧುಮುಕಿದ ವಿದ್ಯಾರ್ಥಿಯೊಬ್ಬ ಸುಮಾರು 33 ಮೀಟರ್ ದೂರ ನೀರಿನೊಳಗೆ ಈಜಿ, ಮತ್ತೊಂದು ದಡದಲ್ಲಿ ನೀರಿನ ಮೇಲಕ್ಕೆ ಕಾಣಿಸಿಕೊಂಡಾಗ ಪ್ರೇಕ್ಷಕರಿಂದ ಭರ್ಜರಿ ಕರತಾಡನ ವ್ಯಕ್ತವಾಯಿತು. ಗುಂಪಿನಲ್ಲಿ ಕಾರಂಜಿಯಂತೆ ನೀರು ಚಿಮ್ಮಿಸುತ್ತಾ ನೀಡಿದ ಪ್ರದರ್ಶನವೂ ಗಮನ ಸೆಳೆಯಿತು.
ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಕ್ಕೆ ಮಧುರ ಗೀತೆಗಳನ್ನು ನುಡಿಸಿದ ಬ್ಯಾಂಡ್ ತಂಡ ಸಾಥ್ ನೀಡಿತು. ಮಿಲಿಟರಿ ಬ್ಯಾಂಡ್ ನೆನಪಿಸುವಂತೆ ಬ್ಯಾಂಡ್ ವಾದ್ಯಗಳ ನಾದ ಮೊಳಗುತ್ತಿದ್ದರೆ, ವಿದ್ಯಾರ್ಥಿಯೊಬ್ಬ ನೀಡಿದ ವೀಕ್ಷಕ ವಿವರಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಶ್ರೀರಾಮಕೃಷ್ಣ ವಿದ್ಯಾಶಾಲೆಯ ಈಜುಕೊಳವನ್ನು 1957ರ ಸೆ.21ರಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಉದ್ಘಾಟಿಸಿದ್ದರು. 3ರಿಂದ 12 ಅಡಿವರೆಗೆ ಆಳ ಹೊಂದಿರುವ ಈಜುಕೊಳದಲ್ಲಿ 68ನೇ ವಾರ್ಷಿಕ ಈಜುಕೂಟ ನಡೆಯಿತು. ಕಾರ್ಯಕ್ರಮವನ್ನು ಮೆರ್ಕ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಎಸ್.ಶ್ರೀನಾಥ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದು ನನಗೆ ಅತ್ಯಂತ ಸಂತಸದ ದಿನ. ಮುಖ್ಯ ಅತಿಥಿಯಾಗಿ ಭಾಗವಹಿಸಲು ಅವಕಾಶ ನೀಡಿದ್ದಕ್ಕೆ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅದ್ಭುತ ತರಬೇತಿ ಹಾಗೂ ಅವರ ಕೌಶಲವನ್ನು ಕಣ್ಣಾರೆ ನೋಡುವ ಸೌಭಾಗ್ಯ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಕ್ರೀಡೆ, ಈಜು, ಬ್ಯಾಂಡ್ ಸೇರಿದಂತೆ ವಿವಿಧ ತರಬೇತಿಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ವಿಕಾಸಕ್ಕೆ ಶಾಲೆ ಒತ್ತು ನೀಡುತ್ತಿರುವುದು ವಿಶೇಷ ಎಂದರು.
ಸ್ವಾಮಿ ಮುಕ್ತಿದಾನಂದ, ಸ್ವಾಮಿ ಯುಕ್ತೇಶಾನಂದ, ಸ್ವಾಮಿ ಮಹಿಪಾಲಾನಂದ, ಸ್ವಾಮಿ ಮಹಾಮೇಧಾನಂದ, ವಿದ್ಯಾಶಾಲೆಯ ಪ್ರಾಂಶುಪಾಲ ಟಿ.ಕೆ.ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net