ವಿಜ್ಞಾನದ ಪ್ರಗತಿ ಮಾನವ ನಾಗರಿಕತೆಗೆ ಮೂಲಾಧಾರ

ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಉದ್ಘಾಟಿಸಿದರು. ಡಾ.ಎಂ.ಪ್ರಭು, ಡಾ.ಗಣೇಶ್ ನಾಗರಾಜು, ಡಾ. ಚೇತನ್ ಕುಮಾರ್ ಇನ್ನಿತರರಿದ್ದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಉದ್ಘಾಟಿಸಿದರು. ಡಾ.ಎಂ.ಪ್ರಭು, ಡಾ.ಗಣೇಶ್ ನಾಗರಾಜು, ಡಾ. ಚೇತನ್ ಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿಕೆ
  • ಆರೋಗ್ಯ ಮತ್ತು ರೋಗಗಳ ನಿಯಂತ್ರಣದಲ್ಲಿ ನವೀನ ಪ್ರಗತಿ ಕುರಿತ ವಿಚಾರ ಸಂಕಿರಣ
ಮೈಸೂರು: ಕೃತಕ ಬುದ್ಧಿಮತ್ತೆ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗಳು ರೋಗ ನಿರ್ಣಯ ಹಾಗೂ ಚಿಕಿತ್ಸಾ ವಿಧಾನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿವೆ. ಇದರಿಂದ ನಿಖರ ವೈದ್ಯಕೀಯ ಆರೋಗ್ಯ ಸೇವೆ ಸಾಧ್ಯವಾಗುತ್ತಿದೆ ಎಂದು ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿದರು.
ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ವತಿಯಿಂದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಆರೋಗ್ಯ ಮತ್ತು ರೋಗಗಳ ನಿಯಂತ್ರಣದಲ್ಲಿ ನವೀನ ಪ್ರಗತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಆರೋಗ್ಯ ವಿಜ್ಞಾನವು ಕರುಣೆ, ಹೊಣೆಗಾರಿಕೆ ಮತ್ತು ಸಮಾಜಸೇವೆಯ ಪ್ರತೀಕವಾಗಿದೆ. ಜೀವ ರಸಾಯನ ಶಾಸ್ತ್ರ, ಜನ್ಯಶಾಸ್ತ್ರ, ರೋಗನಿರೋಧಕ ಶಾಸ್ತ್ರ, ಡೇಟಾ ಸೈನ್ಸ್ ಮತ್ತು ಕ್ಲಿನಿಕಲ್ ಸಂಶೋಧನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕ್ಯಾನ್ಸರ್, ನರ ಕ್ಷಯ ರೋಗಗಳು ಮತ್ತು ಸೋಂಕುಗಳಂತಹ ಸಮಸ್ಯೆಗಳು ಸಹಕಾರಾತ್ಮಕ ವೈಜ್ಞಾನಿಕ ಪ್ರಯತ್ನ ಬೇಡುತ್ತವೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ಧೈರ್ಯ, ಕುತೂಹಲ ಮತ್ತು ಸಮರ್ಪಣೆಯಿಂದ ವೈಜ್ಞಾನಿಕ ಸವಾಲು ಎದುರಿಸಬೇಕು ಎಂದರು.
ವಿಜ್ಞಾನವು ಯಾವಾಗಲೂ ಮಾನವನ ನಾಗರಿಕತೆಗೆ ಮೂಲಾಧಾರ. ಮಾನವನ ನಾಗರಿಕತೆಯ ಮೂಲಸ್ತಂಭವೇ ವಿಜ್ಞಾನವಾಗಿದೆ. ಸೂಕ್ಷ್ಮಜೀವಿಗಳ ಅನ್ವೇಷಣೆಯಿಂದ ಹಿಡಿದು ಇಂದಿನವರೆಗೆ ನಡೆದಿರುವ ಜೈವಿಕ ವೈದ್ಯ ವಿಜ್ಞಾನದ ಪಯಣವು ಮಾನವನ ಜ್ಞಾನಾನ್ವೇಷಣೆಯ ಹಾಗೂ ಉತ್ತಮ ಜೀವನ ಮಟ್ಟದ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ವೈಜ್ಞಾನಿಕ ಕನಸುಗಳು ಕಲ್ಪನೆಗಳಲ್ಲ, ಅವು ಭವಿಷ್ಯದ ನಕ್ಷೆಗಳು ಎಂದರು.
ಜೈವಿಕ ವೈದ್ಯ ವಿಜ್ಞಾನದ ಪರಿವರ್ತನೆಯ ಪಯಣ ಸುದೀರ್ಘವಾದದ್ದು, ಇಂದು ಮಾನವನ ಆರೋಗ್ಯ ಸುಧಾರಣೆ ಮತ್ತು ರೋಗಗಳ ಅರಿವು ಮಹತ್ವಪೂರ್ಣ ಹಾಗೂ ಅತ್ಯಂತ ಜರೂರಿನ ಪ್ರಕ್ರಿಯೆಯಾಗಿದೆ. ವೈಜ್ಞಾನಿಕ ನಾವೀನ್ಯತೆಗೆ ಕುತೂಹಲವೇ ಚಾಲಕಶಕ್ತಿ. ಲಸಿಕೆಗಳು, ರೋಗ ಪತ್ತೆ ಹಚ್ಚುವ ನಿರ್ಣಾಯಕ ಉನ್ನತ ಸಾಧನಗಳು ಮತ್ತು ಜೀವ ರಕ್ಷಕ ಚಿಕಿತ್ಸಾ ವಿಧಾನಗಳಂತಹ ಪ್ರಮುಖ ಸಾಧನೆಗಳು ವೈದ್ಯಕೀಯ ವಿಜ್ಞಾನದಲ್ಲಿ ಹುಟ್ಟಿಕೊಂಡ ಪ್ರಶ್ನೆಗಳಿಂದಲೇ ಸಾಧ್ಯವಾಗಿವೆ ಎಂದು ಹೇಳಿದರು. 
ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಮಾನವ ಕುಲವು ವೇಗವಾಗಿ ವೈಜ್ಞಾನಿಕ ಪ್ರಗತಿ ಮತ್ತು ಜಾಗತಿಕ ಆರೋಗ್ಯ ಸವಾಲು ಎದುರಿಸಲು ಸಜ್ಜಾಗಬೇಕು. ಈ ಸಮಯದಲ್ಲಿ ಇಂತಹ ವಿಚಾರಸಂಕಿರಣಗಳು ಜ್ಞಾನ ವಿನಿಮಯ, ಸಹಕಾರ ಮತ್ತು ನವೀನ ಆವಿಷ್ಕಾರಗಳಿಗೆ ನೂತನ ವೇದಿಕೆಯಾಗುತ್ತವೆೆ. ಆರೋಗ್ಯವೆಂದರೆ ಕೇವಲ ರೋಗದ ವಿರುದ್ಧ ದೇಹವನ್ನು ಸುಸ್ಥಿತಿಯಲ್ಲಿಡುವುದಷ್ಟೇ ಅಲ್ಲ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಪರಿಸರದ ಸಮತೋಲನ ಒಳಗೊಂಡ ಚೈತನ್ಯಮಯ ಸ್ಥಿತಿ. ರೋಗಗಳ ಜನ್ಯ ಸ್ಥಿತಿ ಮತ್ತು ಸೂಕ್ಷ್ಮಮಟ್ಟದಲ್ಲಿ ರೋಗವನ್ನು ಅರಿಯುವಲ್ಲಿ ಈ ವೈಜ್ಞಾನಿಕ ಬೆಳವಣಿಗೆ ಮಹತ್ವದ್ದಾಗಿದೆ. ಮನುಷ್ಯನಿಗೆ ಆರೋಗ್ಯವೇ ದೊಡ್ಡ ಸಂಪತ್ತು. ಅದನ್ನು ಕಾಪಾಡಿಕೊಳ್ಳಬೇಕು. ಯುವ ಸಂಶೋಧಕರು ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಗಣೇಶ್ ನಾಗರಾಜು ಮಾತನಾಡಿ, ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದೆ. ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಂಸ್ಥೆ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಪ್ರಮುಖ ರಾಷ್ಟ್ರೀಯ ವೇದಿಕೆಯಾಗಿದೆ ಎಂದರು.
ವಾರ್ಷಿಕ ವಿಜ್ಞಾನ ಕಾಂಗ್ರೆಸ್ ಅಧಿವೇಶನಗಳ ಮೂಲಕ ವಿಜ್ಞಾನಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಲು ಅವಕಾಶ ಒದಗಿಸುತ್ತದೆ. ಯುವ ವಿಜ್ಞಾನಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಹಾಗೂ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಬೆಂಬಲ ನೀಡುತ್ತಿದೆ ಎಂದರು.ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚೇತನ್ ಕುಮಾರ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net