ಕನ್ನಡ ಸಾಹಿತ್ಯದ ವಿಶಿಷ್ಟ ಪರಿಸರ ಪ್ರೇಮಿ ತೇಜಸ್ವಿ

  ಮೈವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಕಥನಗಳಲ್ಲಿ ಪರಿಸರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು. ಪ್ರೊ.ಜಿ.ವಿ.ವೆಂಕಟರಮಣ, ಪ್ರೊ.ಎಸ್.ಚಂದ್ರಕಿರಣ್ ಕುಳವಾಡಿ, ರೋಹಿತ್ ಅಗರಸಹಳ್ಳಿ, ಪ್ರೊ.ಎನ್.ಎಸ್ ರಾಜು ಇತರರು ಇದ್ದರು.
ಮೈವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಕಥನಗಳಲ್ಲಿ ಪರಿಸರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು. ಪ್ರೊ.ಜಿ.ವಿ.ವೆಂಕಟರಮಣ, ಪ್ರೊ.ಎಸ್.ಚಂದ್ರಕಿರಣ್ ಕುಳವಾಡಿ, ರೋಹಿತ್ ಅಗರಸಹಳ್ಳಿ, ಪ್ರೊ.ಎನ್.ಎಸ್ ರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ವಿವಿ ಕುಲಸಚಿವ ಪ್ರೊ.ಜಿ.ವಿ.ವೆಂಕಟರಮಣ ಅಭಿಮತ
  • ಪೂರ್ಣಚಂದ್ರ ತೇಜಸ್ವಿ ಕಥನಗಳಲ್ಲಿ ಪ್ರಕೃತಿ ಕುರಿತ ಉಪನ್ಯಾಸ
ಮೈಸೂರು: ಮನುಷ್ಯ ಪರಿಸರದೊಂದಿಗೆ ಹೇಗೆ ಸಾಮರಸ್ಯದಿಂದ ಬದುಕಬೇಕು ಎಂಬುದಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಬದುಕು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಮಂಡ್ಯ ವಿವಿ ಕುಲಸಚಿವ ಪ್ರೊ.ಜಿ.ವಿ.ವೆಂಕಟರಮಣ ಹೇಳಿದರು. 
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ಮೈವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಕಥನಗಳಲ್ಲಿ ಪರಿಸರ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
 ಅವರು ಕನ್ನಡ ಸಾಹಿತ್ಯದ ವಿಶಿಷ್ಟ ಪರಿಸರ ಪ್ರೇಮಿ. ಕಾದಂಬರಿಕಾರ ಮತ್ತು ನಿಸರ್ಗವಾದಿ. ಪರಿಸರವನ್ನು ಕೇವಲ ವರ್ಣಿಸದೆ, ಅದರ ಭಾಗವಾಗಿ ಬದುಕಿದವರು ತೇಜಸ್ವಿ. ಪ್ರಕೃತಿಯು ನಮ್ಮ ಬದುಕಿನ ಭಾಗ ಮಾತ್ರವಲ್ಲ, ನಾವು ಪ್ರಕೃತಿಯ ಒಂದು ಭಾಗ ಎಂಬ ತತ್ವವನ್ನು ಸಾರಿದರು.
 ಮಲೆನಾಡಿನ ನಿಸರ್ಗ, ಪಕ್ಷಿಗಳು, ಪ್ರಾಣಿಗಳು ಮತ್ತು ಸಹಜ ಕೃಷಿಯ ಕುರಿತ ಅವರ ಬರಹಗಳು ಪರಿಸರ ಪ್ರಜ್ಞೆಯನ್ನು ಮೂಡಿಸುತ್ತವೆ. ಮನುಷ್ಯನ ಅಸ್ತಿತ್ವ ಉಳಿದಿರುವುದೇ ಪರಿಸರದ ಉಳಿಯುವಿಕೆಯಿಂದ. ಆದ್ದರಿಂದ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು. 
 ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪ್ರೊ.ಎಸ್.ಚಂದ್ರಕಿರಣ್ ಕುಳವಾಡಿ ಮಾತನಾಡಿ, ಪ್ರಕೃತಿಯನ್ನು ತೇಜಸ್ವಿ ಅವರಷ್ಟು ಪ್ರೀತಿಸಿದವರನ್ನು ನೋಡಿಲ್ಲ. ತಮ್ಮ ಬದುಕು ಬರಹದ ಮೂಲಕ ಅವರು ಹೆಸರು ಮಾಡಿದವರು.
 ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ, ಲಾಭ ಪಡೆಯುವ ಪ್ರಯತ್ನ ಮಾಡಿಲ್ಲ. ಎಲ್ಲರೂ ತೇಜಸ್ವಿಯವರಾಗಲು ಸಾಧ್ಯವಿಲ್ಲ. ಆದರೆ, ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು. 
ಕನ್ನಡ ಉಪನ್ಯಾಸಕ ರೋಹಿತ್ ಅಗರಸಹಳ್ಳಿ ಮಾತನಾಡಿ, ಬದುಕುವ ರೀತಿಯಲ್ಲಿ ಪರಿಸರದ ಬಗ್ಗೆ ಅರಿಯಬೇಕು. ತೇಜಸ್ವಿ ಅವರ ಮೊದಲ ಕಥೆಯಿಂದ ಹಿಡಿದು ಕೊನೆಯವರೆಗೂ ಪರಿಸರದ ಬಗ್ಗೆ ಆಸಕ್ತಿ ಕೂಡ ಹೊಂದಿದ್ದರು ಎಂದರು.
ಮೈವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್.ರಾಜು, ಹಾಸನ ಜಿಲ್ಲೆಯ ಆಲೂರಿನ ಕನ್ನಡ ಉಪನ್ಯಾಸಕ ರೋಹಿತ್ ಅಗರಸಹಳ್ಳಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಡಾ.ಎನ್.ಯೋಗೇಶ್, ಜಿಲ್ಲಾ ಸಂಚಾಲಕರಾದ ಡಾ.ಶಭಾನಾ ಮೈಸೂರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net