ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಿ

ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಿರ್ಲೆ ವಲಯದ ಎಲ್ಲ ಸ್ವಸಾಯ ಸಂಘಗಳು ಮತ್ತು ಒಕ್ಕೂಟದ ಸದಸ್ಯರು, ಸತ್ಯನಾರಾಯಣ ಸಮಿತಿ ಸದಸ್ಯರು ಇದ್ದರು.
ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಿರ್ಲೆ ವಲಯದ ಎಲ್ಲ ಸ್ವಸಾಯ ಸಂಘಗಳು ಮತ್ತು ಒಕ್ಕೂಟದ ಸದಸ್ಯರು, ಸತ್ಯನಾರಾಯಣ ಸಮಿತಿ ಸದಸ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಾಳನಹಳ್ಳಿ ಮಠದ ಮಾತಾಜಿ ಜಯದೇವಿ ಸಲಹೆ
  • ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ
ಸಾಲಿಗ್ರಾಮ: ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಬಳಸಿ ಪ್ರತಿಯೊಬ್ಬ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವ ಜವಾಬ್ದಾರಿ ಪಾಲಕರದ್ದು ಎಂದು ಲಾಳನಹಳ್ಳಿ ಮಠದ ಮಾತಾಜಿ ಜಯದೇವಿ ತಿಳಿಸಿದರು.
ಸಾಲಿಗ್ರಾಮ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ವತಿಯಿಂದ ಮಿರ್ಲೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಜನರ ಮೇಲೆ ವಿಶ್ವಾಸ ಹಾಗೂ ದೇವರ ಮೇಲೆ ನಂಬಿಕೆ ಬರಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಧರ್ಮಸ್ಥಳ ಸಂಘಗಳು ನಡೆಸುವ ಕಾರ್ಯಕ್ರಮದ ಅಂಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮನುಷ್ಯ ಜೀವನದಲ್ಲಿ ಸಂಪಾದನೆ ಮಾಡಬೇಕಾಗಿರುವುದು ಪ್ರೀತಿ, ವಿಶ್ವಾಸ ಮತ್ತು ಸ್ನೇಹ. ಇವುಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಕುಟುಂಬ ನಿರ್ವಹಣೆ ಮತ್ತು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಲು ಶಿಕ್ಷಣ ಬಹು ಮುಖ್ಯ. ಹಾಗಾಗಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಜತೆಗೆ ಸಂಸ್ಕಾರವನ್ನೂ ಕಲಿಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಡಾ.ವೀರೇಂದ್ರ ಹೆಗ್ಗಡೆ ಅವರು ನಿರುದ್ಯೋಗಿಗಳ ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಾಲ ಸೌಲಭ್ಯ, ಸ್ವ ಉದ್ಯೋಗ ತರಬೇತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಇದರಿಂದ ಸಾಕಷ್ಟು ಜನ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಿರ್ಲೆ ವಲಯದ ಸ್ವಸಾಯ ಸಂಘಗಳು ಮತ್ತು ಒಕ್ಕೂಟದ ಸದಸ್ಯರು, ಸತ್ಯನಾರಾಯಣ ಸಮಿತಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net