ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಟಿಸಿಎಸ್ ಮತ್ತು ಬೋರ್ಡ್ ಫಾರ್ ಐಟಿ ಎಜುಕೇಷನ್ ಸ್ಟಾಂಡರ್ಡ್ಸ್ ವತಿಯಿಂದ ವಾರ್ಷಿಕ ಐಟಿ ಕ್ವಿಜ್ ಟಿಸಿಎಸ್ ಟೆಕ್- ಬೈಟ್ಸ್

 ಐಟಿ ಕ್ವಿಜ್‌
ಐಟಿ ಕ್ವಿಜ್‌
Published on

ಪ್ರಮುಖ ಮುಖ್ಯಾಂಶಗಳು

  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ‘ಬೈಟ್ಸ್' ಸಹಯೋಗ
  • ಐಟಿ ಕ್ವಿಜ್‌ ನ 17ನೇ ಆವೃತ್ತಿಯು ವಿದ್ಯಾರ್ಥಿಗಳ ಹೊಸ ಕಾಲದ ತಂತ್ರಜ್ಞಾನ ಜ್ಞಾನವನ್ನು ಪರೀಕ್ಷಿಸಲಿದೆ
  • ಐಟಿ ಕ್ವಿಜ್‌ ಗೆ ನೊಂದಣಿ ಆರಂಭ
ಮೈಸೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ‘ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್’ (ಬೈಟ್ಸ್) ಜಂಟಿಯಾಗಿ ಆಯೋಜಿಸುವ ಪ್ರತಿಷ್ಠಿತ ಎಂಜಿನಿಯರಿಂಗ್ ಐಟಿ ಕ್ವಿಜ್ ‘ಟಿಸಿಎಸ್ ಟೆಕ್-ಬೈಟ್ಸ್' ನ 17ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಈ ಕ್ವಿಜ್ ಗೆ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು (ಬಿಇ/ ಬಿಟೆಕ್) ತಮ್ಮ ತಾಂತ್ರಿಕ ಜ್ಞಾನ ಪ್ರದರ್ಶಿಸಬಹುದು.
ಕಳೆದ 16 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಕ್ವಿಜ್, ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಟ್ರೆಂಡ್ ಗಳು ಮತ್ತು ಕೈಗಾರಿಕಾ ಅನ್ವಯಗಳ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಇಂದಿನ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಆಧಾರಿತ ಉದ್ಯಮದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ವಿನೂತನ ತಾಂತ್ರಿಕ ಕ್ಷೇತ್ರಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆ ಮೂಲಕ ಇಂದಿನ ವೇಗವಾಗಿ ಬೆಳೆಯುತ್ತಿರುವ, ತಂತ್ರಜ್ಞಾನ ಆಧರಿತ ಉದ್ಯಮದಲ್ಲಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಶಕ್ತರನ್ನಾಗಿಸುವುದು ಇದರ ಉದ್ದೇಶವಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಯು ಕ್ವಿಜ್‌ ನ ಪ್ರಾದೇಶಿಕ ಹಂತದ ಫೈನಲ್‌ ನಲ್ಲಿ ಭಾಗವಹಿಸಲು 10 ತಂಡಗಳನ್ನು (ಪ್ರತಿ ತಂಡದಲ್ಲಿ 2 ವಿದ್ಯಾರ್ಥಿಗಳು) ಕಳುಹಿಸಬಹುದು. ಯಾವುದೇ ಭಾಗವಹಿಸುವಿಕೆ ಶುಲ್ಕ ಇರುವುದಿಲ್ಲ. ಪ್ರವೇಶ ಪತ್ರಗಳನ್ನು ಆಯಾ ಸಂಸ್ಥೆಗಳು ಏಪ್ರಿಲ್ 13, 2026 ರಂದು ಅಥವಾ ಅದಕ್ಕೂ ಮೊದಲು manager@bites.org.in ಗೆ ಕಳುಹಿಸಬೇಕು.
ಈ ಸ್ಪರ್ಧೆಯು ಮಂಗಳೂರು (ಏಪ್ರಿಲ್ 22), ಮೈಸೂರು (ಏಪ್ರಿಲ್ 24), ತುಮಕೂರು (ಮೇ 2) ಮತ್ತು ಬೆಂಗಳೂರಿನಲ್ಲಿ (ಮೇ 5) ನಡೆಯಲಿದೆ. ಅಂತಿಮ ಹಂತದ ಸ್ಪರ್ಧೆಯು ಮೇ 5, 2026 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಪ್ರತಿ ಪ್ರಾದೇಶಿಕ ಹಂತದ ವಿಜೇತರು ಮತ್ತು ದ್ವಿತೀಯ ಸ್ಥಾನ ಪಡೆದವರು ಕ್ರಮವಾಗಿ ₹12,000 ಮತ್ತು ₹10,000 ಮೌಲ್ಯದ ಗಿಫ್ಟ್ ವೋಚರ್‌ ಗಳನ್ನು ಪಡೆಯಲಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಇವರು ಪಡೆಯಲಿದ್ದಾರೆ. ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯ ವಿಜೇತರು ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ಕ್ರಮವಾಗಿ ₹85,000 ಮತ್ತು ₹50,000 ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿವೇತನ ಸೇರಿದಂತೆ ಇತರ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ಈ ಕ್ವಿಜ್ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅನ್ವಯಗಳು, ತಾಂತ್ರಿಕ ಪರಿಸರ, ವ್ಯವಹಾರ, ವ್ಯಕ್ತಿಗಳು, ಹೊಸ ಟ್ರೆಂಡ್ ಗಳು ಮತ್ತು ಉದ್ಯಮದ ದಂತಕಥೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಕ್ವಿಜ್ ನಲ್ಲಿ ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ತಂತ್ರಜ್ಞಾನಗಳು, ಕ್ಲೌಡ್ ಕಂಪ್ಯೂಟಿಂಗ್, ಆಟೊಮೇಷನ್, ಸೈಬರ್ ಸೆಕ್ಯೂರಿಟಿ, ಬಯೋಮೆಟ್ರಿಕ್ಸ್, ಮೊಬಿಲಿಟಿ, ರೋಬೋಟಿಕ್ಸ್, ಟೆಲಿಕಮ್ಯುನಿಕೇಶನ್, ಸೋಶಿಯಲ್ ಮೀಡಿಯಾ, ಬಿಗ್ ಡೇಟಾ, ಪ್ರಮುಖ ವ್ಯಕ್ತಿಗಳು (ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ), ಸಾಫ್ಟ್‌ ವೇರ್ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನದ ಇತಿಹಾಸದ ಕಡೆಗೆ ಗಮನ ಹರಿಸಲಾಗುತ್ತದೆ. ಅಲ್ಲದೆ, ತಂತ್ರಜ್ಞಾನವು ಗಮನಾರ್ಹ ಪ್ರಭಾವ ಬೀರಿದ ಕ್ಷೇತ್ರಗಳಾದ ಶಿಕ್ಷಣ, ಮನರಂಜನೆ, ಸಾಹಿತ್ಯ, ಮಲ್ಟಿಮೀಡಿಯಾ, ಸಂಗೀತ, ಚಲನಚಿತ್ರ, ಇಂಟರ್ನೆಟ್, ಬ್ಯಾಂಕಿಂಗ್, ಜಾಹೀರಾತು, ಕ್ರೀಡೆ, ಗೇಮಿಂಗ್, ಸೋಶಿಯಲ್ ನೆಟ್‌ ವರ್ಕಿಂಗ್ ಮತ್ತು ಮೊಬೈಲ್ ತಂತ್ರಜ್ಞಾನದ ಕುರಿತಾದ ಪ್ರಶ್ನೆಗಳನ್ನು ಇದು ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ www.bites.org.in ಗೆ ಭೇಟಿ ನೀಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net