ಸರಗೂರು:ತಾಲೂಕಿನ ಸಮಸ್ಯೆಗಳನ್ನು ಸಿಎಂ ಅವರ ಗಮನಕ್ಕೆ ತಂದು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಪಕ್ಷಭೇದ ಮರೆತು ಅಭಿವೃದ್ಧಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಅವರು, ಗ್ರಾಮದ ಕೆರೆ ತುಂಬಿಸುವ ಕಾಮಗಾರಿ ಪರೀಶೀಲಿಸಿ ಮಾತನಾಡಿದರು.
ಎತ್ತಿಗೆ ಗ್ರಾಮದ ಮುಖ್ಯ ರಸ್ತೆಗೆ ಡಾಂಬರೀಕರಣಕ್ಕೆ 30 ಲಕ್ಷ ರೂ. ಹಾಗೂ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದ್ದು ಶೀಘ್ರವೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಭರವಸೆ ನೀಡಿದರು.
ಎರಡು ತಾಲೂಕಿನಲ್ಲಿ 300 ರಿಂದ 400 ಗ್ರಾಮಗಳು ಬರುತ್ತವೆ. ನಾನು ಯಾವುದೇ ಗ್ರಾಮಗಳಿಗೆ ಮೋಸ ಮಾಡಿಲ್ಲ. ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಂದರ್ಭದಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಡರೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಗ್ರಾಪಂ ಸದಸ್ಯ ಯಶವಂತಪುರ ಶಿವಲಿಂಗಯ್ಯ ಮಾತನಾಡಿ, ನಮ್ಮ ಗ್ರಾಮಗಳು ಕಾಡಂಚಿನ ಭಾಗದಲ್ಲಿದ್ದು, ದಿನನಿತ್ಯ ಕಾಡುಪ್ರಾಣಿಗಳ ಹಾವಳಿಯಿಂದ ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದೇವೆ. ಯಾವುದೇ ಸಮಸ್ಯೆ ಎದುರಾಗಿ ಶಾಸಕರಿಗೆ ವಿಷಯ ತಿಳಿಸಿದರೆ ಪರಿಹಾರ ಮಾಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.