ನೀರು ಪೂರೈಕೆ ಮಾಡಲು ಕ್ರಮವಹಿಸಿ

ನಗರಪಾಲಿಕೆ ವಲಯ ಮೂರರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ಶ್ರೀನಿವಾಸ್, ಇಕ್ಬಾಲ್ ಆಸಿಫ್, ಸಂದೀಪ್, ಬಿ.ಎನ್.ಚಂದ್ರಶೇಖರ್ ಇದ್ದರು.
ನಗರಪಾಲಿಕೆ ವಲಯ ಮೂರರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ಶ್ರೀನಿವಾಸ್, ಇಕ್ಬಾಲ್ ಆಸಿಫ್, ಸಂದೀಪ್, ಬಿ.ಎನ್.ಚಂದ್ರಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ತಾಕೀತು
  • ಅಧಿಕಾರಿಗಳ ಸಭೆ
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ತಡೆಗಟ್ಟಲು ಅಗತ್ಯವಿರುವಷ್ಟು ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸಬೇಕು. ಹೆಚ್ಚುವರಿ ಟ್ಯಾಂಕರ್ ಬಳಕೆಗೆ ಟೆಂಡರ್ ಕರೆದು ಸಜ್ಜಾಗುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಪಾಲಿಕೆ ವಲಯ-3 ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹೂಟಗಳ್ಳಿ, ಕೂರ್ಗಳ್ಳಿ, ಬೆಳವಾಡಿ ಭಾಗಗಳಲ್ಲಿ ಬೋರ್‌ವೆಲ್ ಸಂಪೂರ್ಣ ಬತ್ತಿ ಹೋಗಿದೆ. ಕೆಲವುಕಡೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ನಿತ್ಯ ಮನೆಗೆ ಬಂದು ದೂರು ನೀಡುತ್ತಿದ್ದಾರೆ. ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಕೆಲವು ಪ್ರದೇಶಗಳಿಗೆ ನೀರು ಕೊಡುತ್ತಿದ್ದರೂ ಹಲವು ಪ್ರದೇಶಗಳಿಗೆ ಸಮಸ್ಯೆಯಾಗಿದೆ. ತಕ್ಷಣವೇ ಅಗತ್ಯವಿರುವ ನೀರನ್ನು ಸರಬರಾಜು ಮಾಡಲು ಟ್ಯಾಂಕರ್ ಮೂಲಕ ಕೊಡಬೇಕು ಎಂದು ಸೂಚಿಸಿದರು.
ಹಳೆಯ ಉಂಡುವಾಡಿ ಯೋಜನೆ ಜಾರಿಗೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೊಂಗಳ್ಳಿ, ಮೇಳಾಪುರ, ಕೆಆರ್‌ಎಸ್ ಯೋಜನೆಗಳಿದ್ದರೂ ಮತ್ತೊಂದು ಯೋಜನೆ ಏಕೆ ಬೇಕು ಎನ್ನುವ ಮಾತನಾಡಿ ಅಧಿಕಾರಿಗಳು ಸಂಪುಟ ಚರ್ಚೆಗೆ ತಂದಿರಲಿಲ್ಲ. ನಾನು ಸಂಪುಟ ಸಭೆಯಲ್ಲಿ ಬಲವಾಗಿ ಮಾತನಾಡಿದ್ದರಿಂದ 585 ಕೋಟಿ ರೂ.ಬದಲಿಗೆ 355 ಕೋಟಿ ರೂ.ಗೆ ಒಪ್ಪಿಗೆ ನೀಡಲಾಯಿತು.ಈಗ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ಯೋಜನೆ ಕಾರ್ಯಗತವಾಗುವ ತನಕ ನಾವು ನೀರು ನಿರ್ವಹಣೆ ಮಾಡುವುದಕ್ಕೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಮೂರು ಪಂಪ್‌ಗಳನ್ನು ಅಳವಡಿಸಬೇಕು:

ಹೂಟಗಳ್ಳಿ ನಗರಸಭೆ ಸಹಾಯಕ ಇಂಜಿನಿಯರ್ ದಿಲೀಪ್ ಮಾತನಾಡಿ, ಬೆಳವಾಡಿ,ಕೂರ್ಗಳ್ಳಿ ಭಾಗಗಳಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಇದೆ. ಅಮೃತೇಶ್ವರಿನಗರ, ಕಾಲನಿಗಳಿಗೆ ಹೆಚ್ಚು ಪೂರೈಸಲಾಗುತ್ತಿಲ್ಲ. ಕೆಆರ್‌ಎಸ್ ರಸ್ತೆಯಲ್ಲಿರುವ ಪಂಪ್‌ಹೌಸ್‌ನಲ್ಲಿ ಹೆಚ್ಚುವರಿಯಾಗಿ ಮೂರು ಪಂಪ್‌ಗಳನ್ನು ಅಳವಡಿಸಿದರೆ ಸಮಸ್ಯೆ ಇತ್ಯರ್ಥವಾಗಲಿದೆ. ಈಗ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ.ಕೆಲವು ಪ್ರದೇಶಗಳಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ಕೊಡಲಾಗುತ್ತಿದೆ. ವಿಜಯನಗರ ನಾಲ್ಕನೇ ಹಂತಕ್ಕೆ ಕೊಡುತ್ತಿರುವ ನೀರಿನಲ್ಲಿ ಈ ಭಾಗಕ್ಕೆ ಒಂದು ಎಂಎಲ್‌ಡಿ ಕೊಟ್ಟರೆ ಸರಿದೂಗಿಸಬಹುದು ಎಂದು ಶಾಸಕರ ಗಮನಕ್ಕೆ ತಂದರು.
ಕಡಕೊಳ ಪಪಂ ಮುಖ್ಯಾಧಿಕಾರಿ ಎಚ್.ಆರ್.ದೀಪಾ ಮಾತನಾಡಿ, ಶಾಂತವೇರಿಗೋಪಾಲಗೌಡ ನಗರ, ಕಡಕೊಳ,ಉನ್ನತಹಳ್ಳಿ ಭಾಗಗಳಿಗೆ ಬೋರ್‌ವೆಲ್ ಕೊರೆಸಲಾಗಿದೆ.ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ರೀ ಡ್ರಿಲ್ ಮಾಡಲು ಕ್ರಮ: ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮಾತನಾಡಿ, ಒಂದು ಪ್ರದೇಶ ಬಿಟ್ಟರೆ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್‌ನಿಂದ ಕೊಡಲು ಟೆಂಡರ್ ಕರೆಯಲು ಅನುಮೋದನೆ ಪಡೆಯಲಾಗಿದೆ. ಬೋರ್‌ವೆಲ್‌ಗಳನ್ನು ರೀ ಡ್ರಿಲ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ನುಡಿದರು.

ಹೆಚ್ಚುವರಿ 3 ಪಂಪ್:

ಕರ್ನಾಟಕ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಇಕ್ಬಾಲ್ ಆಸಿಫ್ ಮಾತನಾಡಿ, ಹಳೆಯ ಉಂಡುವಾಡಿ ಯೋಜನೆಗೆ ತೊಡಕಾಗಿದ್ದ ಚಿಕ್ಕನಹಳ್ಳಿ ಗ್ರಾಮದ 14 ಎಕರೆ ಜಮೀನಿನಲ್ಲಿ ಏಳು ಎಕರೆ ಜಮೀನು ಇತ್ಯರ್ಥವಾಗಿದೆ. ಉಳಿದ ಏಳು ಎಕರೆ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಹೆಚ್ಚಿನ ಪರಿಹಾರಕ್ಕೆ ಒಪ್ಪಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. ವಿಜಯನಗರ, ಬೆಳವಾಡಿ, ಕೂರ್ಗಳ್ಳಿ ಬಡಾವಣೆಯ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಹೆಚ್ಚುವರಿಯಾಗಿ 600 ಎಚ್‌ಪಿ ಸಾಮರ್ಥ್ಯದ 3 ಪಂಪ್‌ಗಳನ್ನು ಅಳವಡಿಸಲು ಈಗಾಗಲೇ ಕಿರ್ಲೋಸ್ಕರ್ ಕಂಪನಿಗೆ ಸೂಚಿಸಲಾಗಿದೆ. ಪುಣೆಯಿಂದ ಪಂಪ್ ಬಂದ ತಕ್ಷಣವೇ ಅಳವಡಿಸಲಾಗುವುದು. ಈ ಕೆಲಸವಾದರೆ ಬೇರೆಯಾವ ಸಮಸ್ಯೆಯೂ ಬರುವುದಿಲ್ಲ ಎಂದು ಹೇಳಿದರು. ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ವಾಣಿವಿಲಾಸ ನೀರು ಸರಬರಾಜು ಅಧಿಕಾರಿಗಳ ಮೂಲಕ ಅಗತ್ಯವಿರುವ ನೀರನ್ನು ಪಡೆದರೆ ಸರಿದೂಗಿಸಬಹುದು ಎಂದು ಸಭೆಯ ಗಮನಕ್ಕೆ ತಂದರು.
ಕೇಂದ್ರ ಸರ್ಕಾರ ನೀಡುವ ಅರ್ಬನ್ ಚಾಲೆಂಜ್ ಫಂಡ್(ಯುಸಿಎಫ್) ಯೋಜನೆಯಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರು ಸೇರಿದಂತೆ ಮತ್ತಿತರ ಯೋಜನೆಗಳಿಗೆ ಅನುದಾನ ಕೊಡುತ್ತಿದ್ದಾರೆ. ಈಗಾಗಲೇ ಕ್ರಿಯಾಯೋಜನೆ,ಡಿಪಿಆರ್ ತಯಾರಿಸಿ ರುವಅಧಿಕಾರಿಗಳು ಸಲ್ಲಿಸಬೇಕು. ಒಪ್ಪಂದಕ್ಕೆ ಬೇಕಾದ ಪ್ರಕ್ರಿಯೆ ಮುಗಿಸಬೇಕು ಎಂದರು. ನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ವಲಯ 3ರ ಆಯುಕ್ತ ಸಂದೀಪ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್. ಚಂದ್ರಶೇಖರ್, ಎಇಇ ಮಧು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಸುಜಯ್,ಎ.ಎಂ.ಶ್ರೀಧರ್, ಎಚ್.ಆರ್.ದೀಪಾ, ಮಹೇಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net