ಮೈಸೂರಿನಲ್ಲಿ ಗ್ರೀನ್ ಪ್ರಾಪರ್ಟಿಗಳಿಗೆ ಟ್ಯಾಗ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸ್ನೇಹಿ ವ್ಯವಸ್ಥೆ ನಿರ್ಮಿಸುವ ಉದ್ದೇಶ
  • ನಗರ ಪಾಲಿಕೆಯಿಂದ ಯೋಜನೆ ಅನುಷ್ಠಾನ
ಸದೇಶ್ ಕಾರ್ಮಾಡ್ ಮೈಸೂರು
ಪರಿಸರ ಸ್ನೇಹಿ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ನಗರ ಪಾಲಿಕೆಯು ಗ್ರೀನ್ ಪ್ರಾಪರ್ಟಿ ಟ್ಯಾಗ್ ಯೋಜನೆ ಜಾರಿಗೊಳಿಸಿದೆ. ಮಳೆ ನೀರು ಸಂಗ್ರಹ, ಸೌರ ವಿದ್ಯುತ್ ಬಳಕೆ, ತ್ಯಾಜ್ಯ ನಿರ್ವಹಣೆ ಹಾಗೂ ಶಕ್ತಿ ಉಳಿತಾಯ ಕ್ರಮಗಳನ್ನು ಅಳವಡಿಸಿರುವ ಮನೆಗಳು, ಕಟ್ಟಡಗಳಿಗೆ ಈ ವಿಶೇಷ ಮಾನ್ಯತೆ ದೊರೆಯಲಿದೆ.
ನಗರ ಪ್ರದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ನೀರಿನ ಕೊರತೆ ಹಾಗೂ ವಿದ್ಯುತ್ ಬಳಕೆಯ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ. ನಗರೀಕರಣ ವೇಗವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಹಸಿರು ಕಟ್ಟಡಗಳ ಪರಿಕಲ್ಪನೆ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರದ ಪ್ರೋತ್ಸಾಹ, ತೆರಿಗೆ ರಿಯಾಯಿತಿ ಅಥವಾ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿದರೆ ಹೆಚ್ಚಿನ ಜನರು ಈ ಯೋಜನೆಯತ್ತ ಆಕರ್ಷಿತರಾಗುವ ಸಾಧ್ಯತೆ ಇದೆ.
ಗ್ರೀನ್ ಪ್ರಾಪರ್ಟಿ ಟ್ಯಾಗ್ ಕೇವಲ ಪರಿಸರ ಸಂರಕ್ಷಣೆಯ ಕ್ರಮವಾಗಿರದೆ, ಆಸ್ತಿಯ ಗುಣಮಟ್ಟ ಮತ್ತು ಮೌಲ್ಯ ನಿರ್ಧರಿಸುವ ಪ್ರಮುಖ ಮಾನದಂಡವಾಗುವ ಸಾಧ್ಯತೆಯೂ ಇದೆ. ಹವಾಮಾನ ಬದಲಾವಣೆ ಮತ್ತು ಸಂಪನ್ಮೂಲಗಳ ಕೊರತೆಯ ನಡುವೆಯೂ ಸುಸ್ಥಿರ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ. ಆಸಕ್ತರು https://forms.gle/mm63zdmcXDyW3byA9 ಲಿಂಕ್ ಮೂಲಕ ಯೋಜನೆಯಡಿ ಗ್ರೀನ್ ಪ್ರಾಪರ್ಟಿ ಟ್ಯಾಗ್ ಪಡೆಯಬಹುದು.

ಏನಿದು ಗ್ರೀನ್ ಪ್ರಾಪರ್ಟಿ ಟ್ಯಾಗ್:

ಪರಿಸರ ಸ್ನೇಹಿ ಸೌಲಭ್ಯಗಳನ್ನು ಅಳವಡಿಸಿಕೊಂಡಿರುವ ವಸತಿ, ವಾಣಿಜ್ಯ, ಶೈಕ್ಷಣಿಕ ಸಂಸ್ಥೆಗಳು, ಅಪಾರ್ಟ್ಮೆಂಟ್‌ಗಳು ಹಾಗೂ ಇತರೆ ಕಟ್ಟಡಗಳಿಗೆ ನೀಡುವ ವಿಶೇಷ ಪ್ರಮಾಣಪತ್ರವೇ ಗ್ರೀನ್ ಪ್ರಾಪರ್ಟಿ ಟ್ಯಾಗ್. ಈ ಟ್ಯಾಗ್ ಪಡೆದ ಕಟ್ಟಡಗಳು ಸೌರ ವಿದ್ಯುತ್ ಅಳವಡಿಕೆ, ತ್ಯಾಜ್ಯ ಮರು ಬಳಕೆ, ಉತ್ತಮ ನೀರು ನಿರ್ವಹಣೆ ಸೇರಿದಂತೆ ಕೆಲವೊಂದು ಮಾನದಂಡಗಳನ್ನು ಪೂರೈಸಿರಬೇಕು.

ಯೋಜನೆಯಿಂದ ಆಗುವ ಲಾಭಗಳೇನು?:

ಪರಿಸರ ಸ್ನೇಹಿ ಮನೆ, ಕಟ್ಟಡಗಳ ನಿರ್ಮಾಣದಿಂದ ವಿದ್ಯುತ್ ವೆಚ್ಚ ಕಡಿಮೆಯಾಗುತ್ತದೆ. ಮಳೆ ನೀರು ಸಂಗ್ರಹ ವ್ಯವಸ್ಥೆಯಿಂದ ಅಂತರ್ಜಲಮಟ್ಟ ಹೆಚ್ಚಳವಾಗುವುದರ ಜತೆಗೆ ನೀರಿನ ಕೊರತೆ ತಗ್ಗಿಸಬಹುದು. ಇದರಿಂದ ನಗರ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಪರಿಸರ ಸ್ನೇಹಿ ಮನೆಗಳು, ಕಟ್ಟಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವ ಸಾಧ್ಯತೆ ಇದೆ. ಉತ್ತಮ ಗಾಳಿ, ನೈಸರ್ಗಿಕ ಬೆಳಕು ಮತ್ತು ಕಡಿಮೆ ಮಾಲಿನ್ಯದಿಂದ ನಿವಾಸಿಗಳ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಾವಯವ ಗೊಬ್ಬರ ತಯಾರಿಕೆಗೆ ಬಳಕೆ ಮಾಡಿದರೆ ನಗರ ಪಾಲಿಕೆಗೆ ತ್ಯಾಜ್ಯ ನಿರ್ವಹಣೆಯ ವೆಚ್ಚವೂ ತಗ್ಗುತ್ತದೆ.

ಸವಾಲುಗಳು ಏನು?:

ಈ ಯೋಜನೆ ಅನುಷ್ಠಾನಕ್ಕೆ ಸವಾಲುಗಳು ಸಹ ಇವೆ. ಈ ಯೋಜನೆಗೆ ನಾಗರಿಕರು ಆಸಕ್ತಿ ತೋರುವ ಅವಶ್ಯಕತೆ ಇದೆ. ಹೂಡಿಕೆಯ ವೆಚ್ಚ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಸುವ ಅವಶ್ಯಕತೆ ಇದೆ. ಹಳೆಯ ಕಟ್ಟಡಗಳಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸುವುದು ಸವಾಲಾ ಗಬಹುದು.
ಟ್ಯಾಗ್ ಪಡೆಯಲು ಮಾನದಂಡಗಳು
* ಮೂಲದಲ್ಲಿಯೇ ಘನತ್ಯಾಜ್ಯವನ್ನು ವಿಂಗಡಣೆ ಮಾಡುತ್ತಿರಬೇಕು.
* ಹಸಿ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಿಸಿ ಗೊಬ್ಬರ ತಯಾರಿಸಿರಬೇಕು
* ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿರಬೇಕು
* ಸೌರಶಕ್ತಿ ಬಳಕೆ ಮಾಡುತ್ತಿರಬೇಕು
* ನೀರಿನ ಸಂರಕ್ಷಣೆ ಹಾಗೂ ಮರುಬಳಕೆ ಕ್ರಮಗಳನ್ನು ಅನುಸರಿಸಿರಬೇಕು
* ಹಸಿರು ಪರಿಸರ ಹಾಗೂ ಮರಗಳ ಸಂರಕ್ಷಣೆ ಮಾಡುವಂತಹ ಮಾನದಂಡಗಳನ್ನು ಅನುಸರಿಸಿರಬೇಕು.
ವಿಶ್ವದ ಕೆಲವೆಡೆ ಜನಪ್ರಿಯ
ನಗರ ಪಾಲಿಕೆಯು ಜಾರಿಗೆ ತರಲು ಉದ್ದೇಶಿಸಿರುವ ಗ್ರೀನ್ ಪ್ರಾಪರ್ಟಿ ಟ್ಯಾಗ್ ಪರಿಕಲ್ಪನೆ ದೇಶದ ಕೆಲವು ಭಾಗಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿವೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಗ್ರೀನ್ ಹೋಮ್ಸ್, ಗ್ರೀನ್ ಫ್ಯಾಕ್ಟರಿಗಳು, ಗ್ರೀನ್ ಕ್ಯಾಂಪಸ್‌ಗಳಂತಹ ಪ್ರಮಾಣೀಕರಣಗಳನ್ನು ನೀಡುತ್ತದೆ. ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಗ್ರೀನ್ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಯುಎಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಅಭಿವೃದ್ಧಿಪ ಡಿಸಿರುವ ‘ಲೀಡ್’ ವಿಶ್ವದ ಅತ್ಯಂತ ಜನಪ್ರಿಯ ಗ್ರೀನ್ ಬಿಲ್ಡಿಂಗ್ ಪ್ರಮಾಣೀಕರಣ ವ್ಯವಸ್ಥೆಗಳಲ್ಲಿ ಒಂದಾಗಿದೆ. ಲೀಡ್ ಪ್ರಮಾಣಪತ್ರ ಪಡೆದ ಕಟ್ಟಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಮತ್ತು ಬೇಡಿಕೆ ದೊರೆಯುತ್ತದೆ. ಸಿಂಗಾಪುರದಲ್ಲಿ ಬಿಲ್ಡಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಅಥಾರಿಟಿ ಜಾರಿಗೊಳಿಸಿರುವ ಗ್ರೀನ್ ಮಾರ್ಕ್ ಯೋಜನೆ ಬಹಳ ಯಶಸ್ವಿಯಾಗಿದ್ದು, ಹೊಸ ಕಟ್ಟಡಗಳಲ್ಲಿ ಶಕ್ತಿ ದಕ್ಷತೆ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸಿಂಗಾಪುರದ ಗ್ರೀನ್ ಮಾರ್ಕ್, ಅಮೆರಿಕದ ಲೀಡ್ ಮಾದರಿಯ ಯಶಸ್ವಿ ಯೋಜನೆಗಳ ಹಾದಿಯಲ್ಲೇ ನಗರ ಪಾಲಿಕೆಯ ಗ್ರೀನ್ ಪ್ರಾಪರ್ಟಿ ಟ್ಯಾಗ್ ಪರಿಸರ ಸ್ನೇಹಿ ನಗರಾಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಮೂಡಿಸಿದೆ.
ಪರಿಸರ ಸಂರಕ್ಷಣೆ, ಸುಸ್ಥಿರ ನಗರಾಭಿವೃದ್ಧಿ ಹಾಗೂ ಹಸಿರು ಜೀವನಶೈಲಿ ಉತ್ತೇಜಿಸುವ ಉದ್ದೇಶದಿಂದ ಗ್ರೀನ್ ಪ್ರಾಪರ್ಟಿ ಟ್ಯಾಗ್ ಯೋಜನೆ ಜಾರಿಗೊಳಿಸಲಾಗಿದೆ. ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡಿರುವ ವಸತಿ, ವಾಣಿಜ್ಯ, ಶೈಕ್ಷಣಿಕ ಸಂಸ್ಥೆಗಳು, ಅಪಾರ್ಟ್ಮೆಂಟ್‌ಗಳು ಹಾಗೂ ಇತರೆ
ಕಟ್ಟಡಗಳಿಗೆ ಗ್ರೀನ್ ಪ್ರಾಪರ್ಟಿ ಟ್ಯಾಗ್ ನೀಡಿ ಗೌರವಿಸಲಾಗುವುದು. ಆಸಕ್ತ ನಾಗರಿಕರು ಜೂ.15 ರೊಳಗೆ ನೋಂದಾಯಿಸಿಕೊಳ್ಳಬಹುದು.
ಕೆ.ಎಸ್. ಮೃತ್ಯುಂಜಯ, ಆರೋಗ್ಯಾಧಿಕಾರಿ, ನಗರ ಪಾಲಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net