ಭತ್ತದಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಸಮಗ್ರ ನಿರ್ವಹಣೆ ಕುರಿತು ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಬಿ.ಮಧುಲತಾ, ಡಾ.ಉಮಾಶಂಕರ್ ಕುಮಾರ್, ವಿಶಾಲ್, ಸ್ವಾಮಿಗೌಡ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ.ಮಧುಲತಾ ಅಭಿಪ್ರಾಯ
ಮೈಸೂರು: ಮಣ್ಣು, ನೀರಿನ ಸಂರಕ್ಷಣೆ ಸುಸ್ಥಿರ ಕೃಷಿಗೆ ಬುನಾದಿ. ಮಣ್ಣಿನ ಪರೀಕ್ಷೆ ಆಧರಿಸಿ ರೈತರು ಸಮತೋಲಿತ ಗೊಬ್ಬರ ಬಳಕೆ ಮಾಡಬೇಕು. ಸಾವಯವ ಗೊಬ್ಬರ, ಹಸಿರು ಗೊಬ್ಬರ ಮತ್ತು ಬೆಳೆ ಪರಿವರ್ತನೆ ಪದ್ಧತಿ ಅನುಸರಿಸಬೇಕೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ.ಮಧುಲತಾ ಹೇಳಿದರು.
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಭತ್ತದಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಸಮಗ್ರ ನಿರ್ವಹಣೆ ಕುರಿತು ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಉಮಾಶಂಕರ್ ಕುಮಾರ್ ಮಾತನಾಡಿ, ರೋಗ ಬಂದ ಮೇಲೆ ಚಿಕಿತ್ಸೆ ಕೊಡುವುದಕ್ಕಿಂತ ಬಿತ್ತನೆಗೆ ಮುನ್ನ ತಡೆಯುವುದೇ ಜಾಣತನ ಎಂದು ಹೇಳಿದರು.
ಭತ್ತವನ್ನು ಕಾಡುವ ಪ್ರಮುಖ ರೋಗಗಳಾದ ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ, ಕಂದುಚುಕ್ಕಿ ರೋಗ, ಉದುಬತ್ತಿ ರೋಗ, ತೆನೆ ಕವಚ ಕೊಳೆ ರೋಗಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಬೇಕು.
ಅದಕ್ಕಾಗಿ ಬಿತ್ತನೆಗೆ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಬೆಂಕಿ ರೋಗ ಮತ್ತು ಕಂದುಚುಕ್ಕಿ ರೋಗ ನಿಯಂತ್ರಣಕ್ಕೆ ಪ್ರತಿ ಕಿಲೋ ಗ್ರಾಂ ಬಿತ್ತನೆ ಬೀಜಕ್ಕೆ 0.4 ಗ್ರಾಂ ಕಾರ್ಬೆಂಡಾಜಿಂ ಅಥವಾ 3 ಗ್ರಾಂ ಟ್ರೈ ಸೈಕ್ಲೊಜಾಲ್ ಅಥವಾ ಟ್ರೈಪ್ಲಾಕ್ಸಿ ಸ್ಟ್ರೋಬಿನ್ ಬಳಸಿ ಬೀಜೋಪಚಾರ ಮಾಡಬೇಕು ಎಂದರು.
ಬ್ಯಾಕ್ಟೀರಿಯಾ ಅಂಗಮಾರಿ ರೋಗದ ತಡೆಗೆ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 0.5ಗ್ರಾಂ ಸ್ಟ್ರೆ ಪ್ಟೋಸೈಕ್ಲಿನ್ ಮಿಶ್ರಣ ಮಾಡುವುದು ಅತ್ಯಗತ್ಯ. ಬಿತ್ತನೆ ಬೀಜವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಗೋಣಿ ಚೀಲದ ಮೇಲೆ ಹರಡಿ, ನೀರು ಚಿಮುಕಿಸಿ ಸ್ವಲ್ಪ ಒದ್ದೆ ಮಾಡಿ ನಂತರ ನಿಗದಿತ ಔಷಧವನ್ನು ಹಾಕಿ ಹದವಾಗಿ ಮಿಶ್ರಣ ಮಾಡಿ 3 ರಿಂದ 8 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು. ಕಂದು ಜಿಗಿಹುಳು ಮತ್ತು ರೋಗ ಬಾಧಿತ ಪ್ರದೇಶಗಳಲ್ಲಿ ಎಂಎಂಟಿಯುಮ 1001ನಂತಹ ರೋಗ ನಿರೋಧಕ ತಳಿಗಳ ಆಯ್ಕೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಬನ್ನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಶಾಲ್ ಅವರು ರೈತರಿಗೆ ಬೆಳೆವಿಮೆ ಹಾಗೂ ಸೆಂಟ್ರಲ್ ಐ.ಡಿ. ಮಾಡಿಸಿಕೊಳ್ಳುವ ಕುರಿತು ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಸ್ವಾಮಿಗೌಡ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.
ತುರುಗನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಸನ್ನ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವರಾಮು ಇನ್ನಿತರರಿದ್ದರು.