ಕೃಷಿಗೆ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಸಿ

ತಿ.ನರಸೀಪುರ ಪಟ್ಟಣದ ಸೆಸ್ಕ್ ಉಪವಿಭಾಗದ ಕಚೇರಿ ಮುಂಭಾಗ  ರೈತರು ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಕಿರಗಸೂರು ಶಂಕರ್, ಗೌರಿಶಂಕರ್, ಕುರುಬೂರು ಸಿದ್ದೇಶ್, ಕೆ.ಜಿ.ನಾಗರಾಜು, ಬಿ.ಪಿ.ಪರಶಿವಮೂರ್ತಿ, ಕರುಹಟ್ಟಿ ಉಮೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ್ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಸೆಸ್ಕ್ ಉಪವಿಭಾಗದ ಕಚೇರಿ ಮುಂಭಾಗ ರೈತರು ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಕಿರಗಸೂರು ಶಂಕರ್, ಗೌರಿಶಂಕರ್, ಕುರುಬೂರು ಸಿದ್ದೇಶ್, ಕೆ.ಜಿ.ನಾಗರಾಜು, ಬಿ.ಪಿ.ಪರಶಿವಮೂರ್ತಿ, ಕರುಹಟ್ಟಿ ಉಮೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ್ ಇತರರು ಇದ್ದರು.
Published on
ತಿ.ನರಸೀಪುರ: ಸರ್ಕಾರ ಘೋಷಿಸಿರುವಂತೆ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯವೂ ಏಳು ಗಂಟೆ ಕಾಲ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿ ಮುಂಭಾಗ ಬುಧವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದ ಆವರಣದಲ್ಲಿ ಜಮಾವಣೆಗೊಂಡಿದ್ದ ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಪೊಲೀಸ್ ಠಾಣೆ ಹಾಗೂ ಕಾಲೇಜು ರಸ್ತೆ ಮಾರ್ಗವಾಗಿ ಪಾದಯಾತ್ರೆ ಮೂಲಕ ಸೆಸ್ಕ್ ಕಚೇರಿಗೆ ಆಗಮಿಸಿ ಪ್ರತಿಭಟಿಸಿದರು.
ತಾಲೂಕು ಮಾಜಿ ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಸರ್ಕಾರವೇ ಏಳು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದ್ದರೂ ತಾಲೂಕಿನ ಹಲವು ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗೆ ದಿನಕ್ಕೆ ಎರಡರಿಂದ ನಾಲ್ಕು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ. ಪದೇಪದೆ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ನೀರು ಹಾಯಿಸಲಾಗದೆ ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳು ಒಣಗುವ ಸ್ಥಿತಿಯಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ರಾತ್ರಿ ವೇಳೆ ವಿದ್ಯುತ್ ಪೂರೈಕೆಯಾಗುವುದರಿಂದ ರೈತರು ಕತ್ತಲಿನಲ್ಲಿ ಜಮೀನಿಗೆ ತೆರಳಿ ನೀರು ಹಾಯಿಸಬೇಕಾಗಿದ್ದು, ಹಾವು, ಚೇಳು ಸೇರಿದಂತೆ ವಿಷಕಾರಿ ಜೀವಿಗಳ ಅಪಾಯ ಎದುರಿಸುತ್ತಿದ್ದಾರೆ. ಕೈಗಾರಿಕೆ ಹಾಗೂ ಕಾರ್ಖಾನೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿರುವಾಗ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದಿರುವುದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಆದಿಬೆಟ್ಟಹಳ್ಳಿ ಮಶ್ಣೆಗೌಡ ಮಾತನಾಡಿ, ಲೈನ್ ಕ್ಲಿಯರೆನ್ಸ್, ಕಂಬ ಬಿದ್ದಿರುವುದು ಹಾಗೂ ದುರಸ್ತಿ ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಂದ ಪ್ರತಿದಿನ ವಿದ್ಯುತ್ ಕಡಿತವಾಗುತ್ತಿದೆ. ಏಳು ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗದಿದ್ದರೆ ನಾಲ್ಕು ಅಥವಾ ಐದು ಗಂಟೆ ಪೂರೈಸುವುದಾಗಿ ಸರ್ಕಾರ ಅಧಿಕೃತವಾಗಿ ತಿಳಿಸಲಿ ಎಂದು ಒತ್ತಾಯಿಸಿದರು.
ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ: ರೈತರ ಮನವಿ ಸ್ವೀಕರಿಸಿದ ನಂಜನಗೂಡು ವಿಭಾಗದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಮಹೇಶ್ ಕುಮಾರ್ ಮಾತನಾಡಿ, ರೈತರ ಸಮಸ್ಯೆಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಿದ್ಯುತ್ ಜಾಲದ ಮೇಲಿನ ಒತ್ತಡ ನಿಯಂತ್ರಿಸಲು ಕೆಲ ಸಂದರ್ಭಗಳಲ್ಲಿ ಸಂಪರ್ಕಗಳನ್ನು ಕಡಿತಗೊಳಿಸಬೇಕಾಗುತ್ತದೆ. ನಿಯಮಿತವಾಗಿ ಬಿಲ್ ಪಾವತಿಸುವ ಗ್ರಾಹಕರಿಗೂ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ ಹಾಗೂ ಕಿರಿಯ ಇಂಜಿನಿಯರ್‌ಗಳು ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಬಗ್ಗೆಯೂ ಗಮನಹರಿಸಿ, ಕರ್ತವ್ಯಲೋಪ ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಎಇಇ ವಿರೇಶ್, ಬನ್ನೂರು ಸೆಸ್ಕ್ ಎಇಇ ಹರ್ಷನ್ ಅವರಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಕಬಿನಿ ನೀರಾವರಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಗೌರಿಶಂಕರ್, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕೆ.ಜಿ.ಗುರುಸ್ವಾಮಿ, ಬಿ.ಪಿ.ಪರಶಿವಮೂರ್ತಿ, ಕರುಹಟ್ಟಿ ಉಮೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ್, ಸೋಮನಾಥಪುರ ಶೇಖರ್, ಬನ್ನಳ್ಳಿ ಹುಂಡಿ ರಾಜೇಂದ್ರ, ನಿಲಸೋಗೆ ಉಮೇಶ್, ತೊಟ್ಟವಾಡಿ ಪ್ರತಾಪ್, ವಾಟಾಳ್‌ಪುರ ಕುಮಾರ್, ಸತೀಶ್, ಕೇಬಲ್ ರಾಜು, ಬಸವಯ್ಯ, ಕುಮಾರ್ ಗೌಡ, ಕರುಹಟ್ಟಿ ರಾಮಮೂರ್ತಿ, ಆದಿಬೆಟ್ಟಹಳ್ಳಿ ರವಿ, ರಾಜಬುದ್ಧಿ, ನಂಜುಂಡಸ್ವಾಮಿ, ತರಕಾರಿ ನಿಂಗರಾಜು, ಶಾಂತರಾಜು, ಎಂ.ಪಿ. ನಾಗರಾಜು, ಕನ್ನಳ್ಳಿ ಮೋಳೆ ಮಣಿಕಂಠ, ಆದಿಬೆಟ್ಟಹಳ್ಳಿ ಮಹೇಶ್, ಮಾದೇಶ್, ರವೀಂದ್ರ, ಲೋಕೇಶ್, ನಾಗರಾಜ, ಶಿವಪ್ರಸಾದ್, ಚಿನ್ನಸ್ವಾಮಿ, ನವೀನ್ ತೊಟ್ಟವಾಡಿ ಹಾಗೂ ವೀರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net