ಮೈಸೂರು: ಪೆಟ್ರೋಕೆಮಿಕಲ್ ಮತ್ತು ಪಾಲಿಮರ್ ಉದ್ಯಮಗಳಲ್ಲಿ ತಾಂತ್ರಿಕ ಪರಿಣತಿಯುಳ್ಳ ಮಾನವ ಸಂಪನ್ಮೂಲವನ್ನು ಪೂರೈಕೆ ಮಾಡುವ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಿಪೆಟ್ ಕಾಲೇಜಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ಲಾಸ್ಟಿಕ್ ತಂತ್ರಜ್ಞಾನ ಕುರಿತು ತಿಳಿದುಕೊಂಡರು.
ರಾಸಾಯನಿಕ ಮತ್ತು ಪೆಟ್ರೊಕೆಮಿಕಲ್ಸ್ ಇಲಾಖೆಯ ಅಧೀನದ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ(ಸಿಪೆಟ್) ‘ಓಪನ್ ಹೌಸ್’ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಇಲ್ಲಿಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಕೈಗಾರಿಕಾ ಉದ್ಯೋಗಿಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿಕೊಡಲಾಯಿತು. ಮಕ್ಕಳೊಂದಿಗೆ ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನೆ ಸಹ ಮಾಡಲಾಯಿತು.
ನಗರದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಇಲ್ಲಿಯ ಪ್ರಯೋಗಾಲಯಗಳು, ಟೂಲ್ ರೂಂ, ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಅವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬದನ್ನು ಅಲ್ಲಿಯ ಪರಿಣಿತರು ತಿಳಿಸಿಕೊಟ್ಟರು.
ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಬಳಸುವ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನೂ ಮಕ್ಕಳು ವೀಕ್ಷಿಸಿದರು. ಅನುಭವಿ ಅಧ್ಯಾಪಕರು, ಕೈಗಾರಿಕಾ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಪಾಲಿಮರ್, ಪೆಟ್ರೋಕೆಮಿಕಲ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಅಗತ್ಯವಿರುವ ತಾಂತ್ರಿಕ ಪರಿಣತಿ, ಕೌಶಲವನ್ನು ಕಲ್ಪಿಸುತ್ತಿದ್ದು, ಇಲ್ಲಿಯ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಉದ್ಯಮಿಗಳಾಗಿದ್ದು, ಅವರ ಸಾಧನೆಯನ್ನು ಮಕ್ಕಳಿಗೆ ವಿವರಿಸಲಾಯಿತು.
ಪಾಲಿಮರ್ ಮತ್ತು ಪ್ಲಾಸ್ಟಿಕ್ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶ ವಿವರಿಸಲಾಯಿತು. ಸಿಪೆಟ್‌ನಲ್ಲಿರುವ ವಿವಿಧ ಡಿಪ್ಲೊಮಾ ಮತ್ತು ಉಚಿತ ಕೌಶಲಾಭಿವೃದ್ಧಿ ಕೋರ್ಸ್‌ಗಳ ಬಗ್ಗೆ ಮಾಹಿತಿ ಕೊಡಲಾಯಿತು
ತನ್ನ ಉತ್ಪನ್ನ ವಿನ್ಯಾಸ, ತಯಾರಿಕೆ, ಪ್ರಕ್ರಿಯೆ ತಂತ್ರಜ್ಞಾನ ಮತ್ತು ಗುಣಮಟ್ಟ ಪರೀಕ್ಷಾ ಸೇವೆಗಳ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಶೇಷಾದ್ರಿಪುರಂ ಕಾಲೇಜು, ಮಹಾಜನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಜ.25ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಪ್ರಾಂಶುಪಾಲ ಶ್ರೀಕಾಂತ್ ಶಿರಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಮ್ಯಾನೇಜರ್ ಬಿ.ಎನ್.ಮೋಹನ, ತಾಂತ್ರಿಕ ಅಧಿಕಾರಿ ಅನ್ಮೋಲ್ ಗುಪ್ತಾ, ವಿದ್ಯಾಸಾಗರ, ಗುಣಮಟ್ಟ ವಿಭಾಗದ ಮುಖ್ಯಸ್ಥರಾದ ಐ.ಭುವನೇಶ್ವರಿ, ರಘು ಇನ್ನಿತರರಿದ್ದರು.