ಮರ ಕಡಿಯಲು ತೀವ್ರ ವಿರೋಧ: ಸಾರ್ವಜನಿಕ ಅಹವಾಲು ಸಭೆಯಲ್ಲಿ ಅಸಮಾಧಾನ

ಹೊಸಹುಂಡಿಯಲ್ಲಿ ಮರ ಕಡಿಯುವ ಸಂಬಂಧ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿತ್ತು.
ಹೊಸಹುಂಡಿಯಲ್ಲಿ ಮರ ಕಡಿಯುವ ಸಂಬಂಧ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವುದು ಕಡೆಯ ಆಯ್ಕೆ ಆಗಲಿ. ಮೊದಲು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕು
  • ತುಂಬ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವ ಪ್ರಯತ್ನ ಮಾಡದೆ ವಿಪರೀತ ಹಣ ಖರ್ಚು ಮಾಡಲಾಗುತ್ತಿದೆ
ಮೈಸೂರು: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ರಲ್ಲಿ ದೇವಲಾಪುರ ಕ್ರಾಸ್ ಹತ್ತಿರ 48 ಮರಗಳನ್ನು ಕಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮರಗಳನ್ನು ಕಡಿಯಲು ತೀವ್ರ ವಿರೋಧ ವ್ಯಕ್ತವಾಯಿತು.
ಸಭೆಯಲ್ಲಿ ಹಾಜರಿದ್ದ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಸದಸ್ಯರು ಮತ್ತು ಸಮೀಪದ ಹೊಸಹುಂಡಿ ಗ್ರಾಮಸ್ಥರು ಇಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಯಲು ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವ ಬದಲಿಗೆ ಸಿಗ್ನಲ್ ವ್ಯವಸ್ಥೆ , ರಸ್ತೆ ಉಬ್ಬುಗಳ ನಿರ್ಮಾಣ, ಸಂಚಾರ ಚಿಹ್ನೆಗಳ ಅಳವಡಿಕೆ ಮಾಡಬೇಕು ಎಂದು ಪ್ರತಿಪಾದಿಸಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವುದು ಕಡೆಯ ಆಯ್ಕೆ ಆಗಲಿ. ಮೊದಲು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಕಾರ್ಯಕರ್ತ ಶೈಲಜೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೇಲ್ಸೇತುವೆ ನಿರ್ಮಿಸಲು ಟೆಂಡರ್ ಕರೆದು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕೊನೆಯ ಹಂತದಲ್ಲಿ ಕಾಟಾಚಾರಕ್ಕೆ ಈ ಸಭೆ ಕರೆದಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತ ರವಿಬಳೆ ಮಾತನಾಡಿ, ಅಪಘಾತಗಳನ್ನು ತಪ್ಪಿಸುವ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ತುಂಬ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವ ಪ್ರಯತ್ನ ಮಾಡದೆ ವಿಪರೀತ ಹಣ ಖರ್ಚು ಮಾಡಿ ಹೊಸ ನಿರ್ಮಾಣಗಳ ಬಗ್ಗೆ ಸರ್ಕಾರಿ ಇಲಾಖೆಗಳು ಆಸಕ್ತಿ ವಹಿಸುವುದು ಕಮಿಷನ್‌ಗಾಗಿ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಲೀಲಾ ಶಿವಕುಮಾರ್ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಎಲ್ಲೆಲ್ಲಿ ಮರಗಳನ್ನು ಕಡಿಯುತ್ತಾರೋ ಅಲ್ಲಿಗೆಲ್ಲ ಹೋಗಿ ಮರಗಳನ್ನು ಕಡಿಯುವುದನ್ನು ತಡೆಯುವುದು ನಮ್ಮ ಸಂಘಟನೆಯ ಕೆಲಸವಲ್ಲ. ಮರಗಳನ್ನು ಉಳಿಸಿಕೊಂಡು ಪರಿಸರ ಸ್ನೇಹಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಒತ್ತಾಯಿಸಿದರು.
ಸ್ಥಳೀಯರಾದ ಕೃಷ್ಣ ಮಾತನಾಡಿ, ಇಲ್ಲಿ ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವ ಅಗತ್ಯವಿಲ್ಲ. ಒಂದೇ ಒಂದು ಮರವನ್ನು ಕಡಿಯಲು ಸ್ಥಳೀಯರು ಬಿಡುವುದಿಲ್ಲ ಎಂದು ಘೋಷಿಸಿದರು.
ಮರಗಳನ್ನು ಕಡಿಯಲು ಸಭೆಯಲ್ಲಿ ವ್ಯಕ್ತವಾದ ಒಕ್ಕೊರಲಿನ ವಿರೋಧಕ್ಕೆ ಮಣಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಮರಗಳನ್ನು ಕಡಿಯುವುದು ನಮ್ಮ ಆದ್ಯತೆ ಅಲ್ಲ, ಮರಗಳನ್ನು ಉಳಿಸಿವುದು ತಮ್ಮ ಇಲಾಖೆಯ ಕರ್ತವ್ಯ ಎಂದು ಹೇಳಿದರು.
ಈ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ಕೃಢೀಕರಿಸಿ ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗುವುದು. ಮರಗಳನ್ನು ಉಳಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್.ಆರ್.ರೂಪಾ ಅವರು ಅಪಘಾತಗಳನ್ನು ತಪ್ಪಿಸಲು ಸಭೆಯಲ್ಲಿ ಸೂಚಿಸಿದ ಪರ್ಯಾಯ ಮಾರ್ಗಗಳನ್ನು ಕಾರ್ಯಗತಗೊಳಿಸಲು ಮೇಲಿನ ಅಧಿಕಾರಿಗಳಿಗೆ ತಿಳಿಸಿ, ಮೇಲ್ಸೇತುವೆ ಕಟ್ಟುವ ಯೋಜನೆ ರದ್ದುಪಡಿಸುವಂತೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು.
ಆರ್‌ಎಫ್‌ಒ ಸಂತೋಷ್‌ಹೂಗಾರ್, ಪರಿಸರಕ್ಕಾಗಿ ನಾವು ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಲೀಲಾ ವೆಂಕಟೇಶ್, ಕಾರ್ಯಕರ್ತರಾದ ಸುಬ್ಬರಾವ್, ಗಂಟಯ್ಯ, ಭಾಗ್ಯಾ, ಬಾನು ಪ್ರಶಾಂತ್, ಅಂಜನಾ, ಪ್ರಭಾ, ಗಾಯತ್ರಿ, ಗುರುಸ್ವಾಮಿ, ವಿಶ್ವನಾಥ್, ಸುಗುಣ, ಸುಶೀಲಾ, ಮಧುಶ್ರೀ, ಜಯಲಕ್ಷ್ಮಿ, ಪ್ರಭಾಕರ್, ಅಕ್ಬರ್, ರವಿಕೀರ್ತಿ, ಗಣೇಶ್, ಸಾರ್ಥಕ್ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net